ಮನುಷ್ಯನಿಂದ ಮಾತ್ರ ಪ್ರಕೃತಿ ನಾಶ: ವಿಷಾದ
ಮೈಸೂರು

ಮನುಷ್ಯನಿಂದ ಮಾತ್ರ ಪ್ರಕೃತಿ ನಾಶ: ವಿಷಾದ

February 11, 2019

ಹೆಚ್.ಡಿ.ಕೋಟೆ: ಈ ಭೂಮಿಯ ಮೇಲಿನ ಸಕಲ ಜೀವರಾಶಿಗಳಿಗೂ ಬದುಕುವ ಹಕ್ಕಿದೆ, ಎಲ್ಲಾ ಜೀವರಾಶಿಗಳು, ಸಸ್ಯ ಸಂಪತ್ತುಗಳು ತಮ್ಮಷ್ಟಕ್ಕೆ ತಾವು ಬದುಕುತ್ತವೆ. ಆದರೆ ಮನುಷ್ಯ ಜೀವಿ ಮಾತ್ರ ಪ್ರಕೃತಿಯ ನಾಶಗೊಳಿಸುತ್ತಿದ್ದಾನೆ ಎಂದು ಸಾಹಿತಿ ಕ್ಷೀರಸಾಗರ್ ವಿಷಾದಿಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ಕಸ್ತೂರಿ ಜನನಿ ಸಂಸ್ಥೆಯ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಮನುಷ್ಯ ಅತಿಯಾದ ಆಸೆಯೆ ಇಷ್ಟೆಲ್ಲಾ ನಾಶಕ್ಕೆ ಕಾರಣವಾಗುತ್ತಿದ್ದು, ಎಲ್ಲರೂ ಪ್ರಕೃತಿಯ ಮಕ್ಕಳು, ಪ್ರಕೃತಿಯಲ್ಲಿ ಜೀವಿಸುವ ಹಕ್ಕಿದೆ ಪರಿಸರವನ್ನು ಹಾಳುಮಾಡಲು ನಮಗೆ ಯಾವುದೇ ಹಕ್ಕಿಲ್ಲ, ಅದೆಲ್ಲವೂ ನಮ್ಮಗಳ ದುರಾಸೆಯಿಂದ ಕೂಡಿದ್ದು ಎಂದರು.
ಆದ್ದರಿಂದ ಪ್ರತಿಯೊಬ್ಬರೂ ಮರ, ಗಿಡಗಳನ್ನು ಬೆಳಸಬೇಕು. ಆ ಮೂಲಕ ಪ್ರಕೃತಿಗೆ ಉತ್ತಮ ಗಾಳಿಯನ್ನು ನೀಡಬೇಕು. ಯಾವುದೇ ಕೆಲಸವನ್ನು ಮಾಡುವಾಗ ನಮ್ಮಿಂದ ಪರಿಸರಕ್ಕೆ ಎಷ್ಟು ಪ್ರಮಾಣದ ಹಾನಿಯಾಗುತ್ತಿದೆ. ಅದನ್ನು ತಪ್ಪಿಸಲು ನಾವು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿಕೊಳ್ಳಬೇಕಿದೆ. ಅದನ್ನು ಸರಿಪಡಿಸಬೇಕು. ಆ ಮೂಲಕ ಪರಿಸರ ಜಾಗೃತಿಯೇ ಪರಮ ಗುರಿಯಾಗಿಸಿಕೊಂಡರೆ ಮಾತ್ರ ಭೂಮಿಯ ಮೇಲಿನ ವಾತಾವರಣದ ಅಸಮತೋಲ ಕಾಪಾಡಿಕೊಳ್ಳಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನೂತನ ಅಧ್ಯಕ್ಷ ಕಸ್ತೂರಿ ಮಹೇಶ್ ಮತ್ತು ಪ್ರದಾನ ಕಾರ್ಯದರ್ಶಿ ಕಸ್ತೂರಿ ಗೋವಿಂದರಾಜು, ಖಜಾಂಚಿ ಕಸ್ತೂರಿ ರಾಕೇಶ್ ಶರ್ಮಾ ಮತ್ತು ಸದಸ್ಯರಿಗೆ ಪದವಿ ಪ್ರದಾನ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಸಂಸ್ಥೆಯ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ನಿವೃತ್ತ ತಹಶೀಲ್ದಾರ್ ಮತ್ತು ಸಂಸ್ಥೆಯ ರಾಜ್ಯಪಾಲರಾದ ಡಿ.ಎಸ್.ಶಿವಕುಮಾರಸ್ವಾಮಿ, ಸಾಹಿತಿಗಳಾದ ಡಾ.ಕುಮಾರ್‍ಅಂಕನಹಳ್ಳಿ, ಡಾ.ರವಿಶಂಕರ್, ತಾಲೂಕು ಆರೋಗ್ಯಾಧಿಕಾರಿ ಟಿ.ರವಿ ಕಾರ್ಯಕ್ರಮ ಉದ್ಘಾಟಿಸಿದರು. ನಿಕಟಪೂರ್ವ ಅಧ್ಯಕ್ಷ ಡಿ.ಪ್ರಕಾಶ್, ವರ್ತಕರ ಸಂಘದ ಅಧ್ಯಕ್ಷ ಜಿ.ರವಿ, ಸಂಸ್ಥಾಪಕ ಕಸ್ತೂರಿ ಸತೀಶ್, ವಿ.ರಾಘವೇಂದ್ರಸ್ವಾಮಿ, ಪಟೇಲ್ ರಾಜೇಗೌಡ, ನಾಗೇಗೌಡ, ಯಶವಂತ್, ಸಿದ್ದರಾಜು, ಸಂತು, ಕೆಂಪನಾಯಕ, ಹಿಲೆರಿ ಇದ್ದರು.

Translate »