ಮೈಸೂರು,ಫೆ.15- ಬಹುರೂಪಿ ರಾಷ್ಟ್ರೀಯ ನಾಟ ಕೋತ್ಸವವು ಬಹುಭಾಷೆ ನಾಟಕಗಳ ಮೂಲಕ ರಂಗಾಸಕ್ತರ ಮನ ತಣಿಸುತ್ತಿದ್ದರೆ, ರಂಗಾಯಣದ ಆವರಣದಲ್ಲಿನ ಆಹಾರ ಮೇಳದಲ್ಲಿ ಮಲೆನಾಡಿನ ತೊಡದೇವು, ಕಾಯಿಗರಿಕೆ, ಕಾಯಿ ಮುಳಕ ಹಾಗೂ ದಕ್ಷಿಣ ಕರ್ನಾಟಕದ ಪ್ರಮುಖ ಆಹಾರ ಗಳಾದ ರಾಗಿಮುದ್ದೆ, ನಾಟಿಶೈಲಿ ಸಾಂಬಾರ್, ಪಾಯಸದ ರುಚಿ ಸವಿದು ನಾಲಿಗೆ ಚಪ್ಪರಿಸುವಂತೆ ಮಾಡುತ್ತಿದೆ.
ಗಾಂಧಿಪಥ ಶಿರೋನಾಮೆಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ರಂಗಾಸಕ್ತರಿಗೆ ನಾಟಕಗಳು, ಚಲನ ಚಿತ್ರಗಳು ವಿಭಿನ್ನ ಹಾಗೂ ಸದಭಿರುಚಿ ಅನುಭವ ನೀಡು ತ್ತಿದ್ದರೆ, ಆಹಾರ ಮೇಳದಲ್ಲಿ ಬಗೆಬಗೆಯ ರುಚಿಕರ ಆಹಾರ ಪದಾರ್ಥಗಳು ನಾಲಿಗೆಯ ರುಚಿ ತಣಿಸುತ್ತಿವೆ.
ಮಲೆನಾಡಿನ ಆಹಾರ: ಇದೇ ಮೊದಲ ಬಾರಿಗೆ ಮಲೆ ನಾಡು, ಉತ್ತರಕನ್ನಡ ಶೈಲಿಯ ಆಹಾರ ಪದಾರ್ಥಗಳು ಬಹುರೂಪಿ ಆಹಾರ ಮಳಿಗೆಯಲ್ಲಿ ದೊರೆಯುತ್ತಿವೆ. ಉತ್ತರ ಕನ್ನಡÀ ಶಿರಸಿ ಸಮೀಪದ ಪಡಿಗೇರಿ ನಿವಾಸಿ ಶಾಂತಲಾ ಹೆಗಡೆ ಎಂಬವರು ಮಳಿಗೆ ತೆರೆದಿದ್ದು, ಮಲೆನಾಡಿನ ಆಹಾರ ಪದಾರ್ಥವಾದ ತೊಡದೇವು, ಕಾಯಿಗರಿಕೆ, ಕಾಯಿಮುಳಕ ತಿನಿಸುಗಳನ್ನು ಮೈಸೂರಿಗರಿಗೆ ಉಣಬಡಿಸುತ್ತಿದ್ದಾರೆ.
ಅಕ್ಕಿಹಿಟ್ಟು, ಕಬ್ಬಿನ ಹಾಲು ಹಾಗೂ ಮಸಾಲೆ ಪದಾರ್ಥ ಗಳಿಂದ ತಯಾರಿಸುವ ಈ ತಿನಿಸನ್ನು ಸವಿಯಲು ಜನ ಮುಗಿಬೀಳುತ್ತಿದ್ದಾರೆ. ಯಾವುದೇ ರಾಸಾಯನಿಕ ಬಳಸದೇ, ನೈಸರ್ಗಿಕ ಕೃಷಿ ಪದ್ಧತಿಯಲ್ಲೇ ಬೆಳೆದ ಪದಾರ್ಥವನ್ನೇ ಬಳಸುತ್ತಿರುವುದರಿಂದ ತಿನಿಸುಗಳಿಗೆ ಬೇಡಿಕೆ ಹೆಚ್ಚಾಗಿದೆ. ಆಲೆಮನೆ ಸೀಜನ್‍ನಲ್ಲಿ ಮಲೆನಾಡಿನಲ್ಲಿ ಈ ಪದಾರ್ಥ ಗಳಿಗೆ ಹೆಚ್ಚಿನ ಬೇಡಿಕೆಯಿದೆ.
ತೊಡದೇವು: ಅರ್ಧಗಂಟೆ ನೀರಿನಲ್ಲಿ ನೆನೆಹಾಕಿದ ಅಕ್ಕಿ ಯನ್ನು ಒಳಕಲ್ಲಿನಲ್ಲಿ ಕುಟ್ಟಿ, ನಂತರ ಬಿಸಿ ಮಾಡಿದ ಕಬ್ಬಿನ ಹಾಲಿನೊಂದಿಗೆ ತೆಳುವಾಗಿ ಕಲಸಲಾಗುತ್ತದೆ. ಕಡ್ಡಿಗೆ ಸುತ್ತಿದ ತೆಳುವಾದ ಹತ್ತಿಬಟ್ಟೆಯ ತುಂಡನ್ನು ತೆಳುವಾಗಿ ಕಲಸಿರುವ ಅಕ್ಕಿಹಿಟ್ಟಿಗೆ ಅದ್ದಿ ನಂತರ ಒಲೆ ಮೇಲೆ ಇಟ್ಟಿರುವ ಮಡಿಕೆಗೆ ಸವರಲಾಗುತ್ತದೆ. ಹೀಗೆ 3 ಬಾರಿ ಸವರಿ ಬಿಸಿ ಮಡಿಕೆಗೆ ಅಂಟಿ ಕೊಂಡ ಹಿಟ್ಟನ್ನು ಅಡಿಕೆ ಗರಿಯಲ್ಲಿ ಚೌಕಾಕಾರವಾಗಿ ಮಡಚಿ ಬೇಯಿಸಲಾಗುತ್ತದೆ. 2 ನಿಮಿಷದ ನಂತರ ತುಪ್ಪ ಹಾಕಿ ತಿನ್ನಲು ನೀಡಲಾಗುತ್ತಿದೆ. ಇದು ಟಿಶ್ಯು ಪೇಪರ್‍ಗಿಂತಲೂ ತೆಳು ಮತ್ತು ಮೃದು. ಬಲು ಸಿಹಿಯಾದ ತಿನಿಸು. ಒಂದು ತೊಡದೇವಿಗೆ 25 ರೂ. ನಿಗದಿಪಡಿಸಲಾಗಿದೆ.
ಕಾಯಿಗರಿಕೆ: ಇದು ಖಾರಾ ತಿನಿಸು. ಅಕ್ಕಿ, ಉದ್ದು, ಮೆಣಸು, ಜೀರಿಗೆ, ಇಂಗು ಮಿಶ್ರಣ ಮಾಡಿ ಹಿಟ್ಟನ್ನು ತಯಾರಿಸಲಾಗು ತ್ತದೆ. ಆ ಹಿಟ್ಟನ್ನು ನೀರಿನಲ್ಲಿ ಕಲಸಿಕೊಂಡು ಎಣ್ಣೆಯಲ್ಲಿ ಬೇಯಿ ಸಲಾಗುತ್ತದೆ. ನೋಡಲು ಪೂರಿಯಂತೆ ಕಾಣುವ ಕಾಯಿ ಗರಿಕೆ ಮಲೆನಾಡಲ್ಲಿ ಮದುವೆಗಳಲ್ಲೂ ಉಣಬಡಿಸುತ್ತಾರೆ.
ನಶಿಸುತ್ತಿರುವ ಆಹಾರ ತಯಾರಿಕೆ: ರಂಗಾಯಣ ಹಿರಿಯ ಕಲಾವಿದ ವಿನಾಯಕ್ ಭಟ್ ಮಾತನಾಡಿ, ಆಧುನಿಕತೆಯ ಅಬ್ಬರದಲ್ಲಿ ಮಲೆನಾಡಿನ ತೊಡದೇವು, ಕಾಯಿಗರಿಕೆ ಮತ್ತಿತರ ಆಹಾರ ಪದಾರ್ಥಗಳು ಕಣ್ಮರೆಯಾಗುತ್ತಿವೆ. ವಿಶಿಷ್ಟವಾದ ಮಡಿಕೆ ಯನ್ನು ಒಲೆಮೇಲಿಟ್ಟು ಕಾಯಿಸಿ, ಅದರ ಮೇಲೆ ತೆಳುವಾದ ಬಟ್ಟೆಗೆ ಅಂಟಿದ ಹಿಟ್ಟನ್ನು ಸವರುವ ಮೂಲಕ ತೊಡದೇವು ತಯಾರಿಸಲಾಗುತ್ತದೆ. ಇದಕ್ಕೆ ಬಹಳ ತಾಳ್ಮೆ ಬೇಕು. ಇಲ್ಲವಾದರೆ ಮಡಕೆ ಒಡೆಯುತ್ತದೆ. ಈಗಂತೂ 1 ಮಡಕೆಗೆ 150 ರೂ. ಬೆಲೆ ಇದೆ ಎಂದರು. ಹಳೆಯ ತಲೆಮಾರಿನ ಮಹಿಳೆಯರು ಈಗಲೂ ಈ ತಿನಿಸು ತಯಾರಿಸುತ್ತಾರೆ. ಮುಂದಿನ 10 ವರ್ಷಗಳ ನಂತರ ಈ ಆಹಾರ ಪದ್ಧತಿಯೇ ಕಣ್ಮರೆಯಾಗುವ ಆತಂಕ ಎದುರಾಗಿದೆ. ಬಹುರೂಪಿಯಲ್ಲಿ ಈ ಬಾರಿ ಮಲೆನಾಡು ತಿನಿಸನ್ನು ರಂಗಾಸಕ್ತರಿಗೆ ಉಣಬಡಿಸಲು ಅವಕಾಶ ಮಾಡಿ ಕೊಟ್ಟಿರುವುದು ಶ್ಲಾಘನೀಯ ಎಂದರು.
ನಾಟಿ ಶೈಲಿ ಊಟ: ರಂಗಭೂಮಿ ಯುವ ಕಲಾವಿದೆ, ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಅಕ್ಷತಾ ಪಾಂಡವ ಪುರ ಬಹುರೂಪಿ ಆಹಾರಮೇಳದಲ್ಲಿ ಮಳಿಗೆ ತೆರೆದಿದ್ದಾರೆ. ಮೈಸೂರು, ಮಂಡ್ಯ ಶೈಲಿಯ ಸಸ್ಯಾಹಾರಿ ನಾಟಿ ಶೈಲಿ ಆಹಾರ ಉಣಬಡಿಸುತ್ತಿದ್ದಾರೆ. ಪ್ರಮುಖವಾಗಿ ಜಾತ್ರೆ, ಹಬ್ಬ, ಪರ ಸೇರಿ ದಂತೆ ಹಬ್ಬ ಹರಿದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮಾಡುವ ರುಚಿಕರ ಭೋಜನವನ್ನೇ ಸಿದ್ಧಪಡಿಸಿ ರಂಗಾ ಸಕ್ತರ ನಾಲಿಗೆ ತಣಿಸುತ್ತಿದ್ದಾರೆ. `ಅಕ್ಷತಾ ಕಿಚನ್’ ಹೆಸರಿನ ಮಳಿಗೆಯಲ್ಲಿ ರಾಗಿ ಮುದ್ದೆ, ಮೊಳಕೆಕಾಳು ಮತ್ತು ಹಲಸಿನ ಕಾಯಿ ಸಾಂಬಾರ್, ಸೊಪ್ಪಿನ ಸಾಂಬಾರ್, ಜಯಾ ಭತ್ತದ ಅಕ್ಕಿಯಿಂದ ಮಾಡಿದ ಅನ್ನ, ಪಾಯಸ, ನೀರ್ ಮಜ್ಜಿಗೆ ಹಾಗೂ ವಡೆ ಪೂರೈಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ರಾಗಿಮುದ್ದೆ ಬಹುರೂಪಿ ಆಹಾರ ಮೇಳದಲ್ಲಿ ದೊರೆಯು ತ್ತಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ.
ಅಕ್ಷತಾ ಪಾಂಡವಪುರ ಮಾತನಾಡಿ, ನಗರಗಳ ಜನ ರಿಗೆ ಗ್ರಾಮೀಣ ಭಾಗದ ಜಾತ್ರೆ, ಪರ, ಹಬ್ಬಗಳಲ್ಲಿನ ಆಹಾರ ಪದ್ಧತಿಯ ಪರಿಚಯ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಶೈಲಿ ಆಹಾರ ತಯಾರಿಸಿ ಉಣಬಡಿಸುತ್ತಿದ್ದೇವೆ. ಮನೆಯಲ್ಲೇ ಸಂಬಾರ ಪದಾರ್ಥ, ಮಸಾಲೆ ತಯಾರಿಸಿ ಕೊಂಡು ಬರಲಾಗಿದೆ. ರಾಸಾಯನಿಕಯುಕ್ತ ವಸ್ತು ಬಳಸು ತ್ತಿಲ್ಲ. ಬೆಂಗಳೂರಿನಲ್ಲಿ ನನ್ನ ಆಕ್ಟಿಂಗ್ ಸ್ಟುಡಿಯೋದೊಂದಿಗೆ ಅಕ್ಷತಾ ಕಿಚನ್ ಹೆಸರಿನಲ್ಲಿ ಕ್ಯಾಂಟೀನ್ ಸಹ ನಡೆಸುತ್ತಿದ್ದೇನೆ. ಉತ್ತಮ ಪ್ರತಿಕ್ರಿಯೆ ಇದೆ ಎಂದರು.
ಎಂ.ಟಿ.ಯೋಗೇಶ್ ಕುಮಾರ್