ಬೆಂಗಳೂರು,ಫೆ.28(ಕೆಎಂಶಿ)-ಹವಾಮಾನ ವೈಪ ರೀತ್ಯದಿಂದಾಗಿ ನಮಗೆ ನಿರೀಕ್ಷಿತ ಪ್ರಮಾಣದಲ್ಲಿ ಆಹಾರ ಉತ್ಪಾದನೆಯಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆತಂಕ ವ್ಯಕ್ತಪಡಿಸಿದರು.
ಹವಾಮಾನ ಬದಲಾವಣೆ ಕುರಿತ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶೇ.55ರಷ್ಟು ಆಹಾರ ಉತ್ಪನ್ನಗಳು, ಶೇ.74ರಷ್ಟು ಎಣ್ಣೆ ಬೀಜಗಳು ಉತ್ಪಾದನೆಯಾಗುತ್ತವೆ. ಆದರೆ ಇತ್ತೀಚಿನ ಹವಾ ಮಾನ ವೈಪರಿತ್ಯದಿಂದ ನಮ್ಮ ಗುರಿ ಮುಟ್ಟಲಾಗುತ್ತಿಲ್ಲ. ಹಾಗೆಂದು ರಾಜ್ಯಕ್ಕೆ ಎಣ್ಣೆಬೀಜ ಇಲ್ಲವೆ ಆಹಾರದ ಕೊರತೆ ಉಂಟಾಗಿಲ್ಲ. ಈ ಹವಾಮಾನ ವೈಪರಿತ್ಯದಿಂದ ನಮ್ಮ ಲ್ಲಿರುವ ನೆಲ-ಜಲವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಸತತವಾಗಿ ಬರಕ್ಕೆ ತುತ್ತಾಗುತ್ತದೆ. ಮತ್ತೆ ಕೆಲವೊಮ್ಮೆ ಅತಿವೃಷ್ಟಿಯಿಂದ ನೆರೆ ಬಂದು ರೈತ ಕಂಗಾಲಾಗಿದ್ದಾನೆ. ಇಂತಹ ಸನ್ನಿವೇಶಗಳನ್ನು ಎದು ರಿಸಲು ಕೇಂದ್ರ ಸರ್ಕಾರ ಸೂಕ್ತ ಕಾರ್ಯಕ್ರಮಗಳನ್ನು ರೂಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಿಸಿದರು. ಕೇಂದ್ರ ನೀತಿ ಆಯೋಗ, ಪ್ರಧಾನಮಂತ್ರಿ ಕೌಶಲ್ಯ ಅಭಿ ವೃದ್ಧಿ ಆಯೋಗದಲ್ಲೂ ಹವಾಮಾನ ಬದಲಾವಣೆ ಕುರಿತಂತೆ ಅನೇಕ ಬಾರಿ ಚರ್ಚೆ ಮಾಡಲಾಗಿದೆ ಎಂದರು.
ಹವಾಮಾನ ವೈಪರೀತ್ಯವು ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಅನೇಕ ಸಮ್ಮೇಳನ ಗಳು ನಡೆಯುತ್ತವೆ, ಅಲ್ಲಿ ಚರ್ಚೆಯೂ ಆಗುತ್ತವೆ, ಆದರೆ ಪರಿಸ್ಥಿತಿ ನಿಭಾಯಿಸಲು ಯಾವುದೇ ಫಲಿತಾಂಶ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹವಾಮಾನ ವೈಪರಿತ್ಯವಾದರೆ ಯಾವ ಯಾವ ಪರಿ ಣಾಮ ಉಂಟಾಗುತ್ತದೆ ಎಂಬುದಕ್ಕೆ ಕಳೆದ ವರ್ಷ ರಾಜ್ಯದ ನಾನಾ ಭಾಗದಲ್ಲಿ ಉಂಟಾದ ಭೀಕರ ಪ್ರವಾಹ, ನಮ್ಮೆಲ್ಲರಿಗೂ ಎಚ್ಚರಿಕೆಯ ಪಾಠವಾಗಬೇಕೆಂದರು. ರಾಜ್ಯದ 113 ತಾಲೂಕುಗಳು, 20 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಯಿತು. 43 ತಾಲೂಕುಗಳನ್ನು ಪ್ರವಾಹ ಪೀಡಿತ ತಾಲೂಕುಗಳೆಂದೇ ರಾಜ್ಯ ಸರ್ಕಾರವೇ ಅಧಿಕೃತವಾಗಿ ಘೋಷಣೆ ಮಾಡಿತು. ರೈತರ ಬೆಳೆ, ಜಾನುವಾರು, ಮನೆಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿ ರೈತನ ಬದುಕು ದುಸ್ತರವಾಯಿತು. ಇದು ಜಾಗತಿಕ ಹವಾಮಾನ ಬದಲಾವಣೆಯ ಎಚ್ಚರಿಕೆಯ ಗಂಟೆ ಎಂದರು.
ಕರ್ನಾಟಕ, ರಾಜಸ್ಥಾನ ಹೊರತುಪಡಿಸಿದರೆ ದೇಶ ದಲ್ಲೇ ಅತೀ ಹೆಚ್ಚು ಒಣಭೂಮಿ ಹೊಂದಿರುವ 2ನೇ ರಾಜ್ಯವಾಗಿದೆ. ಇತ್ತೀಚೆಗೆ ಕೆಲವು ವರ್ಷಗಳನ್ನು ಹೊರತುಪಡಿಸಿದರೆ, ರಾಜ್ಯದ ಶೇ 60ರಿಂದ 70ರಷ್ಟು ಭಾಗ ಬರಕ್ಕೆ ಸಿಲುಕಿ ನಲುಗುತ್ತದೆ. ಇದನ್ನು ಗಮನ ದಲ್ಲಿಟ್ಟು ಕೊಂಡೇ ರಾಜ್ಯದಲ್ಲಿ ಜಲಮೂಲ ವೃದ್ಧಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಸಮುದ್ರಕ್ಕೆ ಹರಿದು ಹೋಗುತ್ತಿರುವ ನೀರನ್ನು ನದಿಯ ಮಟ್ಟ ದಲ್ಲೇ ತಡೆದು, ಕೆರೆಗಳಿಗೆ ತುಂಬಿಸುವ ಕಾರ್ಯ ನಡೆದಿದೆ.
ಕೆರೆ ಕಟ್ಟೆಗಳು ಭರ್ತಿಯಾದರೆ, ತನ್ನಷ್ಟಕ್ಕೆ ತಾನೇ ಜಲ ಮೂಲವೂ ವೃದ್ಧಿಯಾಗುತ್ತದೆ. ಜನತೆ ಕೂಡಾ ನೀರಿನ ಬಳಕೆ ಬಗ್ಗೆ ಹೆಚ್ಚು ಗಮನಹರಿಸಬೇಕು. ಮಳೆ ಮತ್ತು ಪರಿಸರಕ್ಕಾಗಿ ಮರಗಿಡಗಳನ್ನು ಬೆಳೆಸುವ ಪರಿಪಾಠ ಬರಬೇಕಾಗಿದೆ ಎಂದು ಕಿವಿಮಾತು ಹೇಳಿದರು.