ಬಲಿಷ್ಠ ಭಾರತಕ್ಕಾಗಿ ಮತ್ತೊಮ್ಮೆ  ಮೋದಿ ಪ್ರಧಾನಿಯಾಗಬೇಕು
ಮೈಸೂರು

ಬಲಿಷ್ಠ ಭಾರತಕ್ಕಾಗಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು

February 28, 2019

ಮೈಸೂರು: ಬಲಿಷ್ಠ ಭಾರತ ಕಟ್ಟಬೇಕಾ ದರೆ, ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಿ ಮುಂದುವರೆಯಬೇಕು ಎಂದು ಸಂಸದ ಪ್ರತಾಪಸಿಂಹ ಅಭಿಪ್ರಾಯಪಟ್ಟರು. ಜೆಎಲ್‍ಬಿ ರಸ್ತೆಯ ರೋಟರಿ ಐಡಿಯಲ್ ಜಾವಾ ಸಭಾಂಗಣದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕ ಆಯೋಜಿಸಿದ್ದ 23ನೇ ವಾರ್ಡಿನ ಮತದಾರರಿಗೆ ಕೇಂದ್ರ ಸರ್ಕಾರದ `ಆಯುಷ್ಮಾನ್ ಭಾರತ್’ ಕಾರ್ಡ್‍ಗಳನ್ನು ವಿತರಿಸಿ ಅವರು ಮಾತನಾಡಿದರು.

ಬಡವರ ಆರೋಗ್ಯ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು `ಆಯುಷ್ಮಾನ್ ಭಾರತ’ ಬೃಹತ್ ಆರೋಗ್ಯ ಯೋಜನೆ ಯನ್ನು ಜಾರಿಗೊಳಿಸಿದ್ದು, ಇದರ ಉಪಯೋಗವನ್ನು ಮೈಸೂರು ಮತ್ತು ಕೊಡಗು ಜನತೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಕಳೆದ ಐದು ವರ್ಷಗಳಿಂದ ಕೇಂದ್ರ ಸರ್ಕಾರ ಬಡವರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿ ಸಿದೆ. ಅದರಲ್ಲಿ ಆಯುಷ್ಮಾನ್ ಭಾರತ್, ಉಜ್ವಲ್, ಸುಕನ್ಯಾ ಸೇರಿದಂತೆ ಹತ್ತಾರು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಮೈಸೂರು-ಬೆಂಗಳೂರು ಜೋಡಿ ರೈಲು ಕಾಮ ಗಾರಿ ಪೂರ್ಣಗೊಂಡಿದೆ. ಮೈಸೂರು-ಬೆಂಗಳೂರು 10 ಪಥದ ಹೆದ್ದಾರಿ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಮೈಸೂರಿಂದ ಬೇರೆ ನಗರಗಳಿಗೆ ಸಂಪರ್ಕಿಸುವ ಆರು ನೂತನ ರೈಲುಗಳ ಸೇವೆಯನ್ನು ವಿಸ್ತರಿಸಲಾಗಿದೆ ಎಂದರು.

ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಹೆಚ್ಚಿನ ವಿಮಾನ ಹಾರಾಟ ಸಾಧ್ಯವಾಗಿದೆ. ರಿಂಗ್ ರೋಡ್ ಕಾಮಗಾರಿ, ಹಿನಕಲ್ ವೃತ್ತದ ಬಳಿ ಫ್ಲೈ ಓವರ್ ಸೇತುವೆ ಪೂರ್ಣಗೊಂಡಿದೆ. ಪ್ರಸಾದ ಯೋಜನೆಯಡಿ ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ಬಿಡುಗಡೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಪ್ರಧಾನಿ ಮೋದಿ ಅವರು ನೀಡಿದ್ದಾರೆ. 2019ರ ಲೋಕಸಭಾ ಚುನಾವಣೆ ಯಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಮತ್ತೊಮ್ಮೆ ಮೋದಿ ಅವರನ್ನೇ ಪ್ರಧಾನಿಯಾಗಿಸಬೇಕು ಎಂದು ಮನವಿ ಮಾಡಿದರು. ವೇದಿಕೆಯಲ್ಲಿ ನಗರ ಪಾಲಿಕೆ ಸದಸ್ಯೆ ಪರಿಮಳಾ, ಬಿಜೆಪಿ ಮುಖಂಡರಾದ ಕೆ.ಹರ್ಷ, ಭದ್ರೇಶ್, ರಾಜೇಶ್, ಪರಮೇಶ್ ಸೇರಿದಂತೆ ಇತರರಿದ್ದರು.

Translate »