ವಾಯುಪಡೆ ಸರ್ಜಿಕಲ್ ಸ್ಟ್ರೈಕ್‍ಗೆ  ಸೆಲ್ಯೂಟ್ ಎಂದ ತನ್ವೀರ್‍ಸೇಠ್
ಮೈಸೂರು

ವಾಯುಪಡೆ ಸರ್ಜಿಕಲ್ ಸ್ಟ್ರೈಕ್‍ಗೆ ಸೆಲ್ಯೂಟ್ ಎಂದ ತನ್ವೀರ್‍ಸೇಠ್

February 28, 2019

ಮೈಸೂರು: ಜಮ್ಮು ಕಾಶ್ಮೀರದ ಪುಲ್ವಾಮಾ ದಾಳಿಗೆ ಪ್ರತೀಕಾರ ವಾಗಿ ನಮ್ಮ ಭಾರತೀಯ ವಾಯುಸೇನೆ ನಡೆಸಿದ `ಏರ್ ಸ್ಟ್ರೈಕ್’ಗೆ ನನ್ನದೊಂದು ಸಲಾಂ ಎಂದು ಹೇಳುವ ಮೂಲಕ ಶಾಸಕ ತನ್ವೀರ್ ಸೇಠ್ ವಾಯುಪಡೆ ಕಾರ್ಯಾಚರಣೆಗೆ ಬೆಂಬಲ ವ್ಯಕ್ತಪಡಿಸಿದರು. ಮೈಸೂರು ನಗರಪಾಲಿಕೆ ಆವ ರಣದಲ್ಲಿ ತಮ್ಮ ಕಚೇರಿ ಉದ್ಘಾಟಿಸಿದ ನಂತರ ಮಾಧ್ಯಮ ಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಭದ್ರತೆ ವಿಚಾರ ಹಾಗೂ ದೇಶದ ಸಾರ್ವಭೌಮತೆಗೆ ಧಕ್ಕೆ ಉಂಟಾದ ಸಂದರ್ಭದಲ್ಲಿ ದೇಶದ ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಬೇಕು. ಅದರಂತೆ ಕಾಂಗ್ರೆಸ್ ಪಕ್ಷವು ಭಾರತೀಯ ಸೇನೆ ತೆಗೆದುಕೊಳ್ಳುವ ನಿರ್ಧಾರಕ್ಕೆ ಬೆಂಬಲ ಸೂಚಿಸಿದೆ ಎಂದರು.

ದೇಶದ ವಿಚಾರದಲ್ಲಿ ಜಾತಿ, ಧರ್ಮ ಮೀರಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳ ಬೇಕು. ದೇಶವಿದ್ದರೆ ಎಲ್ಲರೂ ಎಂದು ಶಾಸಕರು, ರಾಷ್ಟ್ರೀಯ ಭದ್ರತೆಗೆ ಸದಾ ಕಂಟಕವಾಗಿರುವ ಪಾಕಿಸ್ತಾನ ಪ್ರಾಯೋಜಿತ ಉಗ್ರರಿಗೆ ತಕ್ಕಪಾಠ ಕಲಿಸಬೇಕು. ಈ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡದೇ ಏಕದನಿಯಲ್ಲಿ ಭಾರತೀಯ ಸೇನೆಗೆ ನೈತಿಕ ಬೆಂಬಲ ತುಂಬುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದರು.

ಶಾಸಕರ ಕಚೇರಿ ಉದ್ಘಾಟನೆ: ಎನ್.ಆರ್.ಕ್ಷೇತ್ರ ಜನತೆಯ ಅಪೇಕ್ಷೆ ಮೇರೆಗೆ ಮೈಸೂರು ನಗರ ಪಾಲಿಕೆ ಆವರಣದಲ್ಲಿ ನನ್ನ ಕಚೇರಿ ತೆರೆಯಲಾಗಿದೆ. ನಮ್ಮ ತಂದೆಯ ಕಾಲದಿಂದಲೂ ನಮ್ಮ ಸ್ವಂತ ಕಟ್ಟಡದಲ್ಲಿ ಕಚೇರಿ ತೆರೆಯಲಾಗಿತ್ತು. ಇದೀಗ ಮತದಾರರ ಅಪೇಕ್ಷೆ ಮೇರೆಗೆ ಇಲ್ಲಿ ತೆರೆಯಲಾಗಿದೆ ಎಂದು ಹೇಳಿದರು.

ನಾನೂ ಕೂಡ ಟಿಕೆಟ್ ಆಕಾಂಕ್ಷಿ: ಮೈಸೂರಿನ ಜಿಲ್ಲೆ ಕಾಂಗ್ರೆಸ್ ಕಾರ್ಯಕರ್ತರು 2019ರ ಲೋಕಸಭಾ ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸುತ್ತಿದ್ದಾರೆ. ಪಕ್ಷ ಒಪ್ಪುವುದಾದರೆ ಈ ಬಾರಿ ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿಯಾಗುತ್ತೇನೆ. ಈಗಾಗಲೇ ಜೆಡಿಎಸ್ ಪಕ್ಷ ಮೈಸೂರು ಜಿಲ್ಲೆಯಲ್ಲಿ ಎರಡು ಸಚಿವ ಸ್ಥಾನ ಪಡೆದಿದೆ. ಹೀಗಾಗಿ ಮೈಸೂರು-ಕೊಡಗು ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡುವಂತೆ ಜೆಡಿಎಸ್ ವರಿಷ್ಠರನ್ನು ಒತ್ತಾಯಿಸುವೆ ಎಂದರು.

Translate »