ರಾಜಾಸೀಟ್‍ನಲ್ಲಿ ಜನವರಿಯಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಡಿಸಿ ಶ್ರೀವಿದ್ಯಾ ಸೂಚನೆ
ಕೊಡಗು

ರಾಜಾಸೀಟ್‍ನಲ್ಲಿ ಜನವರಿಯಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಡಿಸಿ ಶ್ರೀವಿದ್ಯಾ ಸೂಚನೆ

October 30, 2018

ಮಡಿಕೇರಿ: ಜನವರಿ ಮೊದಲ ವಾರದಲ್ಲಿ ರಾಜಸೀಟ್‍ನಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸುವಂತೆ ತೋಟಗಾರಿಕೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆ ಯಲ್ಲಿ ಸೋಮವಾರದಲ್ಲಿ ರಾಜಸೀಟ್ ಮತ್ತು ಗದ್ದುಗೆ ಉದ್ಯಾನವನ ಅಭಿವೃದ್ಧಿ ಸಂಬಂಧ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಕೊಡಗು ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಫಲಪುಷ್ಟ ಪ್ರದರ್ಶನ ಏರ್ಪಡಿಸುವಂತೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.

ರಾಜಸೀಟ್‍ನಲ್ಲಿ ಸಂಗೀತ ಕಾರಂಜಿ ಹಾಗೂ ಪುಟಾಣಿ ರೈಲು ಸ್ಥಗಿತಗೊಂಡಿದ್ದು, ಹಲವು ತಿಂಗಳಿಂದ ಸರಿಪಡಿಸುವಂತೆ ನಿರ್ದೇಶನ ನೀಡಿದರೂ ಸಹ ಯಾವುದೇ ಕಾರ್ಯಗಳು ನಡೆದಿಲ್ಲ, ಆದ್ದರಿಂದ ಶೀಘ್ರ ಸಂಗೀತ ಕಾರಂಜಿ ಹಾಗೂ ಪುಟಾಣಿ ರೈಲನ್ನು ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.

ರಾಜಸೀಟ್ ಮತ್ತು ಗದ್ದುಗೆ ನಿರ್ವಹಣೆಗಾಗಿ ಸಿಬ್ಬಂಧಿಗಳನ್ನು ನಿಯೋಜಿಸುವುದು, ಶುಚಿತ್ವಕ್ಕೆ ಒತ್ತು ನೀಡುವುದು, ಜೊತೆಗೆ ಸಮವಸ್ತ್ರದಲ್ಲಿ ಸಿಬ್ಬಂದಿಗಳು ಕಾರ್ಯನಿರ್ವಹಿಸಲು ಕ್ರಮಕೈಗೊಳ್ಳು ವುದು. ಹಾಗೆಯೇ ಹೊರ ಭಾಗದಲ್ಲಿ ರಕ್ಷಕರನ್ನು ನಿಯೋಜಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.

ನಗರದ ಗದ್ದುಗೆಯ ಉದ್ಯಾನವನ ಅಭಿವೃದ್ದಿ ಪಡಿಸಿ ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಹಾಗೆಯೇ ಮಡಿಕೇರಿ ನಗರ ಸೇರಿದಂತೆ ಜಿಲ್ಲೆಯ ನಾನಾ ಕಡೆಗಳಲ್ಲಿ ಉದ್ಯಾನವನ ನಿರ್ಮಿಸಲಾಗಿದೆ. ಆದರೆ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಈ ಬಗ್ಗೆ ಗಮನ ಹರಿಸಬೇಕು. ಉದ್ಯಾನವನದಲ್ಲಿ ಬೆಳಕಿನ ವ್ಯವಸ್ಥೆ, ಸಿಸಿಟಿವಿ ಅಳವ ಡಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಚಂದ್ರಶೇಖರ, ಹಿರಿಯ ಸಹಾಯ ನಿರ್ದೇಶಕರಾದ ದೇವಕಿ, ಪೌರಾಯುಕ್ತರಾದ ಎಂ.ಎಲ್.ರಮೇಶ್, ಲೋಕೋಪಯೋಗಿ ಇಇ ಇಬ್ರಾಹಿಂ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಜಗನ್ನಾಥ್, ಪಶು ಪಾಲನಾ ಇಲಾಖೆಯ ಉಪ ನಿರ್ದೇಶಕರಾದ ತಮ್ಮಯ್ಯ, ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿ ರೇಖಾ ಇತರರು ಹಲವು ಮಾಹಿತಿ ನೀಡಿದರು.

Translate »