ಮಡಿಕೇರಿ, ಏ.1- ಕೊರೊನಾ ಸೋಂಕು ಹರಡುವ ಹಿನ್ನಲೆ ಮತ್ತು ಜಿಲ್ಲೆಯ ಜನರ ಸುರಕ್ಷತಾ ಹಿತದೃಷ್ಟಿಯಿಂದ ಕೊಡಗು ಜಿಲ್ಲಾಡಳಿತ ವಾರದಲ್ಲಿ 3 ದಿನಗಳ ಕಾಲ ಮಾತ್ರವೇ ದಿನಸಿ, ತರಕಾರಿ ಮತ್ತು ದಿನ ಬಳಕೆಯ ವಸ್ತುಗಳನ್ನು ಕೊಳ್ಳಲು ಜನರಿಗೆ ಅವಕಾಶ ಮಾಡಿಕೊಟ್ಟಿದೆ. ಸೋಮ ವಾರ, ಬುಧವಾರ ಮತ್ತು ಶುಕ್ರವಾರಗಳಂದು ಮಾತ್ರವೇ ಸಾಮೂಹಿಕವಾಗಿ ಸಂತೆ ಮಾದರಿ ಯಲ್ಲಿ ತರಕಾರಿ ವಸ್ತುಗಳನ್ನು ಕೊಳ್ಳಲು ಅನುವು ಮಾಡಿಕೊಡಲಾಗಿತ್ತು. ಜಿಲ್ಲೆಯ ಎಲ್ಲಾ ಕಡೆಗಳಲ್ಲೂ ಈ ಬಾರಿ ತರಕಾರಿ ಮತ್ತು ಅಗತ್ಯ ವಸ್ತುಗಳನ್ನು ಕೊಳ್ಳಲು ಜನರು ಮುಗಿ ಬೀಳದಿರುವುದು ಕಂಡು ಬಂತು. ಮಾತ್ರವಲ್ಲದೇ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಈ ಬಾರಿ ತರಕಾರಿ ವಸ್ತುಗಳನ್ನು ಮಾರಾಟ ಮಾಡಲು ರೂಪಿಸಿದ ವ್ಯವಸ್ಥೆ ಜನ ಮೆಚ್ಚುಗೆಗೆ ಪಾತ್ರವಾಯಿತು.
ಬುಧವಾರ ಜಿಲ್ಲೆಯ 3 ತಾಲೂಕುಗಳಲ್ಲೂ ಏಕಕಾಲದಲ್ಲಿ ಗ್ರಾಹಕರಿಗೆ ವಸ್ತುಗಳನ್ನು ಕೊಳ್ಳಲು ಅವಕಾಶ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಬೆಳಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ವರೆಗೆ ತರಕಾರಿ, ಹಣ್ಣು ಹಂಪಲು ಸೇರಿದಂತೆ ದಿನಸಿ ವಸ್ತುಗಳನ್ನು ಕೊಳ್ಳಲು ಜನರು ರಸ್ತೆಗೆ ಇಳಿದಿದ್ದರು. ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಮತ್ತು ಆರ್‍ಎಂಸಿ ಆವರಣದಲ್ಲಿ ತರಕಾರಿಗಳನ್ನು ಮಾರಾಟ ಮಾಡಲು ಸ್ಥಳಾವಕಾಶ ನೀಡಲಾಗಿತ್ತಲ್ಲದೇ, ಹೊರ ಜಿಲ್ಲೆಗಳಿಂದ ತರಕಾರಿ ತರಲು ವ್ಯಾಪಾರ ಸ್ಥರಿಗೆ ಅನುಮತಿ ಪತ್ರವನ್ನು ಪೊಲೀಸ್ ಇಲಾಖೆ ಯಿಂದ ನೀಡಲಾಗಿತ್ತು.
ಇಲಾಖೆಯ ಪತ್ರಗಳನ್ನು ಪಡೆದುಕೊಂಡ ವ್ಯಾಪಾರಿ ಗಳು ಹುಣಸೂರು, ಮೈಸೂರು, ಹಾಸನ-ಕೊಣನೂರು ಮತ್ತಿತರ ಕಡೆಗಳಿಂದ ಲೋಡ್ ಗಟ್ಟಲೆ ತರಕಾರಿಗಳನ್ನು ಮಡಿಕೇರಿಗೆ ತಂದು ಮಾರಾಟ ಮಾಡಿದರು. ಅದರಲ್ಲೂ ಮಡಿಕೇರಿಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಮಾಡಲಾಗಿದ್ದ ವ್ಯಾಪಾರ ವ್ಯವಸ್ಥೆಗೆ ಗ್ರಾಹಕರು ಮಾರು ಹೋದರು. ಗ್ರಾಹಕರು ಕೂಡ ಎಲ್ಲಿಯೂ ಮುಗಿ ಬೀಳದೆ ಸರತಿ ಸಾಲಿನಲ್ಲಿ, ಅದರಲ್ಲೂ ಸಾಮಾ ಜಿಕ ಅಂತರ ಕಾಯ್ದು ಕೊಂಡು ತರಕಾರಿಗಳನ್ನು ಖರೀದಿಸುತ್ತಿದ್ದುದು ಕಂಡು ಬಂತು.
ಪ್ರತಿ ಅಂಗಡಿ ಮಳಿಗೆಯ ಮುಂದೆ ಪೊಲೀಸ್ ಇಲಾಖೆ ಮತ್ತು ಚೇಂಬರ್ ಆಫ್ ಕಾಮರ್ಸ್ ಸಂಘಟನೆ ಪ್ರತಿ ತರಕಾರಿಗೂ ದರ ನಿಗದಿಪಡಿಸಿ ದ್ದರಲ್ಲದೇ, ಆ ದರವನ್ನು ಮೈಕ್ ಮೂಲಕ ಗ್ರಾಹಕರಿಗೆ ತಿಳಿಸುವ ಮೂಲಕ ದುಬಾರಿ ದರ ವಸೂಲಿಗೆ ಬ್ರೇಕ್ ಹಾಕಿದ್ದರು. ಪೊಲೀಸರ ಈ ಕ್ರಮ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಯಿತು.
ಮಧ್ಯಾಹ್ನ 12 ಗಂಟೆಯ ವೇಳೆಗೆ ಎಲ್ಲಾ ವ್ಯಾಪಾರಸ್ಥರು ಮತ್ತು ಗ್ರಾಹಕರು ವ್ಯಾಪಾರ ಮತ್ತು ಖರೀದಿ ಮುಗಿಸಿಕೊಂಡು ತಮ್ಮ ತಮ್ಮ ಮನೆಗಳ ಹಾದಿ ಹಿಡಿದರು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಡಾ. ಸುಮನ, ಪೊಲೀಸ್ ಉಪ ಅಧೀಕ್ಷಕ ದಿನೇಶ್ ಕುಮಾರ್ ಭೇಟಿ ನೀಡಿ ವ್ಯಾಪಾರ ವಹಿವಾಟನ್ನು ಪರಿಶೀಲನೆ ನಡೆಸಿದರು.
ಮಡಿಕೇರಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ವಾಪಾರಕ್ಕೆ ಜನ ಸೇರಿದ್ದ ಪ್ರದೇಶದಲ್ಲಿ ಕ್ರಿಮಿ ನಾಶಕಗಳನ್ನು ಸಿಂಪಡಿಸುವ ಮೂಲಕ ಕೊರೊನಾ ಸೋಂಕು ಹರಡದಂತೆ ಕ್ರಮ ವಹಿಸಿದರು. ಜನ ನಿಬಿಡ ಪ್ರದೇಶಗಳು, ದಿನಸಿ, ತರಕಾರಿ ಅಂಗಡಿ ಗಳ ಮುಂಭಾಗ ಪೊಲೀಸ್ ಠಾಣೆ, ಆರ್‍ಎಂಸಿ, ನಗರ ಸಭೆ, ಹಾಲಿನ ಡೈರಿ ಮತ್ತಿತ್ತರ ಕಡೆಗಳಲ್ಲಿ ಕ್ರಿಮಿ ನಾಶಕಗಳನ್ನು ಸಿಂಪಡಿಸುವ ಮೂಲಕ ಸಾಂಕ್ರಾ ಮಿಕ ರೋಗ ಹರಡುವುದಕ್ಕೆ ಬ್ರೇಕ್ ಹಾಕಿದರು.
ವ್ಯಾಪಾರ ಪೈಪೋಟಿ: ಇನ್ನು ದೂರದ ಊರು ಗಳಿಂದ ಕಡಿಮೆ ದರಕ್ಕೆ ತರಕಾರಿಗಳನ್ನು ತಂದಿದ್ದ ವ್ಯಾಪಾರಿಗಳು ಪೊಲೀಸ್ ಇಲಾಖೆ ಮತ್ತು ಚೇಂಬರ್ ಆಫ್ ಕಾಮರ್ಸ್ ನಿಗದಿ ಮಾಡಿದ್ದ ದರಕ್ಕಿಂತ ಕಡಿಮೆ ದರಕ್ಕೆ ತರಕಾರಿಗಳನ್ನು ಮಾರಾಟ ಮಾಡುವ ಮೂಲಕ ಗ್ರಾಹಕರನ್ನು ತಮ್ಮೆಡೆಗೆ ಸೆಳೆಯುವಲ್ಲಿ ಸಫಲರಾದರು. ಇದೇ ಮೊದಲ ಬಾರಿಗೆ ಮಡಿಕೇರಿ ರಕ್ಷಣಾ ವೇದಿಕೆಯ ಕಾರ್ಯ ಕರ್ತರು ತರಕಾರಿ ವಸ್ತುಗಳನ್ನು ಅತ್ಯಂತ ಕಡಿಮೆ ದರಕ್ಕೆ ಮಾರಾಟ ಮಾಡಿದರು. ತರಕಾರಿಗೆ ಹಾಕಿದ್ದ ಬಂಡವಾಳ ಬಂದರೆ ಸಾಕು. ಉಳಿದ ಲಾಭಾಂಶದಲ್ಲಿ ಭಿಕ್ಷುಕರಿಗೆ, ನಿರ್ಗತಿಕರಿಗೆ ಅನ್ನ ಉಪಹಾರ ಹಂಚಲಾಗುತ್ತದೆ. ತರಕಾರಿಗಳು ಉಳಿದಲ್ಲಿ ಅದನ್ನು ಗ್ರಾಮೀಣ ಭಾಗದ ಜನರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುತ್ತೇವೆ. ಕೊರೋನಾ ಸೋಂಕಿನ ಭೀತಿಯಲ್ಲಿರುವ ಜನರಿಗೆ ಸಹಾಯ ಮಾಡುವುದೇ ನಮ್ಮ ಉದ್ದೇಶ ಎಂದು ಸಂಘದ ಸದಸ್ಯರು ತಿಳಿಸಿದರು.
ಸೋ.ಪೇಟೆಯಲ್ಲೂ ಪಡಿತರ ಖರೀದಿಯಲ್ಲಿ ಶಿಸ್ತು ಪಾಲನೆ
ಸೋಮವಾರಪೇಟೆ, ಏ.1- ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ಬುಧವಾರ ಬೆಳಿಗ್ಗೆ 8ರಿಂದ 12 ಗಂಟೆವರೆಗೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಶಿಸ್ತು ಪಾಲಿಸಿರುವುದು ಕಂಡು ಬಂತು. ಖಾಸಗಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಅಂತರ ಕಾಯ್ದುಕೊಂಡು ಸರದಿ ಸಾಲಿನಲ್ಲಿ ನಿಂತು ತರಕಾರಿ ಹಾಗೂ ದಿನಸಿಗಳನ್ನು ಖರೀದಿಸಿದರು. ಪೊಲೀಸ್ ಇಲಾಖೆ ಬ್ಯಾರಿಕೇಡ್‍ಗಳನ್ನು ಹಾಕಿ, ಖಾಸಗಿ ಬಸ್ ನಿಲ್ದಾಣಕ್ಕೆ ವಾಹನ ಪ್ರವೇಶವನ್ನು ತಡೆ ಹಿಡಿದ ಪರಿಣಾಮ, ಜನರು ಗೊಂದಲಕ್ಕೀಡಾಗದೆ ವಸ್ತುಗಳನ್ನು ಖರೀದಿಸಿದರು. ಜೂನಿಯರ್ ಕಾಲೇಜು ಸಮೀಪ, ಬಾಣಾವಾರ ರಸ್ತೆ, ವಿವೇಕಾನಂದ ಸರ್ಕಲ್ ಸಮೀಪ, ಸಿ.ಕೆ.ಸುಬ್ಬಯ್ಯ ರಸ್ತೆ ಹಾಗು ಆರ್‍ಎಂಸಿ ಮೈದಾನದಲ್ಲೇ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದರು. ಈ ಕಾರಣದಿಂದ ಪಟ್ಟಣದೊಳಗೆ ಎಲ್ಲಿಯೂ ನೂಕು ನುಗ್ಗಲು ಕಂಡು ಬರಲಿಲ್ಲ. ಪಟ್ಟಣದ ಹೊರ ಭಾಗದಲ್ಲಿರುವ ಆರ್‍ಎಂಸಿ ಮಾರುಕಟ್ಟೆಯಲ್ಲೇ ಮುಂದಿನ ದಿನಗಳಲ್ಲಿ ತರಕಾರಿಗಳನ್ನು ಮಾರಾಟ ಮಾಡಿದರೆ, ಪಟ್ಟಣದಲ್ಲಿ ನೂಕುನುಗ್ಗಲು ಕಡಿಮೆಯಾಗುತ್ತದೆ ಎಂಬ ಮಾತುಗಳು ಕೇಳಿಬಂದವು. ವಾಹನಗಳಲ್ಲಿ ತರಕಾರಿ ಹಾಗೂ ದಿನಸಿಗಳನ್ನು ಗ್ರಾಮೀಣ ಭಾಗದಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂತು. ಸರ್ಕಲ್ ಇನ್ಸ್‍ಪೆಕ್ಟರ್ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.