ಮಾಜಿ ಸಚಿವ ವೈಜನಾಥ ಪಾಟೀಲ ನಿಧನ
ಮೈಸೂರು

ಮಾಜಿ ಸಚಿವ ವೈಜನಾಥ ಪಾಟೀಲ ನಿಧನ

November 3, 2019

ಕಲಬುರ್ಗಿ: ಮಾಜಿ ಸಚಿವ ವೈಜನಾಥ ಪಾಟೀಲ ಬೆಂಗಳೂರಿನ ವೊಕಾರ್ಡ್ ಫೋರ್ಟೀಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ ೮೨ ವರ್ಷ ವಯಸ್ಸಾಗಿತ್ತು. ಕಳೆದ ಹಲವು ದಿನಗಳಿಂದ ಅನಾ ರೋಗ್ಯದಿಂದ ಬಳಲುತ್ತಿದ್ದ ವೈಜನಾಥ ಪಾಟೀಲರಿಗೆ, ಬೆಂಗ ಳೂರಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಕಾರಿ ಯಾಗದೆ ಪಾಟೀಲ ನಿಧನರಾಗಿದ್ದಾರೆ.

ಮೂಲತಃ ಬೀದರ್ ಜಿಲ್ಲೆಯವರಾಗಿದ್ದ ವೈಜನಾಥ ಪಾಟೀಲ, ಕಲಬುರ್ಗಿಯನ್ನು ತಮ್ಮ ರಾಜಕೀಯ ಕರ್ಮಭೂಮಿಯನ್ನಾಗಿಸಿ ಕೊಂಡಿದ್ದರು. ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ೧೯೯೪ರಲ್ಲಿ ಜನತಾದಳದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಜೆಡಿಎಸ್‌ನಿಂದ ೨೦೦೪ರಲ್ಲಿ ೨ನೇ ಬಾರಿಗೆ ಶಾಸಕರಾದರು. ಒಮ್ಮೆ ವಿಧಾನಪರಿಷತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ತೋಟಗಾರಿಕೆ ಹಾಗೂ ನಗರಾಭಿವೃದ್ಧಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಹಿಂದುಳಿದ ಹೈದರಾಬಾದ್ ಕರ್ನಾಟಕಕ್ಕೆ ಅಭಿವೃದ್ಧಿ ವಿಷಯದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ನಗರಾಭಿವೃದ್ಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಪಾಟೀಲ, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯನ್ನು ಅಸ್ತಿತ್ವಕ್ಕೆ ತಂದಿದ್ದರು. ಸಮಿತಿಯ ಮೂಲಕವೇ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕೊಡಿಸಲು ನಿರಂತರ ಹೋರಾಟ ನಡೆಸಿದ್ದರು. ಕೊನೆಗೆ ಕಲಂ ೩೭೧(ಜೆ)ಗೆ ತಿದ್ದುಪಡಿಯಾಗಿ, ವಿಶೇಷ ಸ್ಥಾನಮಾನವೂ ಸಿಕ್ಕಿದ್ದು, ಪಾಟೀಲರು ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು.

ಜನತಾ ಪರಿವಾರದಿಂದ ರಾಜಕೀಯ ಪ್ರವೇಶ ಮಾಡಿದ ಪಾಟೀಲ, ನಂತರದಲ್ಲಿ ಕಾಂಗ್ರೆಸ್, ಕೆಜೆಪಿಗೆ ಪಕ್ಷಾಂತರ ಮಾಡಿ, ಕೆಲ ತಿಂಗಳ ಹಿಂದೆ ನಡೆದಿದ್ದ ಚಿಂಚೋಳಿ ಉಪ ಚುನಾ ವಣೆಯಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಪಾಟೀಲರ ನಿಧನಕ್ಕೆ ಕಲ್ಯಾಣ ಕರ್ನಾಟಕದ ಜನತೆ ಕಂಬನಿ ಮಿಡಿದಿದೆ. ಪಾಟೀಲರ ಅಂತ್ಯಕ್ರಿಯೆ ಅವರ ರಾಜಕೀಯ ಕರ್ಮಭೂಮಿ ಚಿಂಚೋಳಿ ಯಲ್ಲಿ ನಾಳೆ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ.

ವೈಜನಾಥ ಪಾಟೀಲ ಅವರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನಮಿಸಿದ್ದಾರೆ. ಅಲ್ಲದೆ, ಇವರ ನಿಧನಕ್ಕೆ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದ್ದು, ಪಾಟೀಲÀರು ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ದುಡಿದಿದ್ದರು. ಅಧಿವೇಶನದ ಒಳಗೆ ಹೊರಗೆ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ದನಿ ಎತ್ತುತ್ತಿದ್ದರು. ಅವರಿಗೆ ನನ್ನ ಹೃದಯಪೂರ್ವಕ ಶ್ರದ್ದಾಂಜಲಿಗಳು ಎಂದು ಹೇಳಿದ್ದಾರೆ.

Translate »