ಹಳೆಯದ್ದನ್ನು ಮರೆತು ಬಿಜೆಪಿ ಅಭ್ಯರ್ಥಿ ಸೋಲಿಸಲು ಕೆಲಸ ಮಾಡಿ
ಮೈಸೂರು

ಹಳೆಯದ್ದನ್ನು ಮರೆತು ಬಿಜೆಪಿ ಅಭ್ಯರ್ಥಿ ಸೋಲಿಸಲು ಕೆಲಸ ಮಾಡಿ

March 30, 2019

ಮೈಸೂರು: ಬಾಬಾ ಸಾಹೇಬ್ ಅಂಬೇಡ್ಕರ್ ಕೊಡುಗೆಯಾಗಿ ನೀಡಿರುವ ಸಂವಿದಾನ ಉಳಿಸುವು ದರೊಂದಿಗೆ ದೇಶಕ್ಕೆ ಅಪಾಯಕಾರಿಯಾಗಿರುವ ಕೋಮುವಾದಿ ಶಕ್ತಿಗಳು ಬೆಳೆಯುವುದನ್ನು ತಡೆಗಟ್ಟುವ ಜವಾಬ್ದಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ್ದಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಹಳೆಯದ್ದನ್ನೆಲ್ಲಾ ಮರೆತು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸು ವುದನ್ನೇ ಗುರಿಯಾಗಿಸಿಕೊಂಡು ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನ ಹೈವೇ ವೃತ್ತದ ಬಳಿ ಇರುವ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪ ಡಿಸಿದ್ದ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಯಾವುದೇ ಪಕ್ಷಕ್ಕೂ ಬಹುಮತ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಕೋಮುವಾದಿ ಶಕ್ತಿಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರವನ್ನು ರಚಿಸಲಾಯಿತು. ದೇಶದ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಮಹಾಘಟಬಂಧನ್ ಅಸ್ತಿತ್ವಕ್ಕೆ ಬಂದಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನವೇ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದಕ್ಕೆ ಎರಡೂ ಪಕ್ಷಗಳ ನಾಯಕರು ಸಮ್ಮತಿಸಿದ್ದರು. ಈ ಹಿನ್ನೆಲೆಯಲ್ಲಿ ಒಟ್ಟು 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ 21 ಹಾಗೂ ಜೆಡಿಎಸ್ 7ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ಎರಡು ಪಕ್ಷಗಳ ಕಾರ್ಯಕರ್ತರು, ಮುಖಂಡರಿಗೆ ಬಿಜೆಪಿ ಸೋಲಿಸುವುದರೊಂದೇ ಗುರಿಯಾಗಿರಬೇಕು. ಹಳೆ ಮೈಸೂರು ಪ್ರಾಂತ್ಯದಲ್ಲಿ ಈ ಹಿಂದಿನಿಂದಲೂ ಕಾಂಗ್ರೆಸ್-ಜೆಡಿಎಸ್ ನಡುವೆ ನೇರಾ ನೇರ ಹಣಾಹಣಿ ನಡೆದಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಕೋಮುವಾದಿ ಶಕ್ತಿಯನ್ನು ಹತ್ತಿಕ್ಕುವುದಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಚುನಾವಣಾ ಕಣಕ್ಕಿಳಿದಿರುವುದರಿಂದ ಭಿನ್ನಾಭಿಪ್ರಾಯ, ಹಳೆಯ ಕಹಿ ನೆನಪುಗಳನ್ನು ಬದಿಗಿಟ್ಟು ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಸಲಹೆ ನೀಡಿದರು.

ದೇಶದಾದ್ಯಂತ ಕೋಮವಾದಿ ಶಕ್ತಿಗಳನ್ನು ವಿರೋಧಿಸುವ ಮತದಾರರ ಸಂಖ್ಯೆ ಹೆಚ್ಚಾಗಿದೆ. ಆದರೆ ಆ ಮತಗಳು ಹಂಚಿಕೆಯಾಗುತ್ತಿರುವುದರಿಂದ ಕೋಮುವಾದಿ ಶಕ್ತಿಗೆ ಲಾಭವಾಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಚದುರಿ ಹೋಗುತ್ತಿದ್ದ ಕೋಮುವಾದಿ ವಿರೋಧಿ ಮತಗಳನ್ನು ಒಂದುಗೂಡಿಸಲು ವಿವಿಧ ರಾಜ್ಯಗಳಲ್ಲಿ ಆಯಾ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲಾಗಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಅವರನ್ನು ಎರಡು ಪಕ್ಷಗಳ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸುವ ಮೂಲಕ ಎರಡು ಲಕ್ಷಕ್ಕೂ ಅಧಿಕ ಲೀಡ್‍ನೊಂದಿಗೆ ಗೆಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.

ಇದೇ ವೇಳೆ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದಲೇ ಸೋಲನನುಭವಿಸಿರುವ ನೋವಿದ್ದರೂ ಸಿದ್ದರಾಮಯ್ಯ ಮತ ಎಣಿಕೆ ಮುಗಿಯುತ್ತಿದ್ದಂತೆ ಸರ್ಕಾರ ರಚಿಸುವಂತೆ ಜೆಡಿಎಸ್ ನಾಯಕರಿಗೆ ಆಹ್ವಾನ ನೀಡಿದರು. ಕೋಮುವಾದಿ ಶಕ್ತಿ ಬೆಳೆಯುವುದನ್ನು ತಡೆಗಟ್ಟುವುದಕ್ಕಾಗಿ ತನ್ನ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗೊತ್ತಿ ಸಮ್ಮಿಶ್ರ ಸರ್ಕಾರ ರಚನೆಗೆ ಕಾರಣವಾಗಿರುವ ಅಂಶವನ್ನು ಎರಡೂ ಪಕ್ಷಗಳ ಕಾರ್ಯಕರ್ತರು ಮನಗಾಣಬೇಕು. ಎರಡು ಪಕ್ಷಗಳ ಕಾರ್ಯಕರ್ತರು ಒಂದುಗೂಡಿದರೆ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವುದು ದೊಡ್ಡ ಸವಾಲಾಗುವುದಿಲ್ಲ. ಮೈಸೂರು ಜಿಲ್ಲೆಯಲ್ಲಿ 9 ಲಕ್ಷ ಮತದಾರರಿದ್ದಾರೆ. ಮೈಸೂರಿನ ಎನ್.ಆರ್.ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಚಾಮರಾಜ ಕ್ಷೇತ್ರದಲ್ಲಿ ಕಳೆದ ಬಾರಿ ಸ್ಪರ್ಧಿಸಿದ್ದ ಮಾಜಿ ಶಾಸಕ ವಾಸು, ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಪ್ರೊ.ಕೆ.ಎಸ್.ರಂಗಪ್ಪ, ಪಕ್ಷೇತರ ಅಭ್ಯರ್ಥಿ ಕೆ.ಹರೀಶ್‍ಗೌಡ ಇದೀಗ ಮೈತ್ರಿ ಅಭ್ಯರ್ಥಿಪರ ಪ್ರಚಾರ ಮಾಡಲಿದ್ದಾರೆ. ಕೆ.ಆರ್.ಕ್ಷೇತ್ರ ಮತ್ತು ಚಾಮುಂಡೇಶ್ವರಿ, ಹುಣಸೂರು, ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಿದರೆ ಹೆಚ್ಚು ಲೀಡ್ ತೆಗೆದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ವಾಸು, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮೇಯರ್ ಪುಷ್ಪಲತಾ ಜಗನ್ನಾಥ್, ಮಾಜಿ ಮೇಯರ್ ಆರ್.ಲಿಂಗಪ್ಪ, ಪಾಲಿಕೆ ಸದಸ್ಯ ಎಸ್‍ಬಿಎಂ ಮಂಜು, ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಮುಡಾ ಮಾಜಿ ಅಧ್ಯಕ್ಷ ಡಿ.ಧ್ರುವಕುಮಾರ್, ಮುಖಂಡ ಕೆ.ಹರೀಶ್‍ಗೌಡ, ಹೆಚ್.ವಾಸು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಸಂವಿಧಾನ ಬದಲಾಯಿಸುವ ಹೇಳಿಕೆ ಅಪಾಯಕಾರಿ: ಈ ಚುನಾವಣೆ ದೇಶಕ್ಕೆ ಮಹತ್ವದ್ದಾಗಿದೆ. ಐದು ವರ್ಷದಿಂದ ದೇಶದಲ್ಲಿ ಸಂವಿಧಾನವನ್ನು ಬುಡಮೇಲು ಮಾಡುವ ಕೃತ್ಯಗಳು ಜರುಗುತ್ತಿವೆ. ಆರ್‍ಎಸ್‍ಎಸ್ ಹಾಗೂ ಬಿಜೆಪಿ ಮುಖಂಡರಿಗೆ ಸಂವಿಧಾನದ ಮಹತ್ವ ತಿಳಿಯದೇ ಇರುವುದರಿಂದ ಅದನ್ನು ಬದಲಿಸುವ ಮಾತನಾಡುತ್ತಿದ್ದಾರೆ. ಆರ್‍ಎಸ್‍ಎಸ್ ಸರಸಂಚಾಲಕರಾದ ಮೋಹನ್ ಭಾಗವತ್ ದೇಶದಲ್ಲಿ ಮೀಸಲಾತಿ ಪದ್ಧತಿ ರದ್ದಾಗಬೇಕು ಎಂದಿದ್ದಾರೆ. ಆರ್‍ಎಸ್‍ಎಸ್ ಕಾರ್ಯದರ್ಶಿಯೊಬ್ಬರು ಸಂವಿಧಾನದಲ್ಲಿ ಹಿಂದೂಗಳ ಆಚಾರ, ವಿಜಾರಗಳಿಗೆ ಅವಕಾಶವಿಲ್ಲ ಎಂದಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿರುವ ಮತಾಂಧ ಅನಂತಕುಮಾರ್ ಹೆಗಡೆ ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸುವುದಕ್ಕೆ ಎಂದು ಹೇಳುವ ಮೂಲಕ ಬಿಜೆಪಿ ಅಜೆಂಡಾವನ್ನು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಆತಂಕಕಾರಿ ಕೋಮುವಾದಿ ಶಕ್ತಿ ಬೆಳೆಯುತ್ತಿರುವುದನ್ನು ತಡೆಗಟ್ಟಲು ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಗುರಿ ಎರಡು ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರದ್ದಾಗಿದೆ. ಇದು ಅನಿವಾರ್ಯವೂ ಆಗಿದೆ ಎಂದರು.

ನಮ್ದು ಅಭಿವೃದ್ಧಿ ಪರ ರಾಜಕಾರಣ, ಬಿಜೆಪಿಯದ್ದು ಭಾವನಾತ್ಮಕ ವಿಷಯ ಆಧರಿತ ರಾಜಕಾರಣ
ಮೈಸೂರು: ಐದು ವರ್ಷದಿಂದ ಪ್ರಧಾನಿ ನರೇಂದ್ರ ದೇಶದ ಅಭಿವೃದ್ಧಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಸಂಬಂಧ ವೇದಿಕೆ ಸೃಷ್ಟಿಸಿದರೆ ಮೋದಿ ಅವರೊಂದಿಗೆ ಚರ್ಚೆಗೆ ಸಿದ್ದವಿರುವುದಾಗಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಒಬ್ಬ ಮಹಾ ನಾಟಕಕಾರ, ಕಲಾಕಾರ. ಸುಳ್ಳು ಹೇಳುವುದರಲ್ಲಿ ನಿಸ್ಸೀಮ. ನಾನು ರಾಷ್ಟ್ರದ ರಾಜಕೀಯವನ್ನು 50 ವರ್ಷದಿಂದಲೂ ಗಮನಿಸುತ್ತಿದ್ದೇನೆ. ಆದರೆ ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿಯನ್ನು ನಾನು ನೋಡಿಲ್ಲ. ಕಳೆದ 5 ವರ್ಷದಲ್ಲಿ ಅವರು ಏನು ಕೆಲಸ ಮಾಡಿಲ್ಲ. ಈ ವಿಚಾರವಾಗಿ ಅವರೊಂದಿಗೆ ಬಹಿರಂಗ ಚರ್ಚೆಗೆ ನಾನು ಸಿದ್ಧ ಎಂದರು. ಮನ್ ಕಿ ಬಾತ್, ಅಚ್ಛೇ ದಿನ್ ಘೋಷಣೆ ಬಳಿಕ ಮೋದಿ ಇದೀಗ `ನಾನು ಚೌಕಿದಾರ್’ ಎನ್ನುತ್ತಿದ್ದಾರೆ. ಅವರು ಯಾರಿಗೆ ಚೌಕಿದಾರ್? ಅದಾನಿ, ಅಂಬಾನಿಗೆ ಮಾತ್ರ ಕಾವಲುಗಾರ, ಬಡವರಿಗೆ, ರೈತರಿಗೆ, ಅಲ್ಪಸಂಖ್ಯಾತ ರಿಗೆ, ಹಿಂದುಳಿದವರಿಗೆ, ದಲಿತರಿಗೆ ಅಲ್ಲ.ಈ ಸಮುದಾಯದವರನ್ನು ಅವರು ಬಹಳ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿಯವರದ್ದು ಬರೀ ಮಾತು. ಹನುಮ ಜಯಂತಿ, ಹಿಂದುತ್ವ, ಸರ್ಜಿಕಲ್ ಸ್ಟ್ರೈಕ್‍ನಂತಹ ಭಾವುಕ ವಿಷಯ ಕುರಿತು ಮಾತನಾಡುತ್ತಾರೆ. ಆದರೆ, ಅಭಿವೃದ್ಧಿ ಮುಂದಿಟ್ಟುಕೊಂಡು ಎಲ್ಲಿಯೂ ಮತ ಯಾಚನೆ ಮಾಡಿಲ್ಲ. ಹನುಮ ಜಯಂತಿ ಮಾಡಿ ಪಾನಕ ಹಂಚುವವರು ನಾವು. ದನ ಮೇಯಿಸುವವರು, ಸಗಣಿ ಎತ್ತುವವರು ನಾವು, ಗೋಮಾತೆಗೆ ಸುಗ್ಗಿ ಕಾಲದಲ್ಲಿ ಪೂಜೆ ಮಾಡಿ ಕಿಚ್ಚು ಹಾಯಿಸುವುದು ನಾವು. ಆದರೆ ಒಮ್ಮೆಯೂ ಇದನ್ನೆಲ್ಲ ಮಾಡದ ಬಿಜೆಪಿಯವರು ನಮಗೆ ಹಿಂದುತ್ವದ ಬಗ್ಗೆ ಪಾಠ ಮಾಡಲು ಬರುತ್ತಾರೆ. ನಾವುಗಳೇ ನಿಜವಾದ ಹಿಂದುಗಳು. ನಾವು ಎಂದಿಗೂ ಹಿಂದೂ ವಿರೋಧಿಯಲ್ಲ. ಸಂವಿಧಾನದಲ್ಲಿ ಸಹಿಷ್ಣತೆ ಮತ್ತು ಸೌಹಾರ್ಧತೆ ಬಗ್ಗೆ ಉಲ್ಲೇಖಿಸಲಾಗಿದೆ. ಯಾವುದೇ ಧರ್ಮದವರಾಗಿದ್ದರೂ ಮನುಷ್ಯತ್ವ ಹೊಂದಿರಬೇಕು. ಎಲ್ಲ ಧರ್ಮಗಳ ಜನರೊಂದಿಗೆ ಪರಸ್ಪರ ಸೌಹಾರ್ಧತೆಯಿಂದ ಜೀವನ ನಡೆಸುವುದೇ ನಮ್ಮ ಆಶಯವಾಗಿರಬೇಕು ಎಂದು ವಾಗ್ದಾಳಿ ನಡೆಸಿದರು.

ನಾವು ಮಾಡಿದ ಕೆಲಸ: ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಸೇರಿದಂತೆ ರಾಜ್ಯದ 17 ಬಿಜೆಪಿ ಸಂಸದರ ಸಾಧನೆ ಶೂನ್ಯ. ಏನು ಮಾಡದಿದ್ದರೂ ನಮ್ಮ ಕೆಲಸಗಳನ್ನು ನಾನು ಮಾಡಿz್ದÉೀನೆಂದು ಪ್ರತಾಪ್ ಸಿಂಹ ತನ್ನ ಪುಸ್ತಕದಲ್ಲಿ ಹಾಕಿಸಿಕೊಂಡಿದ್ದಾನೆ. ಬೆಂಗಳೂರು-ಮೈಸೂರು ನಡುವಿನ ಜೋಡಿ ರೈಲು ಮತ್ತು 6 ಪಥ ರಸ್ತೆ ಉನ್ನತೀಕರಣ, ರಿಂಗ್‍ರೋಡ್ ಅಭಿವೃದ್ಧಿ, ಹಿನಕಲ್ ಬಳಿ ಹುಣಸೂರು ರಸ್ತೆಯಲ್ಲಿ ಮೇಲ್ಸೇತುವೆ, ಮಹಾರಾಣಿ ಕಾಲೇಜು, ಜಯದೇವ ಹೃದ್ರೋಗ ಆಸ್ಪತ್ರೆ, ಜಿಲ್ಲಾಧಿಕಾರಿ ಕಟ್ಟಡ, ಜಿಲ್ಲಾಸ್ಪತ್ರೆ, ಮೈಸೂರಿನ ರಸ್ತೆಗಳ ಅಭಿವೃದ್ಧಿಯನ್ನು ಯಾರು ಮಾಡಿದ್ದು? ನಮ್ಮ ಸರ್ಕಾರದ ಸಾಧನೆಯನ್ನು ನಾನು ಮಾಡಿರುವೆ ಎಂದು ಪ್ರತಾಪ್ ಬಿಂಬಿಸಿಕೊಳ್ಳುತ್ತಿದ್ದಾನೆ ಎಂದು ಹರಿಹಾಯ್ದರು. ಮೈಸೂರು ನಗರವನ್ನು ಪ್ಯಾರಿಸ್ ಮಾಡುತ್ತೇನೆಂದು ನರೇಂದ್ರ ಮೋದಿ ಭರವಸೆ ಈಡೇರಿಲ್ಲ. ಇಂತಹ ಸುಳ್ಳು ಭರವಸೆಯನ್ನು ಈ ಸಲವೂ ಹೇಳಿ ಹೇಗೆ ಗೆಲುತ್ತಾರೆ? ಬರೀ ಸುಳ್ಳು ಹೇಳುವ ಬಿಜೆಪಿಯವರಿಗೆ ಜೆಡಿಎಸ್-ಕಾಂಗ್ರೆಸ್‍ನವರು ತಕ್ಕ ಉತ್ತರ ನೀಡಬೇಕು. ಇದನ್ನೇ ಜನರಿಗೆ, ಮತದಾರರಿಗೆ ಹೇಳಿ ಬಿಜೆಪಿಯ ಬಣ್ಣ ಬಯಲು ಮಾಡಬೇಕು ಎಂದು ಹೇಳಿದರು.

28 ಕ್ಷೇತ್ರದಲ್ಲೂ ಪ್ರಚಾರಕ್ಕೆ ಹೋಗುತ್ತೇನೆ…: ಮಂಡ್ಯ, ಹಾಸನ, ತುಮಕೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರದಲ್ಲೂ ಪ್ರಚಾರಕ್ಕೆ ಹೋಗುತ್ತೇನೆ. ಜೆಡಿಎಸ್ ನಾಯಕರೂ ಎಲ್ಲಾ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಾರೆ. ಕೆಲವರು ಆ ಕ್ಷೇತ್ರಕ್ಕೆ ಹೋಗುವುದಿಲ್ಲ, ಈ ಕ್ಷೇತ್ರಕ್ಕೆ ಹೋಗುವುದಿಲ್ಲ ಎಂದು ಅಪಪ್ರಚಾರ ಮಾಡಬಹುದು. ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಬಿನ್ನಾಭಿಪ್ರಾಯಕ್ಕೆ ಎಡೆ ಮಾಡಿಕೊಡಬೇಡಿ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಕ್ಕೆ ತೆರೆ ಎಳೆಯಬೇಕು ಎಂದರು.

Translate »