ಮಾರಾಟ ಮಳಿಗೆಗಳು, ಫಾಸ್ಟ್‍ಫುಡ್‍ಗಳಿಗೆ   ಪಾಲಿಕೆ ಸ್ವಚ್ಛತೆ ಪಾಠ ಮೊದಲು ಕಲಿಸಬೇಕಿದೆ
ಮೈಸೂರು

ಮಾರಾಟ ಮಳಿಗೆಗಳು, ಫಾಸ್ಟ್‍ಫುಡ್‍ಗಳಿಗೆ ಪಾಲಿಕೆ ಸ್ವಚ್ಛತೆ ಪಾಠ ಮೊದಲು ಕಲಿಸಬೇಕಿದೆ

January 11, 2019

ಮೈಸೂರು: ಪುಟ್ಟ ಮಕ್ಕಳು ಯಾವುದಾದರೂ ವಸ್ತುವನ್ನು ಬಿಸಾಡಿ ದರೆ, ಮನೆಯ ಮಾಳಿಗೆಯೇ ಹಾರಿ ಹೋಗು ವಂತೆ ಕಿರುಚಾಡಿ, ಇನ್ನೊಮ್ಮೆ ಈ ರೀತಿ ಮಾಡ ಬಾರದು ಎಂದು ತಿಳಿಹೇಳುತ್ತೇವೆ. ಆ ತಪ್ಪು ಮರುಕಳಿಸಿದರೆ ಪೆಟ್ಟು ಕೊಟ್ಟು ಎಚ್ಚರಿಸುವ ವರೂ ಬಹಳಷ್ಟು ಮಂದಿ ಇದ್ದಾರೆ. ಮನೆಯ ಸ್ವಚ್ಛತೆಗೆ ಈ ಪರಿ ಆದ್ಯತೆ ನೀಡುವ ನಾವು, ನಮ್ಮ ರಸ್ತೆ, ಊರಿನ ಸ್ವಚ್ಛತೆ ಬಗ್ಗೆ ಕಿಂಚಿತ್ತಾದರೂ ಕಾಳಜಿ ಹೊಂದಿದ್ದೇವೆಯೇ? ಎಂದು ಆತ್ಮಾವ ಲೋಕನ ಮಾಡಿಕೊಳ್ಳಬೇಕು. ಪೌರ ಕಾರ್ಮಿಕರು ನಿರಂತರವಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ದ್ದರೂ ಅಲ್ಲಲ್ಲಿ ಕಾಣಿಸುವ ಕಸದ ರಾಶಿ ಹೀಗೆ ನಾಗರಿಕತೆಯನ್ನು ಪ್ರಶ್ನಿಸುತ್ತಿವೆ. ಮೈಸೂರಿನ ಪ್ರಮುಖ ರಸ್ತೆಗಳು ಸೇರಿದಂತೆ ವ್ಯಾಪಾರ ವಹಿ ವಾಟು ಸ್ಥಳಗಳ ಆಸುಪಾಸಿನಲ್ಲಿ ನಿತ್ಯ ಕಸದ ದರ್ಶನ ವಾಗುತ್ತದೆ. ಇದು ಖಾಯಂ ಮಳಿಗೆಗಳು, ಫಾಸ್ಟ್ ಫುಡ್‍ಗಳು, ಹಣ್ಣು, ತರಕಾರಿ, ಎಳನೀರು ಇನ್ನಿ ತರ ವಸ್ತುಗಳನ್ನು ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರ ಕೊಡುಗೆ ಎಂದು ಪ್ರಜ್ಞಾವಂತ ನಾಗರಿಕರು ಅತೀವ ಬೇಸರ ವ್ಯಕ್ತಪಡಿಸಿದ್ದಾರೆ.

ಪಾಲಿಕೆ ಅದೆಷ್ಟೇ ಸಾಹಸ ಮಾಡುತ್ತಿದ್ದರೂ ಫುಟ್‍ಪಾತ್ ವ್ಯಾಪಾರವನ್ನು ತಡೆಯಲು ಸಾಧ್ಯ ವಾಗಿಲ್ಲ. ಗಾಡಿಗಳಲ್ಲಿ ಸಸ್ಯಾಹಾರ, ಮಾಂಸಾ ಹಾರ ಮಾರಾಟ ಮಾಡುವವರು, ವ್ಯಾಪಾರ ಮುಗಿದ ಬಳಿಕ ತ್ಯಾಜ್ಯವನ್ನು ರಸ್ತೆಯ ಮೂಲೆ ಅಥವಾ ಖಾಲಿ ಜಾಗದಲ್ಲಿ ಸುರಿದು ಹೋಗು ತ್ತಾರೆ. ಹಣ್ಣು-ತರಕಾರಿ ಮಾರುವವರೂ ಕೊಳೆತ ಹಣ್ಣುಗಳು, ಹರಿದ ರಟ್ಟುಗಳು, ಪ್ಲಾಸ್ಟಿಕ್ ಕವರ್ ಗಳನ್ನು ಹೀಗೆಯೇ ಮಾಡುತ್ತಾರೆ. ಇವರಷ್ಟೇ ಅಲ್ಲ, ಖಾಯಂ ಮಳಿಗೆಗಳಲ್ಲಿ ವ್ಯಾಪಾರ ವಹಿ ವಾಟು ನಡೆಸುವವರೂ ತಮ್ಮ ಅಂಗಡಿಯ ತ್ಯಾಜ್ಯವನ್ನು ಪ್ರತಿನಿತ್ಯ ಬಾಗಿಲು ಮುಚ್ಚಿದ ನಂತರ ಅಂಗಡಿ ಮುಂದೆ ಫುಟ್‍ಪಾತ್‍ನಲ್ಲೋ, ರಸ್ತೆ ಬದಿಯೋ ಬಿಸಾಡುತ್ತಾರೆ. ಬೆಳಿಗ್ಗೆ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಮಾಡುತ್ತಾರೆ ಎಂಬ ಕೆಟ್ಟ ಧೋರಣೆ ಇಂತಹ ಮಳಿಗೆಗಳ ಮಾಲೀಕರದ್ದು.

ಈ ರೀತಿ ಎಲ್ಲೆಂದರಲ್ಲಿ ಕಸ ಹಾಕುವ ವ್ಯಾಪಾರಿ ಗಳು ನಾಗರಿಕರಲ್ಲವೇ?. ನಮ್ಮ ಊರು ಎಂಬ ಅಭಿಮಾನ ಅವರಲ್ಲಿ ಕಿಂಚಿತ್ತೂ ಇಲ್ಲವೇ?. ಹೇಗಿ ದ್ದರೂ ಪೌರಕಾರ್ಮಿಕರು ಬಂದು ಸ್ವಚ್ಛ ಮಾಡು ತ್ತಾರೆ ಎಂಬ ಉದ್ಧಟತನವೇ?. ಇದರಿಂದ ಏನೂ ಆಗುವುದಿಲ್ಲ ಎಂಬ ನಿರ್ಭಯವೇ?. ಇಷ್ಟೊಂದು ಬೇಜವಾಬ್ದಾರಿ ತೋರುವವರ ವಿರುದ್ಧ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಎಲ್ಲೆಂದರಲ್ಲಿ ಕಸ ಹಾಕುವವರನ್ನು ಪತ್ತೆ ಮಾಡಿ, ಅಧಿಕ ಪ್ರಮಾಣದ ದಂಡ ವಿಧಿಸಬೇಕು. ಅವಕಾಶ ವಿದ್ದಲ್ಲಿ ಪ್ರಕರಣ ದಾಖಲಿಸಬೇಕು. ಅಗತ್ಯವಿರುವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿ, ಸಾಕ್ಷಿ ಸಮೇತ ಅವರ ದುಷ್ಕøತ್ಯವನ್ನು ಸಮಾಜದ ಮುಂದಿಡಬೇಕು. ಸಾರ್ವಜನಿಕವಾಗಿ ಅವರಿಗೆ ಛೀಮಾರಿ ಹಾಕಬೇಕು. ಹೀಗೆ ಚುರುಕು ಮುಟ್ಟಿಸ ದಿದ್ದರೆ ಮೈಸೂರು ನಿಜವಾಗಿ ಸ್ವಚ್ಛ ನಗರಿ ಎನಿಸ ಲಾರದೆಂದು ನಾಗರಿಕರು ಆಗ್ರಹಿಸಿದ್ದಾರೆ.

Translate »