ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ
ಮೈಸೂರು

ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ

September 20, 2019

ಮೈಸೂರು, ಸೆ.19(ಆರ್‍ಕೆ)- 2019-20ನೇ ಸಾಲಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವು ಮೈಸೂರಿನಲ್ಲಿ ಇಂದಿ ನಿಂದ ಆರಂಭವಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರ ಇವರ ಸಂಯು ಕ್ತಾಶ್ರಯದಲ್ಲಿ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆರಂಭವಾದ ಕ್ರೀಡಾಕೂಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕ್ರೀಡಾ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು.

ಕ್ರೀಡಾಪಟುಗಳನ್ನು ಪರಿಚಯ ಮಾಡಿ ಕೊಂಡು ಮಾತನಾಡಿದ ಸಚಿವರು, ನಗರ ಹಾಗೂ ಗ್ರಾಮೀಣ ಭಾಗದ ಆಸಕ್ತ ಕ್ರೀಡಾ ಪಟುಗಳಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ದಸರಾ ಕ್ರೀಡಾಕೂಟ ಉತ್ತಮ ವೇದಿಕೆ ಕಲ್ಪಿಸುತ್ತದೆ. ಈ ಹಿಂದಿ ನಿಂದಲೂ ಸರ್ಕಾರಗಳು ದಸರಾ ಕ್ರೀಡಾ ಕೂಟಕ್ಕೆ ಹೆಚ್ಚು ಆದ್ಯತೆ ನೀಡುತ್ತಾ ಬಂದಿ ರುವುದು ಇದರ ಮಹತ್ವ-ಪ್ರಾಮುಖ್ಯತೆ ಯನ್ನು ತೋರುತ್ತದೆ ಎಂದರು.

ಈ ಹಿನ್ನೆಲೆಯಲ್ಲಿ ದಸರಾ ಕ್ರೀಡಾ ಕೂಟಕ್ಕೆ ರಾಜ್ಯಮಟ್ಟದ ಸ್ವರೂಪ ನೀಡಲು ಸರ್ಕಾರ ಚಿಂತಿಸಿದೆ. ಸೋಲು-ಗೆಲುವು ಮುಖ್ಯವಲ್ಲ. ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿ ಸುವ ಮೂಲಕ ಸಾಧನೆಯತ್ತ ಕ್ರೀಡಾಸಕ್ತರು ಮುನ್ನುಗ್ಗಬೇಕು ಎಂದ ಸೋಮಣ್ಣ ಅವರು, ಕ್ರೀಡೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಸರ್ಕಾರ ಮುಖ್ಯಮಂತ್ರಿಗಳ ಕಪ್ ಅನ್ನೂ ಸ್ಥಾಪಿಸಿದೆ ಎಂದರು.

ಮೇಯರ್ ಪುಷ್ಪಲತಾ ಜಗನ್ನಾಥ್, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಡಿಸಿ ಅಭಿರಾಂ ಜಿ.ಶಂಕರ್, ಜಿಪಂ ಸಿಇಓ ಕೆ.ಜ್ಯೋತಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್ ಸೇರಿದಂತೆ ಹಲ ವರು ಈ ವೇಳೆ ಉಪಸ್ಥಿತರಿದ್ದರು. ಕ್ರೀಡಾಕೂಟದಲ್ಲಿ ಮೈಸೂರು ಜಿಲ್ಲೆಯ ನೂರಾರು ಮಂದಿ ಕ್ರೀಡಾಪಟುಗಳು ಭಾಗವಹಿಸಿದ್ದು, ಇಲ್ಲಿ ವಿಜೇತರಾದವ ರನ್ನು ದಸರಾ ರಾಜ್ಯಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆ ಮಾಡಲಾಗುವುದು.

ಅಥ್ಲೆಟಿಕ್ಸ್, ವಾಲಿಬಾಲ್, ಬ್ಯಾಸ್ಕೆಟ್ ಬಾಲ್, ಹ್ಯಾಂಡ್ ಬಾಲ್, ಈಜು, ಕುಸ್ತಿ, ಟೇಬಲ್ ಟೆನ್ನಿಸ್, ನೆಟ್‍ಬಾಲ್, ಭಾರ ಎತ್ತುವುದು, ಥ್ರೋ ಬಾಲ್, ಕಬಡ್ಡಿ, ಖೋ-ಖೋ ಸೇರಿದಂತೆ 25 ಬಗೆಯ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ.

ಕ್ರೀಡಾ ಧ್ವಜಾರೋಹಣ ವೇಳೆ ತೊಡಕು
ಮೈಸೂರು, ಸೆ.19(ಆರ್‍ಕೆ)- ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಇಂದು ಆರಂಭವಾದ ಜಿಲ್ಲಾ ಮಟ್ಟದ ಉದ್ಘಾಟನೆ ವೇಳೆ ತೊಡಕುಂಟಾದ ಪ್ರಸಂಗ ನಡೆಯಿತು. ಕ್ರೀಡಾಪಟುಗಳಿಂದ ವಂದನೆ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಕ್ರೀಡಾ ಧ್ವಜಾರೋಹಣ ಮಾಡುವಾಗ ಧ್ವಜಸ್ತಂಬಕ್ಕೆ ಕಟ್ಟಿದ ಎರಡರ ಪೈಕಿ ಒಂದು ಹಗ್ಗ ರಭಸದ ಎಳೆತದಿಂದ ತುಂಡರಿಸಿತು. ಹಾಗಾಗಿ ಧ್ವಜ ಹರಡಿಕೊಂಡು ಹಾರಾಡಲು ತುಸು ಸಮಯ ಬೇಕಾಯಿತು. ಒಂದು ಹಗ್ಗವನ್ನು ಹಿಡಿದು ಮತ್ತೊಂದನ್ನು ಎಳೆದರೆ ಮಾತ್ರ ಧ್ವಜ ಹರಡಿಕೊಳ್ಳುತ್ತದೆ. ಆದರೆ, ಎಳೆಯುವ ಹಗ್ಗವೇ ಕಟ್ ಆದ ಕಾರಣ ತೊಡಕಾಯಿತು. ನಂತರ ಒಂದೇ ಹಗ್ಗದಲ್ಲಿ ಜೋರಾಗಿ ಅಲುಗಾಡಿಸಿದ ಸೋಮಣ್ಣ ಅವರು ಕಡೆಗೂ ಧ್ವಜಾರೋಹಣ ನೆರವೇರಿಸಿದರು. ಕ್ರೀಡಾಕೂಟದ ಆರಂಭದಲ್ಲೇ ಆದ ತೊಡಕಿನಿಂದ ಬೇಸರವಾಗಿದ್ದರೂ, ಸಚಿವರು ಮಾತ್ರ ಅದನ್ನು ತೋರ್ಪಡಿಸಿಕೊಳ್ಳದೇ ಅಧಿಕಾರಿಗಳು ಹಾಗೂ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದರು. ಆದರೆ ಘಟನೆಯಿಂದ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್ ಅವರಂತೂ ಮಂಕಾಗಿ, ಆತಂಕದಿಂದಲೇ ಕಾರ್ಯಕ್ರಮ ನಡೆಸಿಕೊಟ್ಟರು.

Translate »