ನಕ್ಸಲ್ ಮುಖಂಡ ರೂಪೇಶ್ ಮಡಿಕೇರಿ ನ್ಯಾಯಾಲಯಕ್ಕೆ ಹಾಜರು: ನಕ್ಸಲ್ ಪರ ಘೋಷಣೆ
ಕೊಡಗು

ನಕ್ಸಲ್ ಮುಖಂಡ ರೂಪೇಶ್ ಮಡಿಕೇರಿ ನ್ಯಾಯಾಲಯಕ್ಕೆ ಹಾಜರು: ನಕ್ಸಲ್ ಪರ ಘೋಷಣೆ

October 30, 2018

ಮಡಿಕೇರಿ:  ದಕ್ಷಿಣ ಭಾರತದ ನಕ್ಸಲ್ ಮುಖಂಡ ಎಂಬ ಹಣೆಪಟ್ಟಿಯೊಂದಿಗೆ ನಿಷೇಧಿತ ಮಾವೋವಾದಿ ಸಂಘಟನೆಯಲ್ಲಿ ಗುರುತಿಸಿಕೊಂಡು ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದ ಅಡಿಯಲ್ಲಿ ಬಂಧಿಸಲ್ಪಟ್ಟಿರುವ ನಕ್ಸಲ್‍ವಾದಿ ರೂಪೇಶ್‍ನನ್ನು ಮಡಿಕೇರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸೋಮವಾರ ಹಾಜರು ಪಡಿಸಲಾಯಿತು.

2010ರಲ್ಲಿ ಭಾಗಮಂಡಲ ಸಮೀಪದ ಮುಂಡ್ರೋಟು ಮತ್ತು 2013ರಲ್ಲಿ ಕಾಲೂರಿನಲ್ಲಿ ನಕ್ಸಲ್ ರೂಪೇಶ್ ಪ್ರತ್ಯಕ್ಷ ಗೊಂಡಿದ್ದ. ಮಾತ್ರವಲ್ಲದೆ ಕಾಲೂರು ನಿವಾಸಿ ಗಣೇಶ್ ಎಂಬವರ ಮನೆಯಿಂದ ದಿನಸಿ ಸಾಮಗ್ರಿಗಳನ್ನು ಬಲವಂತವಾಗಿ ಪಡೆದು ಬೆದರಿಕೆ ಒಡ್ಡಿರುವ ಹಾಗೂ ಶಸ್ತ್ರಸಜ್ಜಿತ 5 ಮಂದಿಯ ತಂಡದೊಂದಿಗೆ ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಪಾಲ್ಗೊಂಡಿರುವ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿತ್ತು. ಈ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಇದೀಗ 3ನೇ ಬಾರಿಗೆ ಮಡಿಕೇರಿಯ ನ್ಯಾಯಾಲಯಕ್ಕೆ ಹಾಜರಾದ ರೂಪೇಶ್‍ನ ವಿಚಾರಣೆಯನ್ನು ನವೆಂಬರ್ 27ಕ್ಕೆ ಮುಂದೂಡಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ವೀರಪ್ಪ.ವಿ.ಮಲ್ಲಾಪುರ ಆದೇಶಿಸಿದರು.

ನಕ್ಸಲ್ ಪರ ಘೋಷಣೆ: ಕೇರಳದ ವೈವೂರು ಸೆಂಟ್ರಲ್ ಜೈಲಿನಲ್ಲಿದ್ದ ನಕ್ಸಲ್ ವಾದಿ ರೂಪೇಶ್‍ನನ್ನು ಕೇರಳ ರಾಜ್ಯ ಭಯೋತ್ಪದನಾ ನಿಗ್ರಹ ದಳ, ಕೊಡಗು ಪೊಲೀಸ್ ಕಮಾಂಡೋ ಸಿಬ್ಬಂದಿಗಳು ಶಸ್ತ್ರ ಸಜ್ಜಿತ ಬಿಗಿ ಭದ್ರತೆಯೊಂದಿಗೆ ನ್ಯಾಯಾಲಯಕ್ಕೆ ಕರೆ ತಂದಿದ್ದರು. ವಾಹನದಿಂದ ಕೆಳಗೆ ಇಳಿಯುತ್ತಿದ್ದಂತೆಯೇ ‘ನಾನು ಕೂಡ ಮಾವೋವಾದಿ, ಮಾವೋವಾದಕ್ಕೆ ಬೆಂಬಲ ಸೂಚಿಸುವುದು ಅಪರಾಧವಲ್ಲ, ಮಾವೋವಾದಿಗಳು ಕ್ರಿಮಿನಲ್‍ಗಳಲ್ಲ, ಇನ್‍ಕ್ವಿಲಾಬ್ ಜಿಂದಾಬಾದ್, ರಾಜಕೀಯ ದುರುದ್ದೇಶದಿಂದ ಗೃಹ ಬಂಧನದಲ್ಲಿರುವ ಮಾವೋವಾದಿ ಬೆಂಬಲಿಗರಾದ ಕು. ಸುಧಾ ಭಾರಧ್ವಜ್, ವರನೋನ್ ಗೋಸ್ಲಾವಸ್, ಅರುಣ್ ಫೆರಾರಿಯ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ದೇಶದ ವಿವಿಧ ಜೈಲುಗಳಲ್ಲಿ ಬಂಧಿತರಾಗಿರುವ ಮಾವೋವಾದಿ ಬೆಂಬಲಿಗರಿಗೆ ರಾಜಕೀಯ ಕೈದಿಗಳ ಸ್ಥಾನಮಾನ ನೀಡಬೇಕು ಎಂದು ಘೋಷಣೆ ಕೂಗಿದ ನಕ್ಸಲ್‍ವಾದಿ ಆರೋಪಿ ರೂಪೇಶ್ ಬಳಿಕ ನ್ಯಾಯಾಲಯ ಒಳಾವರಣ ಪ್ರವೇಶಿಸುತ್ತಿದ್ದಂತೆಯೇ ಮೌನವಾದ.

ಕೋರ್ಟ್‍ನ ಒಳಗೆ ಹಾಜರಿದ್ದ ತನ್ನ ಪರ ವಕೀಲ ವಿದ್ಯಾಧರ ಅವರೊಂದಿಗೆ 5 ನಿಮಿಷ ಮಾತುಕತೆ ನಡೆಸಿದ ರೂಪೇಶ್, ವಿಚಾರಣೆಯ ದಿನಾಂಕವನ್ನು ಮುಂದೂಡಿದ ಬಳಿಕ ನ್ಯಾಯಾಲಯದಿಂದ ಹೊರ ಬಂದ. ನ್ಯಾಯಾಲಯದಿಂದ ಹೊರ ಬರುವ ಸಮಯದಲ್ಲೂ ನಕ್ಸಲ್ ವಾದವನ್ನು ಸಮರ್ಥಿಸುವ ಘೋಷಣೆ ಕೂಗಿದ ರೂಪೇಶ್, ‘ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು, ನಾನು ಕೂಡ ಮಾವೋವಾದದ ಬೆಂಬಲಿಗ’ ಎಂದು ಮತ್ತೊಮ್ಮೆ ಘೋಷಣೆ ಕೂಗಿದೆ.

ಬಿಗಿ ಭದ್ರತೆ: ನಕ್ಸಲ್ ರೂಪೇಶ್‍ನನ್ನು ಬಿಗಿ ಭದ್ರತೆಯೊಂದಿಗೆ ಮಡಿಕೇರಿ ಜಿಲ್ಲಾ ಕಾರಾಗೃಹದಿಂದ ನ್ಯಾಯಾಲಯಕ್ಕೆ ಕರೆ ತರಲಾಯಿತು. ಸೆಂಟ್ರಲ್ ಜೈಲಿನಿಂದ ನಕ್ಸಲ್ ಮುಖಂಡ ರೂಪೇಶ್‍ನನ್ನು ತ್ರಿಶೂರ್ ವೃತ್ತ ನಿರೀಕ್ಷಕ ಬಾಬು, ಅಧಿಕಾರಿಗಳಾದ ಶಿವಶಂಕರನ್, ರಾಶಿ ಹಾಗೂ ತ್ರಿಶೂರ್ ನಗರ ವೃತ್ತ ನಿರೀಕ್ಷಕ ಟಿ.ಪಿ. ರಂಜನ್, ಕೇರಳ ಭಯೋತ್ಪಾದಕ ನಿಗ್ರಹ ದಳ, ಕೊಡಗು ಕಮಾಂಡೋ ಸಹಿತ ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಠಾಣಾ ಧಿಕಾರಿ ಮತ್ತು ಸಿಬ್ಬಂದಿಗಳು ಭದ್ರತೆ ಒದಗಿಸಿದ್ದರು. ನ್ಯಾಯಾಲಯದ ಆವರಣದಲ್ಲಿ ಬ್ಯಾರಿಕೇಡ್‍ಗಳನ್ನು ಕೂಡ ಅಳವಡಿಸಲಾಗಿತ್ತು.

ವಿಚಾರಣೆಯ ಬಳಿಕ ವಿರಾಜಪೇಟೆ ಮಾರ್ಗವಾಗಿ ನಕ್ಸಲ್ ರೂಪೇಶ್‍ನನ್ನು ಕೇರಳದ ವೈವೂರು ಸೆಂಟ್ರಲ್ ಜೈಲಿಗೆ ಕರೆದೊಯ್ಯಲಾಯಿತು. ಕೇರಳ ರಾಜ್ಯದ ಗುಪ್ತದಳ ಸಿಬ್ಬಂದಿಗಳು ಮಫ್ತಿಯಲ್ಲಿ ಕೋರ್ಟ್‍ನಲ್ಲಿ ಹಾಜರಿದ್ದು ವಿದ್ಯಮಾನಗಳನ್ನು ಅವಲೋಕಿಸುತ್ತಿದ್ದುದು ಕಂಡು ಬಂತು. ರಾಜ್ಯ ಆಂತರಿಕ ಭದ್ರತಾ ವಿಭಾಗ, ಕೇಂದ್ರೀಯ ಗುಪ್ತದಳ ಮತ್ತು ಗುಪ್ತವಾರ್ತೆ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನ್ಯಾಯಾಲಯದ ಆವರಣದಲ್ಲಿ ಹಾಜರಿದ್ದರು.

Translate »