ಈ ಬಾರಿ ಬಿಜೆಪಿಗೊಂದು ಅವಕಾಶ ನೀಡಿ
ಮೈಸೂರು

ಈ ಬಾರಿ ಬಿಜೆಪಿಗೊಂದು ಅವಕಾಶ ನೀಡಿ

May 4, 2018

ತಿ.ನರಸೀಪುರ: ಕಳೆದ 10 ವರ್ಷ ಗಳಿಂದ ಒಬ್ಬರಿಗೆ ಅವಕಾಶ ಮಾಡಿಕೊಟ್ಟು ನೋಡಿದ್ದೀರಿ. ಈ ಬಾರಿ ಹೊಸಬರಿಗೆ ಅವಕಾಶ ಕೊಟ್ಟು ಅಭಿವೃದ್ಧಿಗೆ ಮುನ್ನುಡಿ ಬರೆಯುವಂತೆ ಬನ್ನೂರಿನ ಮಾಜಿ ಶಾಸಕ ಕೆ.ಎಂ. ಚಿಕ್ಕಮಾದನಾಯಕ ಮತದಾರರಲ್ಲಿ ಮನವಿ ಮಾಡಿದರು.

ತಾಲೂಕಿನ ಮೇದಿನಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಎಸ್. ಶಂಕರ್ ಅವರು ರೋಡ್‍ಶೋ ಮಾಡಿದ ಬಳಿಕ ಮಾತ ನಾಡಿದರು. ಈ ಹಿಂದೆ ನಾನು ಶಾಸಕನಾಗಿದ್ದ ವೇಳೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೆ. ಇಂದಿಗೂ ಜನ ಸ್ಮರಿಸಿ ಕೊಳ್ಳುತ್ತಾರೆ. ಅದೇ ರೀತಿ ಶಂಕರ್ ಕೂಡ ಸಮಾಜ ಸೇವೆಯಲ್ಲಿದ್ದು, ಜನ ಸೇವೆ ಮಾಡಲು ಬಿಜೆಪಿ ಮೂಲಕ ಬಂದಿದ್ದಾರೆ. ಅವರನ್ನು ಈ ಬಾರಿ ಬೆಂಬಲಿಸಿ ಆಶೀರ್ವದಿಸಬೇಕು ಎಂದು ಹೇಳಿದರು. ಕಳೆದ 10 ವರ್ಷಗಳಲ್ಲಿ ಮೊದಲ ಐದು ವರ್ಷ ಯಾವ ಕೆಲಸವನ್ನು ಮಾಡಲಿಲ್ಲ. ನಂತರ ಐದು ವರ್ಷದಲ್ಲಿ ಮಗನ ದರ್ಬಾರ್ ನಡೆದಿದೆ. ರೈತರ ಸಮಸ್ಯೆಗಳನ್ನು ಆಲಿಸಿಲ್ಲ. ನಾಲೆಗೆ ನೀರು ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಕ್ಷೇತ್ರ ಜನಸಾಮಾನ್ಯರನ್ನು ಭೇಟಿ ಮಾಡಿ ಅವರ ಅಹವಾಲು ಕೇಳಿಲ್ಲ. ಇಂತಹವರಿಗೆ ಮತ ನೀಡಿ ಮತ್ತೆ ಅದೇ ಕಷ್ಟಕ್ಕೆ ಸಿಲುಕುವ ಬದಲು ಹೊಸಬರಿಗೆ ಅವಕಾಶ ಕೊಡುವಂತೆ ಹೇಳಿದರು

ಬಿಜೆಪಿ ಅಭ್ಯರ್ಥಿ ಎಸ್. ಶಂಕರ್ ಮಾತನಾಡಿ, ಕಳೆದೊಂದು ದಶಕದಿಂದಲೂ ಕ್ಷೇತ್ರದ ಶಾಸಕರಾಗಿದ್ದ ಸಚಿವ ಡಾ.ಹೆಚ್.ಸಿ .ಮಹದೇವಪ್ಪ ಅವರು ಕ್ಷೇತ್ರದ ಜನರನ್ನು ನಿರ್ಲಕ್ಷ್ಯದಿಂದ ಕಂಡಿದ್ದಾರೆ. ಮಹಿಳಾ ಸಂಘಗಳಿಗೆ ಸರ್ಕಾರ ಆರ್ಥಿಕ ನೆರವನ್ನು ಸಮರ್ಪಕವಾಗಿ ಕಲ್ಪಿಸಿಲ್ಲ. ದುಡಿಯುವ ಜನರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಲ್ಲ. ಅಂತಹವರಿಗೆ ಈ ಬಾರಿಯ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲಿಸಬೇಕು. ನಿಮ್ಮಗಳ ಸೇವೆಗೆ ಹಾಗೂ ಅಭಿವೃದ್ಧಿಗೆ ಬದ್ಧವಾಗಿರುವ ನಮ್ಮನ್ನು ಬೆಂಬಲಿಸ ಬೇಕೆಂದು ಮನವಿ ಮಾಡಿದರು.

ಕ್ಷೇತ್ರಾಧ್ಯಕ್ಷ ಪರಶಿವಮೂರ್ತಿ, ಜಿಪಂ ಮಾಜಿ ಸದಸ್ಯ ಕೆ.ಸಿ. ಲೊಕೇಶ್‍ನಾಯಕ್, ಮಹೇಶ್‍ಕುಮಾರ್, ಸಾಮ್ರಾಟ್ ಸುಂದರೇಶನ್, ಕೋಳಿ ಮಹೇಶ್, ರಮೇಶ್, ಶಿವಕುಮಾರ್, ಗೌಡ್ರು ಪ್ರಕಾಶ್, ತೊಟ್ಟವಾಡಿ ಮಹದೇವಸ್ವಾಮಿ, ಬಿ.ಎನ್.ಸುರೇಶ್, ಗಿರೀಶ್ ಮತ್ತಿತರರು ಇದ್ದರು.

Translate »