ಕೊಡಗಿನ ಪ್ರಕೃತಿ ವಿಕೋಪದಿಂದ ವಲಸೆ ಕಾರ್ಮಿಕರು, ಬುಡಕಟ್ಟು ಜನರ ಬದುಕು ಅಯೋಮಯ
ಕೊಡಗು

ಕೊಡಗಿನ ಪ್ರಕೃತಿ ವಿಕೋಪದಿಂದ ವಲಸೆ ಕಾರ್ಮಿಕರು, ಬುಡಕಟ್ಟು ಜನರ ಬದುಕು ಅಯೋಮಯ

September 24, 2018

ಮಡಿಕೇರಿ/ಕುಶಾಲನಗರ: ಇತ್ತೀಚೆಗೆ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ಹಾನಿಯಿಂದ ಬೀದಿಗೆ ಬಿದ್ದ ಸಾವಿರಾರು ವಲಸೆ ಕಾರ್ಮಿಕರು ಹಾಗೂ ಮೂಲ ನಿವಾಸಿಗಳಿಗೆ ಈಗ ಜೀವನ ನಡೆಸುವುದೇ ದುಸ್ತರವಾಗಿದೆ.

ಒಂದೆಡೆ ಭೂಕುಸಿತ ಹಾಗೂ ಪ್ರವಾಹದಿಂದ ಎಸ್ಟೇಟ್ ಮಾಲೀಕರು ಕಂಗಾಲಾಗಿದ್ದರೆ ಮತ್ತೊಂದೆಡೆ ದೂರದ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಿಂದ ವಲಸೆ ಬಂದ ಕಾರ್ಮಿಕರು ನಿತ್ಯದ ಕೂಳಿಗೂ ಪರಿತಪಿಸುವಂತಾಗಿದೆ. ಜಮೀನು ಕಳೆದುಕೊಂಡ ಮಾಲೀಕರು ತಮ್ಮ ಜಮೀನಿನ ಅಸ್ತಿತ್ವವನ್ನು ಹುಡುಕುತ್ತಿದ್ದರೆ ಮತ್ತೊಂದೆಡೆ ಇಲ್ಲಿನ ಬುಡಕಟ್ಟು ಜನ, ಹಾಗೂ ವಲಸೆ ಕಾರ್ಮಿಕರು ಮುಂದೆ ಏನು ಎಂದು ದಿಕ್ಕು ದೋಚದೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

ಬಹುತೇಕರು ನಿರಾಶ್ರಿತ ಶಿಬಿರಗಳಲ್ಲಿ ಕಾಲ ಕಳೆಯುತ್ತಿದ್ದರೆ ಇವರ ಮಕ್ಕಳು ಶಾಲೆಯಲ್ಲಿ ನಿರ್ಮಿಸಲಾದ ಶಿಬಿರಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ವಯಸ್ಸಾದವರು ತಮ್ಮ ಭವಿಷ್ಯದ ಕುರಿತು ಸಂಭಾಷಣೆಯಲ್ಲಿ ತೊಡಗಿರುವ ದೃಶ್ಯ ಸರ್ವೆ ಸಾಮಾನ್ಯವಾಗಿದೆ. ಅಸ್ಸಾಂ, ಬಾಂಗ್ಲಾದೇಶ್ ಹಾಗೂ ಪಶ್ಚಿಮ ಬಂಗಾಳದಿಂದ ವಲಸೆ ಬಂದ ಕಾರ್ಮಿಕರು ಹಾಗೂ ಸ್ಥಳೀಯ ನಿವಾಸಿಗಳು ಈಗ ಕೆಲಸವಿಲ್ಲದಾಗಿ ಮುಂದೆ ಜೀವನ ನಡೆಸುವುದು ಹೇಗೆ ಎಂಬ ಆತಂಕದಲ್ಲಿ ಇದ್ದಾರೆ.

ಎಸ್ಟೇಟ್ ಮಾಲೀಕರು ನೀಡಿದ್ದ ಮನೆಯಲ್ಲಿ ಉಳಿದುಕೊಂಡು ಎಸ್ಟೇಟ್ ಕೆಲಸ ಮಾಡಿಕೊಂಡು ಸಂತೋಷದ ಜೀವನ ನಡೆಸುತ್ತಿದ್ದ ಕಾರ್ಮಿಕರಿಗೆ ಮುಂದೇನು ಮಾಡುವುದು ಎಂಬ ಚಿಂತೆ ಕಾಡುತ್ತಿದೆ. ಸಾವಿರಾರು ಎಕರೆ ಕಾಫಿ ಪ್ಲಾಂಟೇಷನ್ ಕೊಚ್ಚಿ ಹೋಗಿರುವುದರಿಂದ ಈ ವಲಸೆ ಕಾರ್ಮಿಕರಿಗೆ ಕೆಲಸವಿಲ್ಲದೆ ಜೀವನ ಅಯೋಮಯವಾಗಿದೆ. ಕಾಫಿ ಕೀಳುವ ಸಮಯದಲ್ಲಿ ಕಾರ್ಮಿಕರ ಅಭಾವವಿದ್ದ ಕೊಡಗಿನಲ್ಲಿ ಈ ಕಾರ್ಮಿಕರೇ ಮಾಲೀಕರ ಜೀವಾಳವಾಗಿದ್ದರು. ಆದರೆ ಈಗ ಇವರು ಯಾರಿಗೂ ಬೇಡವಾದ ವಸ್ತುವಾಗಿದ್ದಾರೆ. ಮಾಲೀಕರು ಒಂದೆಡೆ ತೋಟ ಮಾಡುವ ಕಾಯಕದಲ್ಲಿ ತೊಡಗಿದ್ದರೆ ಜಿಲ್ಲಾಡಳಿತ ಕೂಡ ಈ ಕಾರ್ಮಿಕರ ಬಗ್ಗೆ ಕಾಳಜಿ ತೋರದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ.

ನಿರಾಶ್ರಿತರ ಶಿಬಿರಗಳಲ್ಲಿ ಇರುವ ಈ ವಲಸೆ ಕಾರ್ಮಿಕರನ್ನು ಕರೆಸಿಕೊಳ್ಳುವಂತೆ ಜಿಲ್ಲಾಡಳಿತ ಮಾಲೀಕರಿಗೆ ಸೂಚನೆ ನೀಡಿದೆ. ಆದರೆ ಮಾಲೀಕರೆ ನೂರಾರು ಎಕರೆ ಜಮೀನು ಕಳೆದುಕೊಂಡು ಬೀದಿ ಪಾಲಾಗಿರುವಾಗ ಈ ಕಾರ್ಮಿಕರಿಗೆ ಜೀವನ ಕಲ್ಪಿಸುವುದು ಕಷ್ಟಸಾಧ್ಯ. ಈ ಕಾರ್ಮಿಕರನ್ನು ಸಂಬಂಧಪಟ್ಟ ಮಾಲೀಕರು ಕರೆಸಿಕೊಳ್ಳ್ಳದಿದ್ದರೆ ಇವರು ವಾಪಸ್ ತಮ್ಮ ಊರುಗಳಿಗೆ ಹೋಗಬೇಕಾದುದು ಅನಿವಾರ್ಯ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ರಾಜ್ಯದ ಒಟ್ಟು 2,44,785 ಹೆಕ್ಟೇರ್ ಕಾಫಿ ತೋಟದ ಪೈಕಿ ಸುಮಾರು 1,07,089 ಹೆಕ್ಟೇರ್ ತೋಟ ಕೊಡಗಿನಲ್ಲಿತ್ತು. ಕಾಫಿ ಮಂಡಳಿಯ 2018 ರ ವರದಿಯಲ್ಲಿ ಭಾರತದಲ್ಲಿ ಉತ್ಪಾದನೆಯಾಗುವ ಕಾಫಿ ಪೈಕಿ ಶೇ. 53 ರಷ್ಟು ಕೊಡಗಿನಿಂದಲೆ ಬರುತ್ತಿತ್ತು. ಆದರೆ ಇತ್ತೀಚಿನ ವಿಕೋಪದಿಂದ ಬಹುತೇಕ ಪ್ಲಾಂಟೇಷನ್ ಮಾಯವಾಗಿದ್ದು ಮಾಲೀಕರಿಗೆ ತಮ್ಮ ಎಸ್ಟೇಟ್ ಎಲ್ಲಿದೆ ಎಂಬುದೇ ತಿಳಿಯಲಾಗದೆ ಕಂಗಾಲಾಗಿದ್ದಾರೆ. ಇದರಿಂದ ಬೆಳೆ ಇಲ್ಲದೆ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಭೂ ಕುಸಿತ ಹಾಗೂ ಪ್ರವಾಹದಿಂದ ಬಾರಿ ಬಂಡೆಕಲ್ಲುಗಳು ಹಾಗೂ ರಾಶಿ ರಾಶಿ ಮಣ್ಣು ಎಲ್ಲ್ಲೆಂದರಲ್ಲಿ ಬಿದ್ದಿದ್ದು, ಈಗ ಅದನ್ನು ಸಮತಟ್ಟು ಮಾಡುವುದೇ ದೊಡ್ಡ ಸವಾಲಾಗಿದೆ.

ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಅಂದಾಜು 41,526 ಹೆಕ್ಟೇರ್ ಕಾಫಿ ಬೆಳೆ ನಷ್ಟವಾಗಿದ್ದು, ಭೂ ಕುಸಿತದಿಂದ ಬಂದು ಬಿದ್ದಿರುವ ಮಣ್ಣಿನಿಂದಾಗಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗದೆ ಮುಂದೇನು ಮಾಡುವುದು ಎಂಬುದು ಯಕ್ಷ ಪ್ರಶ್ನೆಯಾಗಿದೆ ಎನ್ನುತ್ತಾರೆ ಮಾದಪುರ ಗ್ರಾಮದ ರೈತ ನಂಜಪ್ಪ. ಈ ಮಧ್ಯೆ ಸೋಮವಾರ ಪೇಟೆ ತಾಲೂಕಿನ ದಿಡ್ಡಹಳ್ಳಿಯ ಸುಮಾರು 500 ಕುಟುಂಬಗಳನ್ನು ಬೈದನಹಟ್ಟಿ ಹಾಗೂ ಬಸವನಹಳ್ಳ್ಳಿಗೆ ಸ್ಥಳಾಂತರಿಸಲಾಗಿದೆ. ದಿಡ್ಡಹಳ್ಳಿಯ ಬಹುತೇಕರು ಬುಡಕಟ್ಟು ಜನರಾಗಿದ್ದು, ನಿತ್ಯದ ಆಹಾರಕ್ಕಾಗಿ ಕೂಲಿಯನ್ನೆ ಅವಲಂಭಿಸಿದ್ದರು. ಆದರೆ ಈಗ ಕೆಲಸ ಇಲ್ಲದಿರುವುದು ನಿತ್ಯದ ಜೀವನ ನಿರ್ವಹಣೆಗೆ ತೊಡಕಾಗಿದೆ. ಮುಂದೆ ಮನೆಗಳನ್ನು ನಿರ್ಮಿಸಿ ಇವರನ್ನು ಅಲ್ಲಿಗೆ ಸ್ಥಳಾಂತರಿಸಲು ಜಿಲ್ಲಾಡಳಿತ ಯೋಚಿಸಿದೆ. ಆದರೆ ಮುಂದೆ ಏನು ಎಂಬ ಪ್ರಶ್ನೆ ನಿರಾಶ್ರಿತರನ್ನು ಕಾಡುತ್ತಿದೆ.

ರಾಜ್ಯದ ಒಟ್ಟಾರೆ 244,785 ಹೆಕ್ಟೇರ್ ಕಾಫಿ ತೋಟದಲ್ಲಿ ಅಂದಾಜು 107,089 ಹೆಕ್ಟೇರ್ ಪ್ರದೇಶ ಕೊಡಗಿನಲ್ಲಿದೆ. ಈ ಪೈಕಿ 41,526 ಹೆಕ್ಟೇರ್ ಕಾಫಿ ಬೆಳೆ ಇತ್ತೀಚಿನ ವಿಕೋಪದಿಂದ ನಷ್ಟವಾಗಿದೆ. ಈಗಾಗಲೆ ಭೂ ಕುಸಿತದಿಂದ ರಾಶಿÀ ರಾಶಿ ಮಣ್ಣು ತೋಟದಲ್ಲಿ ತುಂಬಿಕೊಂಡಿರುವ ಕಾರಣ ಫಲವತ್ತತೆ ಕಳೆದುಕೊಂಡ ತೋಟದಲ್ಲಿ ಏನು ಬೆಳೆಯುವುದು ಎಂಬುದೇ ಈಗ ಯಕ್ಷ ಪ್ರಶ್ನೆಯಾಗಿದೆ.
ಇಲ್ಲಿಯ ತನಕ ಆಗಿರುವ ನಷ್ಟದ ಅಂದಾಜು

  • ಮಡಿಕೇರಿ ತಾಲೂಕಿನಲ್ಲಿ 14, ವೀರಾಜಪೇಟೆಯಲ್ಲಿ 4, ಸೋಮವಾರಪೇಟೆ ತಾಲೂಕಿನಲ್ಲಿ ಇಬ್ಬರು ಸಾವನ್ನಪ್ಪಿದ್ದು, 82 ಜಾನುವಾರು ಮೃತಪಟ್ಟಿವೆ.
  • ಒಟ್ಟಾರೆ 2,568 ಮನೆಗಳು ನಾಶವಾಗಿದ್ದು, ಅಂದಾಜು ನಷ್ಟ 24,4217 ಕೋಟಿ.
  • 22,760 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಭತ್ತ ಹಾಗೂ ಜೋಳದ ಬೆಳೆ ನಾಶವಾಗಿದೆ.
  •  348 ಹೆಕ್ಟೇರ್ ಪ್ರದೇಶದಲ್ಲಿ ಮಣ್ಣ ತುಂಬಿಕೊಂಡು ಯಾವುದೇ ಬೆಳೆ ಬೆಳೆÉಯಲು ಆಗದೆ ವ್ಯರ್ಥವಾಗಿದೆ.
  •  41,526 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಕಾಫಿ ಬೆಳೆ ಹಾನಿ ಯಾಗಿದ್ದು, ಅಂದಾಜು 386 ಕೋಟಿ ನಷ್ಟವಾಗಿದೆ.
  •  53.5 ಕೋಟಿ ವೆಚ್ಚದ 8,690 ಹೆಕ್ಟೇರ್‍ನಲ್ಲಿ ಬೆಳೆಯಲಾಗಿದ್ದ ಮೆಣಸು ಬೆಳೆ ನಾಶ.
  •  1,804 ಹೆಕ್ಟೇರ್‍ನಲ್ಲಿ ಬೆಳೆಯಲಾಗಿದ್ದ 22.56 ಕೋಟಿ ವೆಚ್ಚದ ಅಡಿಕೆ ಬೆಳೆ ನಾಶ.
  •  784 ಹೆಕ್ಟೇರ್‍ನಲ್ಲಿ ಬೆಳೆಯಲಾಗಿದ್ದ ಸುಮಾರು 5.48 ಕೋಟಿ ವೆಚ್ಚದ ಬಾಳೆ ಬೆಳೆ ನಾಶ.
  • 559 ಹೆಕ್ಟೇರ್ ಪ್ರದೇಶದಲ್ಲಿ ಬೆಳೆÉಯಲಾಗಿದ್ದ 71 ಲಕ್ಷ ರೂ. ಮೌಲ್ಯದ ಶುಂಠೀ ಬೆಳೆ ನಾಶ.
  •  ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಅಂದಾಜು 61 ಕಿ.ಮಿ. ಹಾಳಾಗಿದೆ. ಇದರ ಅಂದಾಜು ನಷ್ಟ 531 ಕೋಟಿ.
  •  ಪಟ್ಟಣ ಪ್ರದೇಶ ವ್ಯಾಪ್ತಿಯ 74 ಕಿ.ಮಿ ರಸ್ತೆ ಹಾಳಾಗಿದೆ. ಅಂದಾಜು ನಷ್ಟ 7.5 ಕೋಟಿ
  • 805 ಕಿ.ಮಿ. ರಾಜ್ಯ ಹೆದ್ದಾರಿ ಹಾಳಾಗಿದ್ದು, ಅಂದಾಜು ನಷ್ಟ 446.4 ಕೋಟಿ ರೂ.
  •  1792.43 ಕಿ.ಮಿ. ಗ್ರಾಮಾಂತರ ಪ್ರದೇಶದ ರಸ್ತೆಗಳು ಹಾಳಾಗಿದ್ದು, ಅಂದಾಜು ನಷ್ಟ 591.8 ಕೋಟಿ ರೂ.
  • 406 ಸರಕಾರಿ ಕಟ್ಟಡಗಳು ಹಾಳಾಗಿವೆ. ಈ ಪೈಕಿ 84 ಶಾಲೆ, 63 ಪ್ರಾಥಮಿಕ ಆರೋಗ್ಯ ಕೆಂದ್ರ, 160 ಅಂಗನವಾಡಿ ಹಾಗೂ 99
  • ಪಂಚಾಯಿತಿ ಕಟ್ಟಡಗಳಿಗೆ ಹಾನಿಯಾಗಿದ್ದು, ಅಂದಾಜು ನಷ್ಟ 35.2 ಕೋಟಿ ರೂ.
  • 2900 ವಿದ್ಯುತ್ ಕಂಬಗಳು, 657 ಟ್ರಾನ್ಸ್‍ಪಾರ್ಮರ್ಸ್ ಹಾಳಾಗಿದ್ದು, 7.83 ಕೋಟಿ ನಷ್ಟವಾಗಿದೆ.

Translate »