`ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಹಕ್ಕಿ-ಪುಕ್ಕ’ ಕಾರ್ಯಕ್ರಮಕ್ಕೆ ಚಾಲನೆ
ಮೈಸೂರು

`ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಹಕ್ಕಿ-ಪುಕ್ಕ’ ಕಾರ್ಯಕ್ರಮಕ್ಕೆ ಚಾಲನೆ

September 20, 2019

ಗಮನ ಸೆಳೆದ `ತೇಜಸ್ವಿ ಕಂಡ ಕೀಟ ಪ್ರಪಂಚ’ ಕೀಟಗಳ ಪ್ರದರ್ಶನ
ಮೈಸೂರು, ಸೆ.8(ಆರ್‍ಕೆಬಿ)- ನಾನು ಉನ್ನತ ಶಿಕ್ಷಣ ಪಡೆದದ್ದು ಸಾಹಿತ್ಯದಲ್ಲಿ. ಆದರೆ ಹಳ್ಳಿಗೆ ಬಂದ ಮೇಲೆ ಸುತ್ತಮುತ್ತಲ ಅನೇಕ ಕೌತುಕಮಯ ವಿದ್ಯಮಾನ ಗಳನ್ನು ನೋಡುತ್ತಾ, ಪಶು, ಪಕ್ಷಿ, ಕ್ರಿಮಿ, ಕೀಟಗಳ ವ್ಯಕ್ತಿತ್ವ ವನ್ನು ತಿಳಿದುಕೊಳ್ಳಲಷ್ಟೇ ನಾನು ಅವುಗಳ ಬಗ್ಗೆ ಅಧ್ಯಯನ ಮಾಡಿದವನು. ಏರೋಪ್ಲೇನ್ ಚಿಟ್ಟೆ ಮತ್ತು ಇತರೆ ಕತೆಗಳಿಂದ ಆಯ್ದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಯವರ ಈ ವಾಕ್ಯಗಳೊಂದಿಗೆ ಭಾನುವಾರ ಮೈಸೂರಿ ನಲ್ಲಿ ಎರಡು ದಿನಗಳ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಹಕ್ಕಿ-ಪುಕ್ಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಿತು.

ಅಭಿರುಚಿ ಪ್ರಕಾಶನದ 26ನೇ ವರ್ಷದ ಅಂಗವಾಗಿ ಅಭಿರುಚಿ, ರಾಜ್ಯ ರೈತಸಂಘ, ನಿರಂತರ, ಸ್ವರಾಜ್ ಅಭಿಯಾನ, ಮಾನವ ಮಂಟಪ ಜಂಟಿ ಸಹಯೋಗ ದಲ್ಲಿ ಮೈಸೂರಿನಲ್ಲಿ ಪಕ್ಷಿ ವೀಕ್ಷಣೆ, ತೇಜಸ್ವಿ ಕಂಡ ಕೀಟಗಳ ಪ್ರದರ್ಶನ, ಜುಗಾರಿ ಕ್ರಾಸ್ ಇಂಗ್ಲಿಷ್ ಕೃತಿ ಬಿಡುಗಡೆ, ತೇಜಸ್ವಿ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ, ಉಪನ್ಯಾಸ, ಚಲನ ಚಿತ್ರ ಪ್ರದರ್ಶನ ಇನ್ನಿತರೆ ಕಾರ್ಯಕ್ರಮಗಳು ನಡೆದವು.

ಕಲಾಮಂದಿರದ ಸುಚಿತ್ರಾ ಆರ್ಟ್ ಗ್ಯಾಲರಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ತೆಗೆದ ವಿವಿಧ ಹಕ್ಕಿ ಪಕ್ಷಿಗಳ ಛಾಯಾಚಿತ್ರಗಳ ಪ್ರದರ್ಶನ ಹಾಗೂ ತೇಜಸ್ವಿ ಕಂಡ ಕೀಟ ಪ್ರಪಂಚ ಪ್ರದರ್ಶನವನ್ನು ತೇಜಸ್ವಿ ಅವರ ಒಡನಾಡಿ ಪದ್ಮಾ ಶ್ರೀರಾಮ್ ಉದ್ಘಾಟಿಸಿದರು. ತೇಜಸ್ವಿ ಯವರು ತೆಗೆದ ಪಕ್ಷಿ, ಕೀಟಗಳ ಛಾಯಾಚಿತ್ರಗಳು ಗಮನ ಸೆಳೆದವು. ಹಸಿರು ಸಸ್ಯ ತಿಗಣೆ, ಪೇಪರ್ ಚಿಟ್ಟೆ, ಕಾಫಿ ಮಿಡತೆ, ಎಲೆ ಕೀಟ, ಕಡ್ಡಿ ಕೀಟ, ದೈತ್ಯ ನೀರು ತಿಗಣೆ, ಉದ್ದಕಾಲಿನ ನೊಣ, ಜೇನು ನೊಣಗಳು ಸೇರಿದಂತೆ ವಿವಿಧ ಜಾತಿಯ ಕೀಟಗಳ ಪ್ರದರ್ಶನ ನೋಡುಗರನ್ನು ಆಕರ್ಷಿಸಿದವು. ಅಲ್ಲದೆ ಕೀಟಗಳೆಂದ ರೇನು? ಯಾವುದು ಕೀಟ, ಕೀಟಗಳ ವಿವಿಧ ಪ್ರಬೇಧದ ಕೀಟಗಳ ಪರಿಚಯ ಮಾಡಿಕೊಡುವಲ್ಲಿ ಪ್ರದರ್ಶನ ಯಶಸ್ವಿಯಾಯಿತು. ಬಳಿಕ ಕಿರುರಂಗ ಮಂದಿರದಲ್ಲಿ ತೇಜಸ್ವಿ ಅವರ `ಜುಗಾರಿ ಕ್ರಾಸ್’ ಇಂಗ್ಲಿಷ್ ಕಾದಂಬರಿಯನ್ನು ಪರಿಸರವಾದಿ ಕೃಪಾ ಕರ-ಸೇನಾನಿ ಬಿಡುಗಡೆ ಮಾಡಿದರು.

ತೇಜಸ್ವಿಯವರ ಹಕ್ಕಿ ಪುಕ್ಕ ಕಾರ್ಯಕ್ರಮದ ಅಂಗ ವಾಗಿ ಭಾನುವಾರ ಮುಂಜಾನೆ ಮೈಸೂರಿನ ಕುಕ್ಕರ ಹಳ್ಳಿಯಲ್ಲಿ ಪಕ್ಷಿ ವೀಕ್ಷಣೆ ಕಾರ್ಯಕ್ರಮ ನಡೆಯಿತು. ಮಕ್ಕಳು, ಯುವಕರು, ವಯಸ್ಕರು, ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಸೇರಿ ಕುಕ್ಕರಹಳ್ಳಿಯಲ್ಲಿ ಹಕ್ಕಿ- ಪಕ್ಷಿಗಳ ಕಲರವ ಕೇಳಿ ಖುಷಿಪಟ್ಟರು. ಪಕ್ಷಿ ತಜ್ಞ ಶಿವ ಪ್ರಕಾಶ್, ಡಿ.ತನುಜಾ ನೇತೃತ್ವದಲ್ಲಿ ಪರಿಸರ ಆಸಕ್ತರು ಪಕ್ಷಿ ಪ್ರಬೇಧಗಳನ್ನು ಗುರ್ತಿಸಿದರು. ಪಕ್ಷಿಗಳ ಕುರಿತು ತಮಗೆ ತಿಳಿದಿದ್ದನ್ನು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡರು. ಮೈಸೂರು, ಮೂಡಿಗೆರೆ, ಶಿವ ಮೊಗ್ಗ, ಬೆಂಗಳೂರು ಸೇರಿದಂತೆ ವಿವಿಧ ಕಡೆಯಿಂದ ತೇಜಸ್ವಿ ಅಭಿಮಾನಿಗಳು, ಶಿಷ್ಯರು ಪಕ್ಷಿ ವೀಕ್ಷಣೆಯಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಯುವ ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ಪಕ್ಷಿ ವೀಕ್ಷಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ತೇಜಸ್ವಿ ಅವರು ಉನ್ನತ ವ್ಯಾಸಂಗ ಮಾಡಿದ್ದರು. ಹಳ್ಳಿಗೆ ಹೋಗಿ ಕೃಷಿ ಕಾರ್ಯದಲ್ಲಿ ನಿರತರಾದರು. ಕೃಷಿ, ಪರಿಸರÀ, ಪ್ರಾಣಿ ಪ್ರಪಂಚದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಸಾಹಿತಿ ಕೃಷ್ಣಮೂರ್ತಿ ಚಮರಂ, ಅಭಿರುಚಿ ಪ್ರಕಾಶನ ಅಭಿರುಚಿ ಗಣೇಶ್, ಪುನೀತ್, ಎ.ಶಾಲಿನ್, ಸತ್ಯ, ಸನತ್, ಅಶ್ವತ್ ಇನ್ನಿತರರು ಉಪಸ್ಥಿತರಿದ್ದರು.

Translate »