ಆದಿಚುಂಚನಗಿರಿ ಮಠಕ್ಕೆ ಸುಮಲತಾ ಅಂಬರೀಶ್ ಭೇಟಿ:  ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಸುಮಲತಾ
ಮಂಡ್ಯ

ಆದಿಚುಂಚನಗಿರಿ ಮಠಕ್ಕೆ ಸುಮಲತಾ ಅಂಬರೀಶ್ ಭೇಟಿ: ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಸುಮಲತಾ

February 11, 2019
  • ರಾಜಕೀಯ ಪ್ರವೇಶ ಅಂಬಿ ಆಶಯವಲ್ಲ, ಅಭಿಮಾನಿಗಳ ಆಶಯ
  • ಕಾಂಗ್ರೆಸ್‍ನಿಂದ ಸ್ಪರ್ಧೆಗೆ ನನ್ನ ಪ್ರಥಮ ಆದ್ಯತೆ

ಮಂಡ್ಯ: ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಸುಮಲತಾ, ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ಕಾಂಗ್ರೆಸ್ ಪಕ್ಷ ನನ್ನ ಮೊದಲ ಆದ್ಯತೆ ಎಂದು ತಿಳಿಸಿದರು.

ನಾಗಮಂಗಲ ತಾಲೂಕಿನ ಆದಿಚುಂಚನ ಗಿರಿ ಶ್ರೀಕ್ಷೇತ್ರಕ್ಕೆ ಭಾನುವಾರ ಬೆಳಿಗ್ಗೆ ಪುತ್ರ ಅಭಿಷೇಕ್ ಸೇರಿದಂತೆ ಚಿತ್ರರಂಗದ ಗಣ್ಯ ರೊಂದಿಗೆ ಭೇಟಿ ನೀಡಿ ಕಾಲಭೈರವೇಶ್ವರನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಅವರು, ನಂತರ ಮಠಕ್ಕೆ ತೆರಳಿ ಶ್ರೀನಿರ್ಮಲಾನಂದ ನಾಥ ಸ್ವಾಮೀಜಿಗಳ ಆಶೀರ್ವಾದ ಪಡೆದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನನ್ನ ರಾಜಕೀಯ ಪ್ರವೇಶ ಅಂಬರೀಶ್ ಅವರ ಆಶಯವಲ್ಲ. ಅಭಿಮಾನಿಗಳ ಆಶಯ. ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಾ ದರೇ ಅದು ಮಂಡ್ಯದಿಂದ ಮಾತ್ರ. ಬೇರೆ ಇನ್ಯಾವ ಕ್ಷೇತ್ರದಿಂದಲೂ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಸುಮಲತಾ, ರಾಜ ಕೀಯದಲ್ಲಿ ಅಂಬರೀಶ್ ಹೆಚ್ಚಾಗಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಹೀಗಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸಿದರೇ ಕಾಂಗ್ರೆಸ್ ಪಕ್ಷ ನನ್ನ ಮೊದಲ ಆದ್ಯತೆ ಆಗಿರಲಿದೆ. ಆದರೆ ಸಾಮಾಜಿಕ ಜಾಲತಾಣ ಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುವುದಾಗಿ ಹರಿದಾಡುತ್ತಿರುವ ಸುಳ್ಳು ಸುದ್ದಿಗೆ ಅಭಿಮಾನಿ ಗಳು ಹಾಗೂ ಕಾರ್ಯಕರ್ತರು ಕಿವಿಗೊಡ ಬಾರದು. ರಾಜಕೀಯ ಪ್ರವೇಶದ ಬಗ್ಗೆ ಇನ್ನೂ ಗೊಂದಲವಿದೆ. ಈ ಬಗ್ಗೆ ಹಿರಿಯರ ಸಲಹೆ ಪಡೆದು ಅಂತಿಮ ತೀರ್ಮಾನ ಪ್ರಕಟಿಸುತ್ತೇನೆ ಎಂದರು.

ಮುಂಬರುವ ಲೋಕಸಭಾ ಚುನಾವಣೆ ಯಲ್ಲಿ ಮಂಡ್ಯದಿಂದ ಸ್ಪರ್ಧಿಸುವಂತೆ ಅಭಿಮಾನಿಗಳು ಒತ್ತಡ ಹಾಕಿದ್ದಾರೆ. ಅವರ ಆಸೆ ಸೋಲಬಾರದು. ಅಂಬರೀಶ್ ಅವರು ಮಂಡ್ಯದೊಂದಿಗೆ ಹೊಂದಿದ್ದ ಗಾಢವಾದ ಸಂಬಂಧ ಉಳಿಸಿಕೊಳ್ಳಬೇಕೆಂಬ ಅದಮ್ಯ ಹಂಬಲವಿದ್ದು, ಜನರ ಪ್ರೀತಿ ವಿಶ್ವಾಸ ಉಳಿಸಿಕೊಳ್ಳುವ ಆಸೆಯಿದೆ. ಅದನ್ನು ಹೇಗೆ ಉಳಿಸಿಕೊಳ್ಳುತ್ತೇವೆ ಎಂಬುದು ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ ಎಂದರು.
ನಾನು ಯಾವುದೇ ಎಂಎಲ್‍ಎ, ಎಂಪಿ ಹಾಗೂ ಮಂತ್ರಿಗಿರಿಗೆ ಆಸೆಪಟ್ಟ ವಳಲ್ಲ. ಅಲ್ಲದೇ ನಾನು ಸೀಸನ್ ರಾಜಕಾರಣಿ ಯಾಗಲು ಇಷ್ಟ ಪಡುವುದಿಲ್ಲ. ನನ್ನ ಏಕೈಕ ಉದ್ದೇಶ ಅಂಬಿ ಅಭಿಮಾನಿಗಳ ಅಭಿಮಾನಕ್ಕೆ ಧಕ್ಕೆ ಬಾರದಂತೆ ಅವರ ಅಭಿಮಾನ ಉಳಿಸಿಕೊಂಡು ಹೋಗುತ್ತೇನೆ ಎಂದರು.

ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಎಂಎಲ್‍ಸಿ ಕೆ.ಟಿ.ಶ್ರೀಕಂಠೇಗೌಡರ ವಿವಾ ದಾತ್ಮಕ ಹೇಳಿಕೆ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅಲ್ಲದೇ ಶ್ರೀಗಳೊಂದಿಗೆ ಬೇರೇನೂ ಚರ್ಚೆ ಮಾಡಿಲ್ಲ. 2 ತಿಂಗಳ ಹಿಂದೆಯೇ ಶ್ರೀಕ್ಷೇತ್ರಕ್ಕೆ ಭೇಟಿ ಕೊಡಬೇಕಿತ್ತು. ಇವತ್ತು ಕಾಲ ಕೂಡಿ ಬಂದಿದೆ. ಅಭಿಷೇಕ್ ನಟಿಸಿದ ಚಿತ್ರದ ಫಸ್ಟ್ ಟೀಸರ್ ಇದೇ ತಿಂಗಳ 14 ರಂದು ರಿಲೀಸ್ ಆಗುತ್ತಿದೆ. ಹೀಗಾಗಿ ದೇವರ ದರ್ಶನ, ಶ್ರೀಗಳ ಆಶೀರ್ವಾದ ಪಡೆ ಯಲು ಬಂದಿದ್ದೇವೆ. ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.
ರಾಜಕೀಯ ಪ್ರವೇಶಿಸುವಂತೆ ತಮ್ಮ ಮೇಲಿರುವ ಒತ್ತಡ, ಇದಕ್ಕೆ ಜೆಡಿಎಸ್ ಪಾಳಯದಿಂದ ವ್ಯಕ್ತವಾಗುತ್ತಿರುವ ಪ್ರತಿರೋಧ, ಮುಂದಿನ ನಡೆಗಳ ಕುರಿತು ಸುಮಲತಾ ಅವರು ಶ್ರೀಗಳಿಂದ ಸಲಹೆ, ಮಾರ್ಗ ದರ್ಶನ ಪಡೆದರು ಎಂದು ಹೇಳಲಾಗಿದೆ.
ರಾಜಕೀಯಕ್ಕೆ ಪಾದರ್ಪಣೆ ಮಾಡುವ ಪ್ರತಿಯೊಬ್ಬರೂ ಕ್ಷೇತ್ರಕ್ಕೆ ಬಂದು ಪೂಜೆ ಸಲ್ಲಿಸಿ ನಂತರ ಮುಂದಡಿ ಇಡುವುದು ವಾಡಿಕೆ. ಅದಕ್ಕೆ ಪುಷ್ಠಿ ನೀಡುವಂತೆ ಸುಮಲತಾ ಅವರ ಭೇಟಿ ಪ್ರಸ್ತುತ ರಾಜಕೀಯದ ಬೆಳವಣಿಗೆ ಯಲ್ಲಿ ಹಲವು ಚರ್ಚೆಗೆ ಗ್ರಾಸವಾಗಿದೆ.
ಈ ವೇಳೆ ಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಹಲವರಿದ್ದರು.

Translate »