ಕನಕಪುರ ಬಳಿ ಯೇಸು ಪ್ರತಿಮೆ ಸ್ಥಾಪನೆಗೆ ಉದ್ದೇಶಿಸಿದ್ದ ಭೂಮಿ ಮಂಜೂರಾತಿ ರದ್ದಿಗೆ ಸರ್ಕಾರ ನಿರ್ಧಾರ
ಮೈಸೂರು

ಕನಕಪುರ ಬಳಿ ಯೇಸು ಪ್ರತಿಮೆ ಸ್ಥಾಪನೆಗೆ ಉದ್ದೇಶಿಸಿದ್ದ ಭೂಮಿ ಮಂಜೂರಾತಿ ರದ್ದಿಗೆ ಸರ್ಕಾರ ನಿರ್ಧಾರ

December 29, 2019

ಬೆಂಗಳೂರು,ಡಿ.28(ಕೆಎಂಶಿ)- ವಿಶ್ವದಲ್ಲೇ ಅತೀ ಎತ್ತರದ ಯೇಸು ಪ್ರತಿಮೆ ನಿರ್ಮಾಣ ಕ್ಕಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನೀಡಿದ್ದ ಭೂಮಿಯ ಮಂಜೂರಾತಿಯನ್ನು ರದ್ದುಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದಿದೆ. ರಾಮನಗರ ಜಿಲ್ಲೆ ಕನಕಪುರ ತಾಲೂಕು ನಲ್ಲಹಳ್ಳಿ ಸರ್ವೆ ನಂ.283ರಲ್ಲಿರುವ 231.35 ಎಕರೆ ಗೋಮಾ ಳದ ಪೈಕಿ 10 ಎಕರೆಯನ್ನು ಯೇಸು ಪ್ರತಿಮೆ ನಿರ್ಮಾಣಕ್ಕಾಗಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮಂಜೂರು ಮಾಡಿತ್ತು. ಇಲ್ಲಿ ಪ್ರತೀ ಎಕರೆಗೆ 30 ಲಕ್ಷ ರೂ. ಮೌಲ್ಯವಿದ್ದು, 10 ಎಕರೆಗೆ 30 ಕೋಟಿ ರೂ. ಆಗುತ್ತದೆಯಾ ದರೂ, ಅದನ್ನು ಕೇವಲ 30 ಲಕ್ಷ ರೂ.ಗಳಿಗೆ ಮಂಜೂರು ಮಾಡಲಾಗಿತ್ತು. ಅದರ ಬಾಬ್ತು ಹಣವನ್ನು ಕೂಡ ಯೇಸು ಪ್ರತಿಮೆ ನಿರ್ಮಾಣ ಸಮಿತಿಯವರು ಪೂರ್ಣವಾಗಿ ಸರ್ಕಾರಕ್ಕೆ ಪಾವತಿಸದೇ ಕೇವಲ ಶೇ.10ರಷ್ಟು ಮಾತ್ರ ಪಾವತಿಸಿದ್ದಾರೆ ಎನ್ನಲಾಗಿದೆ.

ಈ ಭಾಗದಲ್ಲಿ ಸುಮಾರು 2 ಸಾವಿರ ಜಾನುವಾರುಗಳಿವೆ ಎಂದು ಅಂಕಿ-ಅಂಶಗಳ ಮೂಲಕ ತಿಳಿದು ಬಂದಿದ್ದು, ಸುಪ್ರೀಂಕೋರ್ಟ್ ಆದೇಶದಂತೆ ಈ ಪ್ರಮಾಣದ ಜಾನು ವಾರುಗಳಿಗೆ 500 ಎಕರೆ ಗೋಮಾಳ ಮೀಸಲಿಡಬೇಕು. ಆದರೆ ಅಲ್ಲಿರುವುದು ಕೇವಲ 231.35 ಎಕರೆ ಮಾತ್ರ. ಹೀಗಿರುವಾಗ ಆ ಪ್ರದೇಶವನ್ನು ಯೇಸು ಪ್ರತಿಮೆ ಸ್ಥಾಪನೆಗೆ ಮಂಜೂರು ಮಾಡಿರುವುದು ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆಯಾಗುತ್ತದೆ. ಈ ಎಲ್ಲಾ ಅಂಶಗಳನ್ನೂ ಮುಂದಿಟ್ಟು, ಯೇಸು ಪ್ರತಿಮೆ ನಿರ್ಮಾಣಕ್ಕೆ ಮಂಜೂ ರಾಗಿರುವ ಭೂಮಿಯನ್ನು ಹಿಂಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ರಾಮನಗರ ಮತ್ತು ಕನಕಪುರ ತಹಸೀಲ್ದಾರರು ಜಂಟಿ ಸರ್ವೆ ನಡೆಸಿ ರಾಮನಗರ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ವರದಿ ಸಲ್ಲಿಸಿದ್ದಾರೆ ಎಂದು ಹೇಳಲಾಗಿದ್ದು, ಸೋಮವಾರ ಮಧ್ಯಾಹ್ನದ ಒಳಗಾಗಿ ಜಿಲ್ಲಾಧಿಕಾರಿಗಳ ವರದಿ ಸರ್ಕಾರಕ್ಕೆ ಸೇರಲಿದೆ. ಅಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಭೂಮಿ ಮಂಜೂರಾತಿಯನ್ನು ರದ್ದುಪಡಿ ಸುವ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ. ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಅವರು ಕಪಾಲಿ ಬೆಟ್ಟದ ಈ ಪ್ರದೇಶದಲ್ಲಿ ಯೇಸು ಪ್ರತಿಮೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದು, ಭಾರೀ ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿ, ಆರ್‍ಎಸ್‍ಎಸ್ ನಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. `ಕಪಾಲಿಬೆಟ್ಟ ಉಳಿಸಿ’ ಅಭಿಯಾನ ಆರಂಭಿಸಲು ಕೆಲ ಸಂಘ-ಸಂಸ್ಥೆಗಳು ತಯಾರಿ ನಡೆಸಿವೆ. ಈ ಹಂತದಲ್ಲಿ ರಾಜ್ಯ ಸರ್ಕಾರವು ಯೇಸು ಪ್ರತಿಮೆ ನಿರ್ಮಾಣಕ್ಕೆ ಮಂಜೂರಾಗಿರುವ ಭೂಮಿಯನ್ನು ಹಿಂಪಡೆಯಲು ನಿರ್ಧರಿಸಿದೆ.

 

Translate »