ಕಳಪೆ ಕಾಮಗಾರಿ: ಹುಣಸೂರಲ್ಲಿ ವಿದ್ಯುತ್ ಕಂಬಗಳ ತೆರವು
ಮೈಸೂರು

ಕಳಪೆ ಕಾಮಗಾರಿ: ಹುಣಸೂರಲ್ಲಿ ವಿದ್ಯುತ್ ಕಂಬಗಳ ತೆರವು

February 11, 2019

ಹುಣಸೂರು: ಹುಣಸೂರು ನಗರ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರ ಅನುದಾನ 7.20 ಕೋಟಿ ರೂ.ವೆಚ್ಚದಲ್ಲಿ ಕೈಗೊಂಡಿರುವ ಸಮಗ್ರ ವಿದ್ಯುತ್ ಅಭಿವೃದ್ಧೀಕರಣ ಕಾಮಗಾರಿ ಕಳಪೆ ಎಂದು ಪರಿಶೀಲನೆಯಿಂದ ತಿಳಿದು ಬಂದ ಹಿನ್ನೆಲೆಯಲ್ಲಿ ಇಲಾಖೆಯ ಕ್ವಾಲಿಟಿ ಕಂಟ್ರೋಲ್ ಸಿಬ್ಬಂದಿ ಅಳವಡಿಸಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.

ಹುಣಸೂರು ನಗರ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ 7.20 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ವಿದ್ಯುತ್ ಅಭಿವೃದ್ಧೀಕರಣ ಕಾಮಗಾರಿ ಕಳಪೆಯಾಗಿದ್ದು, ವಿದ್ಯುತ್ ಕಂಬಗಳನ್ನು 5.6 ಅಡಿ ಅಳಕ್ಕೆ ನೆಡುವ ಬದಲು ಕೇವಲ 2 ಅಡಿ ಅಳಕ್ಕೆ ನೆಟ್ಟಿದ್ದರಿಂದ ಮುಂದಿನ ದಿನಗಳಲ್ಲಿ ಅನಾಹುತಗಳಾಗುವ ಸಂಭವವಿದ್ದು, ಕಾಮಗಾರಿ ಗುತ್ತಿಗೆ ಪಡೆದುಕೊಂಡ ಏಜನ್ಸಿಯವರು ಇಲಾಖೆ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಸೇವಾ ಕಾರ್ಯಕರ್ತ ಇಂಟಕ್ ರಾಜು ದೂರು ನೀಡಿದ್ದರು.

ಮಂಡ್ಯದ ಏಜೆನ್ಸಿಯೊಂದಕ್ಕೆ ಈ ಕಾಮಗಾರಿಯ ಗುತ್ತಿಗೆ ನೀಡಿದ್ದು ಏಜೆನ್ಸಿಯವರು ಇಲಾಖೆಯ ಮಾನದಂಡದಂತೆ ಕಾಮಗಾರಿ ಮಾಡದೆ ಇಲಾಖೆಗೆ ಮೋಸ ಮಾಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಮಂಡ್ಯದ ಕಾಮಗಾರಿ ಯಾಗಿರುವುದು ತಿಳಿದು ಬಂದ ಕಾರಣ ಇಲಾಖೆಯ ಕ್ವಾಲಿಟಿ ಕಂಟ್ರೋಲ್ ಸಿಬ್ಬಂದಿ ಏಜನ್ಸಿ ನಗರದದ್ಯಾಂತ ಅಳವಡಿಸಿರುವ ವಿದ್ಯುತ್ ಕಂಬಗಳನ್ನು ತೆರವು ಗೊಳಿಸಿದರು.

ಏಜೆನ್ಸಿಯವರಿಗೆ 2017ರ ಜ.24ರಂದು ಗುತ್ತಿಗೆ ಮಂಜೂರಾಗಿತ್ತು. ಇಲಾಖೆಯ ನಿಯಮದಂತೆ 6 ತಿಂಗಳಿನಿಂದ ವರ್ಷದ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಅದರೆ ಇವರು ಎರಡು ವರ್ಷ ಕಳೆದರೂ ಶೇ.25ರಷ್ಟು ಕೆಲಸ ಪೂರ್ಣಗೊಳಿಸಲಾಗಿಲ್ಲ. ಈ ಬಗ್ಗೆ ಇಲಾಖೆಯವರು ಸಹ ಈ ಕಾಮಗಾರಿ ಬಗ್ಗೆ ಎಚ್ಚರಿಕೆ ವಹಿಸದ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ರಾಜು ಮಾತನಾಡಿ, ಹುಣಸೂರು ನಗರ ಬೆಳೆಯುತ್ತಿರುವ ಉಪವಿಭಾಗ ಕೇಂದ್ರವಾಗಿದ್ದು, ಇಲ್ಲಿನ ನಗರ ವ್ಯಾಪ್ತಿಯಲ್ಲಿನ ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ 7, 19 ಕೋಟಿ ರೂ.ಗಳನ್ನು ಮಂಜೂರು ಮಾಡಿ ಸಂಗಮಿತ್ರ ಏಜೆನ್ಸಿಯವರಿಗೆ ಗುತ್ತಿಗೆ ನೀಡಿತ್ತು. ಇವರು ಕಳಪೆ ಕಾಮಗಾರಿ ಮಾಡುವ ಮೂಲಕ ಇಲಾಖೆ ಕಣ್ಣಿಗೆ ಮಣ್ಣೆರೆಚಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಗಮಿತ್ರ ಏಜೆನ್ಸಿ ಗುತ್ತಿಗೆ ಪಡೆದು 2 ವರ್ಷ ಕಳೆದರೂ ಈ ವರೆವಿಗೆ ಏಜೆನ್ಸಿಯವರು 715 ಕಂಬಗಳ ಪೈಕಿ 215 ಕಂಬಗಳನ್ನು ಅಳವಡಿಸಿದ್ದರು. 11ಕೆ.ವಿಯ ಹೊಸ ಎಬಿಸಿ ಲೈನ್ 15 ಕಿ.ಮೀ. ಎಳೆಯಬೇಕಾಗಿದ್ದು, ಕೇವಲ 1.5ಕಿ.ಮೀ ಮತ್ರ ಎಳೆದಿದ್ದಾರೆ 30 ಟಿ.ಸಿಗಳನ್ನು ಅಳವಡಿಸಬೇಕಾಗಿದ್ದು, 2 ವರ್ಷವಾದರೂ ಈ ವರೆವಿಗೆ ಕೇವಲ ಒಂದೇ ಒಂದು ಟಿ.ಸಿಯನ್ನು ಅಳವಡಿಸಿಲ್ಲ ಹಾಗೂ 11 ಕೆ.ವಿಯ ಯು.ಜಿ ಕೇಬಲ್ 45 ಕಿ.ಮೀ ಅಳವಡಿಸಬೇಕು. ಅದರಲ್ಲಿ ಕೇವಲ 27 ಕಿ.ಮಿ ಮಾತ್ರ ಅಳವಡಿಸಿದ್ದಾರೆ. 11 ಕೆ.ವಿಯ 7ಕಿ.ಮೀ ವಿಂಗಡಣಾ ಲೈನ್ ಮಾಡಬೇಕು. ಈವರೆವಿಗೆ ಏನು ಮಾಡಿಲ್ಲ. ಹೀಗೆ ಎಲ್ಲಾ ಕಾಮಗಾರಿಗಳು ನಿದಾನಗತಿಯಾಗಿದ್ದು, ಅಲ್ಲದೆ ಎಲ್ಲಾ ಕಾಮಗಾರಿಗಳು ಇಲಾಖೆಯ ಮಾನದಂಡಕ್ಕೆ ಸರಿಯಾಗಿ ಮಾಡದೆ ಕಳಪೆ ಗುಣಮಟ್ಟದಿಂದ ಕೂಡಿದ್ದು, ಈ ಬಗ್ಗೆ ಸಮಗ್ರ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ದೂರಿನ ಹಿನ್ನೆಲೆಯಲ್ಲಿ ಇಲಾಖೆಯ ಕಾರ್ಯಪಾಲ ಅಭಿಯಂತರರು ಪರಿಶೀಲಿಸಿದಾಗ ಇಲಾಖೆಯ ಮಾನದಂಡಕ್ಕೆ ಅನುಗುಣವಾಗಿ ಕೆಲಸ ಮಾಡಿಲ್ಲ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಕ್ವಾಲಿಟಿ ಕಂಟ್ರೋಲ್ ನವರು ಬಂದು ಏಜೆನ್ಸಿಯವರು ಭೂಮಿಗೆ ನೆಟ್ಟಿರುವ ವಿದ್ಯುತ್ ಕಂಬಗಳನ್ನು ಕಿತ್ತು ಹಾಕಲಾಗಿದೆ ಮತ್ತು ಏಜೆನ್ಸಿಯವರ ಕೆಲಸವನ್ನು ತಡೆದು ನಿಲ್ಲಿಸಿದ್ದಾರೆ ಎಂದರು.

Translate »