ಸೆ.24ಕ್ಕೆ ಚಿನ್ನದ ಸಿಂಹಾಸನ ಜೋಡಣೆ
ಮೈಸೂರು

ಸೆ.24ಕ್ಕೆ ಚಿನ್ನದ ಸಿಂಹಾಸನ ಜೋಡಣೆ

September 20, 2019

ಮೈಸೂರು, ಸೆ.19(ಎಂಟಿವೈ)- ದಸರಾ ಮಹೋತ್ಸವದ ವೇಳೆ ಅರಮನೆಯಲ್ಲಿ ನಡೆಯುವ ಸಾಂಪ್ರದಾಯಿಕ ಕಾರ್ಯಕ್ರಮ ದಲ್ಲಿ ಖಾಸಗಿ ದರ್ಬಾರ್ ಪ್ರಮುಖವಾಗಿದ್ದು, ಈ ಹಿನ್ನೆಲೆಯಲ್ಲಿ ಸೆ.24ರಂದು ಸ್ಟ್ರಾಂಗ್ ರೂಮ್‍ನಿಂದ ತಂದು ದರ್ಬಾರ್ ಹಾಲ್ ನಲ್ಲಿ ರತ್ನ ಖಚಿತ ಸಿಂಹಾಸನ ಜೋಡಣಾ ಕಾರ್ಯ ಜರುಗಲಿದೆ. ಖಾಸಗಿ ದರ್ಬಾರ್ ರಾಜಮನೆತನದ ಪ್ರಮುಖ ಧಾರ್ಮಿಕ ಕಾರ್ಯ ವಾಗಿದ್ದು, ದರ್ಬಾರ್ ಹಾಲ್‍ನಲ್ಲಿ ರತ್ನ ಖಚಿತ ಸಿಂಹಾಸನದ ಮೇಲೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆ ಯರ್ ಅವರು ಆಸೀನರಾಗಿ ದರ್ಬಾರ್ ನಡೆಸಲಿದ್ದಾರೆ. ಸೆ.29ರಿಂದ ಅ.7ರವರೆಗೆ ಅರಮನೆಯಲ್ಲಿ ವಿವಿಧ ಧಾರ್ಮಿಕ ಕಾರ್ಯ ಜರುಗಲಿದ್ದು, ಪ್ರತಿ ದಿನ ಸಂಜೆ ಖಾಸಗಿ ದರ್ಬಾರ್ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅರಮನೆಯ ನೆಲಮಾಳಿಗೆಯಲ್ಲಿರುವ ಸ್ಟ್ರಾಂಗ್ ರೂಮ್‍ನಲ್ಲಿ ಇರುವ ಸಿಂಹಾಸನದ ಬಿಡಿ ಭಾಗಗಳನ್ನು ಸೆ.24ರಂದು ಬೆಳಿಗ್ಗೆ 10ರಿಂದ ಬಿಗಿ ಭದ್ರತೆಯಲ್ಲಿ ದರ್ಬಾರ್ ಹಾಲ್‍ಗೆ ತಂದು ಜೋಡಿಸುವ ಕಾರ್ಯ ನಡೆಯಲಿದೆ. ಅಂದು ಬೆಳಿಗ್ಗೆ ವಿವಿಧ ಪೂಜಾ ಕಾರ್ಯ ಜರುಗಲಿದೆ. ಹೋಮ, ಶಾಂತಿ ನೆರವೇರಿಸಿದ ಬಳಿಕವಷ್ಟೇ ಸ್ಟ್ರಾಂಗ್ ರೂಮ್ ತೆರೆಯ ಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸೆ.24ರಂದು ಬೆಳಗಿನಿಂದ ಮಧ್ಯಾಹ್ನ 1 ಗಂಟೆವರೆಗೆ ಅರಮನೆಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಸಿಂಹಾಸನ ಜೋಡಣಾ ಕಾರ್ಯಕ್ಕೆ ಬಳಸಿಕೊಳ್ಳುವ ಸಿಬ್ಬಂದಿಗಳಿಗೆ ಮೊಬೈಲ್ ತೆಗೆದುಕೊಂಡು ಬರದಂತೆ ಸೂಚನೆ ನೀಡಲಾಗಿದ್ದು, ಸಿಸಿ ಕ್ಯಾಮರಾಗಳಿಗೂ ಪರದೆ ಹಾಕಲಾಗುತ್ತದೆ. ಪ್ರತಿಯೊಂದು ಬಿಡಿಭಾಗವನ್ನು ಶಸ್ತ್ರಸಜ್ಜಿತ ಸಿಬ್ಬಂದಿಯೊಂದಿಗೆ ತರಲಾಗುತ್ತದೆ. ನವರಾತ್ರಿ ಮೊದಲ ದಿನವಾದ ಸೆ.29ರಂದು ಚಿನ್ನದ ಸಿಂಹಾಸನಕ್ಕೆ `ಸಿಂಹ’ ಜೋಡಣಾ ಕಾರ್ಯ ನಡೆದ ನಂತರ ಖಾಸಗಿ ದರ್ಬಾರ್ ನಡೆಯುತ್ತದೆ. ಅಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2.30ರವರೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆಯುಧ ಪೂಜೆ ದಿನವಾದ ಅ.7ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2.30ರವರೆಗೆ ಹಾಗೂ ವಿಜಯದಶಮಿ ದಿನವಾದ ಅ.8ರಂದು ದಿನವಿಡೀ ಅರಮನೆಗೆ ಪ್ರವಾಸಿಗರು, ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಅ.23ರಂದು ದರ್ಬಾರ್ ಹಾಲ್‍ನಿಂದ ಸಿಂಹಾಸನವನ್ನು ಬಿಡಿಭಾಗವಾಗಿ ಪ್ರತ್ಯೇಕಿಸಿ ಸ್ಟ್ರಾಂಗ್ ರೂಮ್‍ಗೆ ಕೊಂಡೊಯ್ಯಲಾಗುತ್ತದೆ. ಆ ದಿನವೂ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆÀವರೆಗೆ ಅರಮನೆಗೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ.

Translate »