ಮೈಸೂರು, ಫೆ.10(ಪಿಎಂ)- ಮೈಸೂರು ವಿವಿಯ `ಶಾಲೆಗಳಲ್ಲಿ ವಿಜ್ಞಾನಾಭಿವೃದ್ಧಿ ಸಮಿತಿ (ಸಿಡಿ ಎಸ್‍ಎಸ್)’ ಶಾಲಾ ಮಕ್ಕಳಿಗೆ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಲು ನಡೆಸುತ್ತಿರುವ ಕಾರ್ಯ ಚಟುವಟಿಕೆ ಯನ್ನು ಇಡೀ ರಾಜ್ಯದಲ್ಲಿ ವಿಸ್ತರಿಸಲು ಸರ್ಕಾರ ದಿಂದ ಅಗತ್ಯ ನೆರವು ದೊರಕಿಸಿಕೊಡುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ಭರವಸೆ ನೀಡಿದರು.
ಮೈಸೂರಿನ ಮಾನಸ ಗಂಗೋತ್ರಿಯ ವಿಜ್ಞಾನ ಭವನ ದಲ್ಲಿ ಮೈಸೂರು ವಿವಿ ಶಾಲೆಗಳಲ್ಲಿ ವಿಜ್ಞಾನಾಭಿವೃದ್ಧಿ ಸಮಿತಿ (ಸಿಡಿಎಸ್‍ಎಸ್), ದೂರದರ್ಶನ ಕೇಂದ್ರದ ಚಂದನ ವಾಹಿನಿ ಜಂಟಿ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ `ವಿಜ್ಞಾನ ಸಂವಾದ ಕಾರ್ಯಕ್ರಮ’ ಹಾಗೂ ಕಾರ್ಯಕ್ರಮದ ಚಿತ್ರೀಕರಣ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನದಲ್ಲಿ ಮಕ್ಕಳಲ್ಲಿ ಆಸಕ್ತಿ ಬೆಳೆಸುವ ಈ ಕಾರ್ಯಕ್ರಮ ಇಡೀ ರಾಜ್ಯಕ್ಕೆ ವಿಸ್ತರಣೆಗೊಳ್ಳಬೇಕು. ವಿಶೇಷವಾಗಿ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಇದು ನಡೆಯಬೇಕು. ಹೀಗಾಗಿ ಈ ಕಾರ್ಯಕ್ರಮ ವಿಸ್ತರಿ ಸಲು ವಿವಿಯಿಂದ ಪ್ರಸ್ತಾವನೆ ಸಲ್ಲಿಸಿದರೆ ಸರ್ಕಾರದ ನೆರವು ಹಾಗೂ ಸಹಕಾರ ದೊರಕಿಸಿಕೊಡಲಾಗು ವುದು. ವಿಶ್ವವಿದ್ಯಾನಿಲಯದವರೇ ಪ್ರೌಢಶಾಲೆ ಮಕ್ಕ ಳಲ್ಲಿ ವಿಜ್ಞಾನದ ಅಭಿರುಚಿ ಬೆಳೆಸಲು ಚಟುವಟಿಕೆ ನಡೆಸುತ್ತಿರುವುದು ಸಂತಸದ ವಿಚಾರ. ಈ ಮಕ್ಕಳಿಗೆ ಸ್ನಾತಕೋತ್ತರ ಮಟ್ಟದ ಪ್ರಯೋಗಾಲಯದಲ್ಲಿ ವಿಜ್ಞಾನದ ಪ್ರಯೋಗಗಳನ್ನು ಮಾಡಲು ಮುಕ್ತ ಅವಕಾಶ ನೀಡಿ ರುವುದು ಸ್ವಾಗತಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂವಾದಕ್ಕಾಗಿ ಈಗಾಗಲೇ ವಿದ್ಯಾರ್ಥಿಗಳು ತಮ್ಮ ಪ್ರಶ್ನೆಗಳನ್ನು ನೀಡಿದ್ದು, ಅವುಗಳನ್ನು ಅವಲೋಕಿಸಿದೆ. ಅತ್ಯಂತ ಕುತೂಹಲಕಾರಿಯಾಗಿ ಮಕ್ಕಳು ವಿಜ್ಞಾನ ಕುರಿತಂತೆ ಪ್ರಶ್ನೆ ಮಾಡಿದ್ದಾರೆ. ಈ ರೀತಿ ಕುತೂಹಲ ಇದ್ದರೆ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಸಾಧ್ಯವಾಗುತ್ತದೆ. ಗಣಿತ ಹಾಗೂ ವಿಜ್ಞಾನ ಎಂದರೆ ಕಬ್ಬಿಣದ ಕಡಲೆಯಂತೆ ಎಂಬ ಮನೋಭಾವ ನಮ್ಮ ಸಮಾಜದಲ್ಲಿದ್ದು, ಇದನ್ನು ನಿವಾರಿಸಬೇಕು. ಈ ನಿಟ್ಟಿನಲ್ಲಿ ಮೈಸೂರು ವಿವಿಯ ಇಂತಹ ಕಾರ್ಯಕ್ರಮ ಸಹಕಾರಿಯಾಗಲಿದೆ. ಪ್ರೌಢ ಶಾಲಾ ಹಂತದಲ್ಲಿ ವಿಜ್ಞಾನ ಶಿಕ್ಷಕರ ಕೊರತೆ ಇದ್ದು, ಮೂಲ ವಿಜ್ಞಾನ ಕುರಿತು ಆಸಕ್ತಿ ಬೆಳೆಸುವ ಮೂಲಕ ಇದನ್ನು ನಿವಾರಿಸಬೇಕು. ಅದಕ್ಕೆ ವಿವಿಯ ಈ ಚಟುವಟಿಕೆ ನೆರವಾಗಲಿದೆ ಎಂದು ತಿಳಿಸಿದರು.
ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತ ನಾಡಿ, ವಿವಿಯಿಂದ ಶಾಲಾ ಮಕ್ಕಳಲ್ಲಿ ವಿಜ್ಞಾನದ ಅಭಿರುಚಿ ಬೆಳೆಸಲು ಒಂದು ಮೊಬೈಲ್ ಪ್ರಯೋಗಾ ಲಯ (ಸಂಚಾರಿ ಲ್ಯಾಬ್) ಕಾರ್ಯ ನಿರ್ವಹಿಸುತ್ತಿದೆ. ಸದ್ಯ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಸೇರಿದಂತೆ 4 ಜಿಲ್ಲೆಗಳ ಶಾಲಾ ಮಕ್ಕಳಿಗೆ ವಿಜ್ಞಾನದ ಮಾಹಿತಿ ನೀಡಲು ಇದೊಂದೇ ಮೊಬೈಲ್ ಪ್ರಯೋಗಾಲಯ ಇದ್ದು, ಹೀಗಾಗಿ ಇನ್ನು ಮೂರು ಸಂಚಾರ ಪ್ರಯೋಗಾಲಯ ವಾಹನಗಳನ್ನು ಸರ್ಕಾರದಿಂದ ನೀಡಿದರೆ ಪರಿಣಾಮಕಾರಿಯಾಗಿ ಈ ಚಟುವಟಿಕೆ ನಡೆಸಲು ಸಹಕಾರಿಯಾಗಲಿದೆ ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ ಮೈಸೂರು ವಿವಿ ಕುಲಪತಿ ಪ್ರೊ. ಜಿ.ಹೇಮಂತ್‍ಕುಮಾರ್ ಮಾತನಾಡಿ, ಇಂದು ಮೂಲ ವಿಜ್ಞಾನದ ಶಿಕ್ಷಕರು ಕಡಿಮೆಯಾಗುತ್ತಿದ್ದಾರೆ. ಹೀಗಾಗಿ ಮಕ್ಕಳು ವಿಜ್ಞಾನ ಮತ್ತು ಗಣಿತದಲ್ಲಿ ಹೆಚ್ಚು ಪ್ರೇರಣೆ ಹೊಂದುವ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು. ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳ ಸರ್ಕಾರಿ ಪ್ರೌಢಶಾಲೆಯ 200ಕ್ಕೂ ಹೆಚ್ಚು ಮಕ್ಕಳು ಸಂವಾದ ದಲ್ಲಿ ಪಾಲ್ಗೊಂಡಿದ್ದರು. ಸಂಪನ್ಮೂಲ ವ್ಯಕ್ತಿಗಳು ಮಕ್ಕಳ ಕೌತುಕದ ಪ್ರಶ್ನೆಗಳಿಗೆ ವೈಜ್ಞಾನಿಕ ಕಾರಣ ಗಳನ್ನು ನೀಡಿದರು. ಮೈಸೂರು ವಿವಿ ಸಿಡಿಎಸ್‍ಎಸ್ ಅಧ್ಯಕ್ಷ ಪ್ರೊ.ಪಿ.ವೆಂಕಟರಾಮಯ್ಯ, ಸಂಚಾಲಕ ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.