ಮೈಸೂರು: ಸ್ವಚ್ಛ ದಂತ ಅಭಿಯಾನದಡಿ ಮೈಸೂರಿನ ಕುಕ್ಕರ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ದಂತ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಯಿತು. ಮೈಸೂರಿನ ಅನಿ ಫೌಂಡೇಷನ್, ಮೈಸೂರು ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳ ದಂತ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸ್ವಚ್ಛ ದಂತ ಅಭಿಯಾನ ಹಮ್ಮಿಕೊಂಡಿತ್ತು. ಅನಿ ಫೌಂಡೇಷನ್ ಮುಖ್ಯಸ್ಥೆ ದಂತ ಶಸ್ತ್ರ ಚಿಕಿತ್ಸಾ ತಜ್ಞೆ ಡಾ.ಎನ್.ಅನುಶ್ರೀ, ದಂತ ವೈದ್ಯರೊಂದಿಗೆ ಎಲ್ಲಾ ತರಗತಿಗಳಿಗೆ ತೆರಳಿ ಹಲ್ಲು ಉಜ್ಜುವ ವಿಧಾನ, ಸಂರಕ್ಷಣೆ, ಬಳಸುವ ಪೇಸ್ಟ್ ಪ್ರಮಾಣ, ಒಸಡು ರಕ್ಷಣೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ಉಪನ್ಯಾಸ ನೀಡಿ ಅರಿವು ಮೂಡಿಸಿದರು.
ಇದೇ ವೇಳೆ ದಂತ ಶಸ್ತ್ರ ಚಿಕಿತ್ಸಾ ತಜ್ಞೆ ಡಾ.ಎನ್.ಅನುಶ್ರೀ, ಮಕ್ಕಳ ದಂತ ತಜ್ಞರಾದ ಡಾ.ನಿಗರ್ಸ ಕನ್ಸರ್ ಮಾತನಾಡಿ, ಬಾಲ್ಯದಲ್ಲಿಯೇ ದಂತ ಆರೋಗ್ಯದ ಬಗ್ಗೆ ಕಾಳಜಿ ತೋರುವುದು ಅಗತ್ಯ. ಆದರೆ ಕೆಲವರು ನಿರ್ಲಕ್ಷಿಸುತ್ತಾರೆ. ಇದರಿಂದ ಬೆಳೆಯುವ ಹಂತದಲ್ಲಿ ದಂತ ವಕ್ರವಾಗಬಹುದು. ಅಲ್ಲದೆ, ಹಲ್ಲುಜ್ಜುವಾಗ ಸುರಕ್ಷತೆ ಹಾಗೂ ವೈಜ್ಞಾನಿಕವಾಗಿ ಹಲ್ಲು ಉಜ್ಜಬೇಕಾಗಿದೆ. ಬೇಕಾಬಿಟ್ಟಿ ಹಲ್ಲುಜ್ಜುವುದರಿಂದ ಒಸಡು ಸವೆದು ಹಲ್ಲು ಉದುರುತ್ತವೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ದಂತ ಚಿಕಿತ್ಸೆ ನೀಡಿ, ಜಾಗೃತಿ ಮೂಡಿಸುವುದರೊಂದಿಗೆ ಬ್ರಷ್, ಟೂತ್‍ಪೇಸ್ಟ್ ಉಚಿತವಾಗಿ ನೀಡಲಾಗುತ್ತಿದೆ. ದೈಹಿಕ ಆರೋಗ್ಯದೊಂದಿಗೆ ದಂತ ಆರೋಗ್ಯ ಕಾಪಾಡಿಕೊಳ್ಳುವುದು ಮಹತ್ವದ್ದಾಗಿದೆ ಎಂದರು.