ಸೌಹಾರ್ದ ಸಹಕಾರಿ ದಿನ ಆಚರಣೆ
ಮೈಸೂರು

ಸೌಹಾರ್ದ ಸಹಕಾರಿ ದಿನ ಆಚರಣೆ

January 2, 2019

ಮೈಸೂರು: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಮೈಸೂರು ಪ್ರಾಂತೀಯ ಕಚೇರಿ ವತಿಯಿಂದ ಮಂಗಳವಾರ ಸೌಹಾರ್ದ ಸಹಕಾರಿ ದಿನವನ್ನು ಆಚರಿಸಲಾಯಿತು.

ಮೈಸೂರಿನ ಶಂಕರ ಮಠದ ರಸ್ತೆಯಲ್ಲಿರುವ ಪ್ರಾಂತೀಯ ಕಚೇರಿ ಎದುರು ನಡೆದ ದಿನಾಚರಣೆಯಲ್ಲಿ ಸಹಕಾರಿ ಧ್ವಜಾರೋಹಣ ವನ್ನು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕ ಹೆಚ್.ವಿ.ರಾಜೀವ್ ನೆರವೇರಿಸಿದರು. ಬಳಿಕ ಮಾತ ನಾಡಿದ ಅವರು, ಸಹಕಾರಿ ಕ್ಷೇತ್ರವನ್ನು ಪುನರ್ ಸಂಘಟಿಸಿ ಸಹಕಾರಿ ಗಳಿಗೆ ಸ್ವಾಯತ್ತತೆ ತಂದು ಕೊಡುವ ನಿಟ್ಟಿನಲ್ಲಿ 2001ರ ಜ.1ರಂದು ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ ಜಾರಿಗೆ ಬಂದಿತು. ಇದರ ಸ್ಮರಣೆಗಾಗಿ ಪ್ರತಿ ವರ್ಷ ಜ.1ರಂದು ಸೌಹಾರ್ದ ಸಹಕಾರಿ ದಿನ ಆಚರಿಸಿ, ಸಹಕಾರಿ ಧ್ವಜಾರೋಹಣ ಮಾಡಲಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಸೌಹಾರ್ದ ಸಹಕಾರಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಸೌಹಾರ್ದ ಸಹಕಾರಿ ಕಾಯ್ದೆ ಅಡಿ ಇಲ್ಲಿಯವರೆಗೆ 4,500ಕ್ಕೂ ಹೆಚ್ಚು ಸೌಹಾರ್ದ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವ ಹಿಸುತ್ತಿದ್ದು, 60 ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ. ಪತ್ತಿನ ಸಹಕಾರಿ ಗಳು, ಗ್ರಾಹಕ ಸಹಕಾರಿಗಳು, ಪಟ್ಟಣ ಸಹಕಾರಿ ಬ್ಯಾಂಕುಗಳು, ವಿವಿಧೋದ್ದೇಶ ಸಹಕಾರಿಗಳು, ಶೈಕ್ಷಣಿಕ ಸಹಕಾರಿಗಳು ಸೇರಿದಂತೆ ಒಟ್ಟು 13 ವಿಧದ ಸೌಹಾರ್ದ ಸಹಕಾರಿ ಸಂಸ್ಥೆಗಳಲ್ಲಿ ಮಾದರಿ ಕಾರ್ಯನಿರ್ವಹಣೆ ಕಾಣಬಹುದು ಎಂದು ಹರ್ಷ ವ್ಯಕ್ತಪಡಿಸಿದರು.

ರಾಜ್ಯದ ಬಹುತೇಕ ಸೌಹಾರ್ದ ಸಹಕಾರಿ ಸಂಸ್ಥೆಗಳು ಆಧುನಿಕ ತಂತ್ರಾಂಶ ಅಳವಡಿಸಿಕೊಂಡು ಮುನ್ನಡೆಯುತ್ತಿವೆ. ಸೌಹಾರ್ದ ಸಹಕಾರಿ ಸಂಸ್ಥೆಗಳಿಗೆ ಇ-ಸ್ಟ್ಯಾಂಪಿಂಗ್ ಮಾರಾಟ ಮಾಡಲು ರಾಜ್ಯ ಸರ್ಕಾರ ಅವಕಾಶ ನೀಡಿದ್ದು, 1,150ಕ್ಕೂ ಹೆಚ್ಚು ಇ-ಸ್ಟ್ಯಾಂಪಿಂಗ್ ಕೇಂದ್ರಗಳಲ್ಲಿ ಸೌಹಾರ್ದ ಸಹಕಾರಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ಪ್ರತಿದಿನ ಒಂದೂವರೆ ಕೋಟಿ ರೂಪಾಯಿಗೂ ಅಧಿಕ ಆದಾಯ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸೇರುತ್ತಿದ್ದು, ಇದು ಹೆಮ್ಮೆಯ ವಿಷಯ ಎಂದು ನುಡಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಕಾನೂನು ಅಧಿಕಾರಿ ಶಿವಕುಮಾರ ಬಿರಾದಾರ, ಮೈಸೂರು ಪ್ರಾಂತೀಯ ಅಧಿಕಾರಿ ವೈ.ಕುಮಾರ್, ಸೌಹಾರ್ದ ಅಭಿವೃದ್ಧಿ ಅಧಿಕಾರಿ ಆರ್.ಎಸ್.ಸುರೇಶ್ ಮತ್ತಿತರರು ಹಾಜರಿದ್ದರು.

Translate »