ನಂಜನಗೂಡು: ತಾಲೂಕಿನ ರೈತಾಪಿ ವರ್ಗದ ಬಹು ಬೇಡಿಕೆಯಾಗಿದ್ದ ನುಗು ಏತ ನೀರಾವರಿ ಯೋಜನೆಗೆ ರಾಜ್ಯದ ಸಮ್ಮಿಶ್ರ ಸರ್ಕಾರವು ಬಜೆಟ್ ಅಧಿವೇಶದಲ್ಲಿ 80 ಕೋಟಿ ರೂ. ಮೀಸಲಿಟ್ಟಿರುವುದು ತಾಲೂಕಿನ ರೈತರಿಗೆ ಸಮ್ಮಿಶ್ರ ಸರ್ಕಾರದಿಂದ ನೀಡಿದ ಕೊಡುಗೆ ಎಂದು ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ ಸಂತಸ ವ್ಯಕ್ತಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಜನರ ಬಹು ದಿನಗಳ ಬೇಡಿಕೆಯಾದ ಕಬಿನಿ ಜಲಾಶಯದಿಂದ ನುಗು ಅಣೆಕಟ್ಟಿಗೆ ನೀರನ್ನು ತುಂಬಿಸುವ ಯೋಜನೆಯಾದ ನುಗು ಏತ ನೀರಾವರಿ ಯೋಜನೆ ಅನುಷ್ಠಾನಗೊಳ್ಳುವುದರಿಂದ ಈ ಭಾಗದ ರೈತಾಪಿ ವರ್ಗಕ್ಕೆ ವರದಾನವಾಗಿದೆ ಎಂದರು.
ಬಹಳ ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿದ್ದ ನುಗು ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವಂತೆ ಕಳೆದ ಅವಧಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಿದ್ದೇವು. ಈ ಬಾರಿ ಮೈತ್ರಿ ಸರ್ಕಾರದ ಬಜೆಟ್‍ನಲ್ಲಿ ಯೋಜನೆ ಚಾಲನೆ ಸಿಕ್ಕಿದೆ. ಇದಕ್ಕೆ ಕಾರಣೀಭೂತರಾದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಜಲ ಸಂಪನ್ಮೂಲ ಸಚಿವ ಡಿಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸಧ ಆರ್.ಧೃವನಾರಾಯಣ್ ಕಾರ್ಯ ಶ್ಲಾಘನೀಯ ಎಂದು ಅಭಿನಂದಿಸಿದರು.
ಈ ಯೋಜನೆಯಿಂದ ಈ ಭಾಗದ ಕೆರೆ-ಕಟ್ಟೆಗಳು ತುಂಬಿ ಜನಜಾನುವಾರು ಅನುಕೂಲವಾಗಲಿದ್ದು. ಸುಮಾರು 20 ಸಾವಿರ ಎಕರೆ ಪ್ರದೇಶದದಲ್ಲಿರುವ ರೈತಾಪಿ ವರ್ಗದ ಜನರಿಗೆ ಸಂತಸ ತಂದಿದೆ ಎಂದರಲ್ಲದೆ ಕಳೆದ ಬಾರಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹುರ ಹೋಬಳಿ ಭಾಗದ ಈ ಕೆರೆಕಟ್ಟೆಗಳನ್ನು ತುಂಬಿಸಲು 48 ಕೋಟಿ ರೂ ಅನುದಾನ ಬಿಡುಗಡೆ ಮಾಡಿ, ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಶಟ್ಟಹಳ್ಳಿ ಗುರುಸ್ವಾಮಿ, ಪಿ.ಶ್ರೀನಿವಾಸ್, ಜಿಪಂ ಸದಸ್ಯರಾದ ಲತಾಸಿದ್ದಶಟ್ಟಿ, ಪುಷ್ಪನಾಗೇಶ್‍ರಾಜ್, ನಗರಸಭಾ ಅಧ್ಯಕ್ಷರಾದ ಪುಷ್ವಲತಾಕಮಲೇಶ್, ತಾಪಂ ಸದಸ್ಯ ಹಾಡ್ಯ ಶಿವಣ್ಣ, ಮಾಜಿ ತಾಪಂ ಅಧ್ಯಕ್ಷರಾದ ನಾಗೇಶ್‍ರಾಜ್, ಮುಖಂಡರಾದ ಸಿದ್ದಶಟ್ಟಿ, ಲೋಕೇಶ್, ಗಣೇಶ್ ಉಪಸ್ಥಿತರಿದ್ದರು.