ಸಿಎಎ, ಎನ್‍ಆರ್‍ಸಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಗಾಂಧಿ ಮೊಮ್ಮಗ ರಾಜಮೋಹನ ಗಾಂಧಿ
ಮೈಸೂರು

ಸಿಎಎ, ಎನ್‍ಆರ್‍ಸಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಗಾಂಧಿ ಮೊಮ್ಮಗ ರಾಜಮೋಹನ ಗಾಂಧಿ

December 22, 2019

ಎನ್‍ಆರ್‍ಸಿ ಮಾದರಿ ಕಾನೂನು ವಿರುದ್ಧ ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ತಮ್ಮ ಮೊಟ್ಟ ಮೊದಲ ಸತ್ಯಾಗ್ರಹ ನಡೆಸಿದ್ದರು

ಮೈಸೂರು, ಡಿ.21(ಪಿಎಂ)- ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಮೊಟ್ಟ ಮೊದಲ ಸತ್ಯಾಗ್ರಹ ಮಾಡಿದ್ದು ಎನ್‍ಆರ್‍ಸಿ ಮಾದರಿಯ ಕಾನೂನಿನ ವಿರುದ್ಧವೇ ಆಗಿದೆ ಎಂದು ಹೇಳಿದ ಗಾಂಧಿಯವರ ಮೊಮ್ಮಗ ರಾಜಮೋಹನ ಗಾಂಧಿ, ಕೇಂದ್ರ ಸರ್ಕಾರದ `ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)’ ಹಾಗೂ `ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‍ಸಿ)’ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, 1907 ಮತ್ತು 1908ರಲ್ಲಿ ಗಾಂಧೀಜಿ ಯವರು ದಕ್ಷಿಣ ಆಫ್ರಿಕಾದಲ್ಲಿ ಒತ್ತಾಯವೂರ್ವಕ ರಾಷ್ಟ್ರೀಯ ನೋಂದಣಿ ವಿರುದ್ಧ ಸತ್ಯಾಗ್ರಹ ನಡೆಸಿದ್ದರು. ಅದು ನಮ್ಮಲ್ಲಿನ ಎನ್‍ಆರ್‍ಸಿ (ರಾಷ್ಟ್ರೀಯ ಪೌರತ್ವ ನೋಂದಣಿ) ಹೋಲುತ್ತದೆ. ಈಗ ನಮ್ಮಲ್ಲಿನ ಎನ್‍ಆರ್‍ಸಿ ಸಂಬಂಧ ಹೇಳುವುದಾದರೆ ದೇಶದ ಸಾಮಾನ್ಯ ಜನರು ತಾವು ಭಾರತೀಯರೆಂದು ಏಕೆ ಸಾಬೀತುಪಡಿಸಬೇಕು? ಎಂದು ಅವರು ಪ್ರಶ್ನಿಸಿದರು. ಈಗಾಗಲೇ 4 ವರ್ಷಗಳಿಂದ ಅಸ್ಸಾಂ ಜನರು ಭಾರತೀಯನೆಂದು ಸಾಬೀತುಪಡಿಸಲು ಹೆಣಗಾಡುತ್ತಿದ್ದಾರೆ. ಇದಕ್ಕಾಗಿ ಹಣ, ಆಸ್ತಿ ಕಳೆದುಕೊಂಡಿದ್ದಾರೆ. ಇದೊಂದು ರೀತಿಯಲ್ಲಿ ಭಾರತೀಯ ಜನತೆ ಮೇಲೆ ಕೇಂದ್ರ ಸರ್ಕಾರ ನಡೆಸುತ್ತಿರುವ ಕ್ರೌರ್ಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ನನ್ನ ಮಾತು ಕೇಳಿಸಿಕೊಳ್ಳಲು ಸಿದ್ಧವಿಲ್ಲ. ಅದೇ ರೀತಿ ನಾನೂ ಕೂಡ ಅವರಿಗೆ ಏನನ್ನೂ ಹೇಳಲ್ಲ. ನಾನು ಭಾರತೀಯರ ಜನರಿಗೆ ಹೇಳುತ್ತೇನೆ. ಭಾರತೀಯರು ತಮ್ಮ ಹಕ್ಕುಗಳ ರಕ್ಷಣೆ, ಪ್ರಭುತ್ವದ ವಿರುದ್ಧದ ವಿಮರ್ಶೆ ಮಾಡುವ ಹಕ್ಕು, ಒಕ್ಕೂಟ ವ್ಯವಸ್ಥೆ ಉಳಿಸಲು ಮುಂದಾಗಬೇಕು. ಭಾರತೀಯರು ಸಿಎಎ ಹಾಗೂ ಎನ್‍ಆರ್‍ಸಿ ವಿರೋಧಿಸಬೇಕು ಎಂದು ಕರೆ ನೀಡಿದರು.

Translate »