ಜವರಿಕೊಪ್ಪಲಿನಲ್ಲಿ ಗುಂಪು ಘರ್ಷಣೆ
ಹಾಸನ

ಜವರಿಕೊಪ್ಪಲಿನಲ್ಲಿ ಗುಂಪು ಘರ್ಷಣೆ

July 14, 2018

ಹೊಳೆನರಸೀಪುರ: ಹಳ್ಳಿ ಮೈಸೂರು ಹೋಬಳಿ, ದೊಡ್ಡಕಾಡನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜವರಿ ಕೊಪ್ಪಲು ಗ್ರಾಮದಲ್ಲಿ ಅಂಗನವಾಡಿ ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿ 2 ವರ್ಷಗಳೇ ಕಳೆದಿದ್ದರೂ, ನಿರ್ಮಾಣಕ್ಕೆ ಕಾಲ ಕೂಡಿಬಂದಿಲ್ಲ. ಇದಕ್ಕೆ ನಿಗದಿತ ಜಾಗದ ವಿಚಾರವಾಗಿ ನಡೆಯುತ್ತಿರುವ ಜಟಾ ಪಟಿಯೇ ಪ್ರಮುಖ ಕಾರಣವಾಗಿದೆ.

ಇದೇ ವಿಚಾರ ಇಂದೂ ಸಹ ಗ್ರಾಮ ದಲ್ಲಿ ಎರಡು ಗುಂಪುಗಳ ನಡುವೆ ವಾಕ್ಸಮರ ನಡೆದು, ಘರ್ಷಣೆಗೂ ಕಾರಣವಾಗಿದೆ. ವಿಷಯ ತಿಳಿದು ಗ್ರಾಮಕ್ಕೆ ದೌಡಾಯಿಸಿದ ಹಳ್ಳಿಮೈಸೂರು ಠಾಣೆ ಸಬ್‍ಇನ್ಸ್‍ಪೆಕ್ಟರ್ ಶಕುಂತಲಾ ಹಾಗೂ ಸಿಬ್ಬಂದಿ ಗುಂಪು ಚದುರಿಸಲು ಹರಸಾಹಸಪಟ್ಟರು. ದೊಡ್ಡ ಕಾಡನೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ (ಪಿಡಿಓ) ಸಂತೋಷ್, ಈ ಸಂಬಂಧ ಮೇಲ ಧಿಕಾರಿಗಳ ಗಮನಕ್ಕೆ ತಂದು ಪೊಲೀಸ ರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

ಏನಿದು ಸಮಸ್ಯೆ?: ಗ್ರಾಮದಲ್ಲಿರುವ ಅಂಗನವಾಡಿ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಹೊಸ ಕಟ್ಟಡ ನಿರ್ಮಾಣಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಎನ್ ಆರ್‍ಐಜಿ ಯೋಜನೆಯಡಿ 2 ವರ್ಷಗಳ ಹಿಂದೆಯೇ 5 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಆದರೆ ಗ್ರಾಮಸ್ಥರ ಸಲಹೆಯಂತೆ ರಾಮೇಗೌಡ ಹಾಗೂ ಲಕ್ಷ್ಮಣೇಗೌಡ ಅವರ ಮನೆ ಬಳಿಯಿರುವ ಜಾಗದಲ್ಲಿ ಕಟ್ಟಡ ನಿರ್ಮಿಸಲು ನಿರ್ಧರಿಸ ಲಾಗಿತ್ತು. ಅಂತೆಯೇ ಗ್ರಾಪಂ ಪಿಡಿಓ ಸಂತೋಷ್ ಹಾಗೂ ಸಿಬ್ಬಂದಿ, ಗ್ರಾಮಸ್ಥರ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ಮಾಡಿ, ಅಳತೆ ಮಾಡಲು ಮುಂದಾದಾಗ ರಾಮೇಗೌಡ ಹಾಗೂ ಲಕ್ಷ್ಮಣೇಗೌಡ ಅವರ ಕುಟುಂಬದವರು ವಿರೋಧ ವ್ಯಕ್ತಪಡಿಸಿ ದ್ದರು. ಅಲ್ಲದೆ ಈ ಜಾಗ ನಮಗೆ ಸೇರಿದ್ದು, ಅಂಗನವಾಡಿ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳನ್ನು ಬೆದರಿಸಿ, ವಾಪಸ್ಸು ಕಳುಹಿಸಿದ್ದರು.

ಇದೀಗ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಪ್ರಭಾರ ಯೋಜನಾಧಿಕಾರಿ ಕುಮಾರ್, ಅನುದಾನ ಬಿಡುಗಡೆಯಾಗಿ 2 ವರ್ಷ ಕಳೆದಿದ್ದು, ಈಗಲೂ ಸದುಪಯೋಗ ಪಡಿಸಿಕೊಳ್ಳದಿದ್ದರೆ, ಸರ್ಕಾರಕ್ಕೆ ವಾಪಸ್ಸು ಹೋಗುವುದಾಗಿ ಎಚ್ಚರಿಸಿದ್ದರು. ಅಲ್ಲದೆ ಶಾಸಕರಾದ ಎ.ಟಿ.ರಾಮಸ್ವಾಮಿ ಅವರು ಅಂಗನವಾಡಿ ಕಟ್ಟಡ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಪ್ರಕ್ರಿಯೆಗೆ ಮುಂದಾದಾಗ ಮತ್ತೆ ಗ್ರಾಮದಲ್ಲಿ ಘರ್ಷಣೆ ಸಂಭವಿಸಿದೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಪೊಲೀಸರು ಗಲಾಟೆ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ.

ಗ್ರಾಮಸ್ಥರ ಆರೋಪ: ರಾಮೇಗೌಡ ಮತ್ತು ಲಕ್ಷ್ಮಣೇಗೌಡ ಅವರು ಸರ್ವೆ ನಂ-124ರ ಗುಂಡು ತೋಪಿನ ವ್ಯಾಪ್ತಿಯ ಜವರಿಕೊಪ್ಪಲಿನಿಂದ ಹಳ್ಳಿಮೈಸೂರು ಇನ್ನಿತರ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ ಪಕ್ಕದಲ್ಲೇ ಹೊಗ್ಗೆಸೊಪ್ಪಿನ ಬ್ಯಾರನ್ ಕಟ್ಟಿಕೊಂಡಿದ್ದಾರೆ. ಇದೀಗ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಗುರುತಿಸಿರುವ ಖಾಲಿ ಜಾಗದಲ್ಲಿ ಮರಮುಟ್ಟು ಹಾಕಿ ಕೊಂಡಿರುವುದಲ್ಲದೆ ತಿಪ್ಪೆಗುಂಡಿ ಮಾಡಿ ಕೊಂಡಿದ್ದಾರೆ. ಅಂಗನವಾಡಿಗೆಂದೇ 6 ತಿಂಗಳ ಹಿಂದೆಯೇ ಖಾತೆ ಮಾಡಲಾಗಿದೆ. ಆದರೂ ಈ ಎರಡೂ ಕುಟುಂಬದವರು ಜಾಗ ಬಿಟ್ಟುಕೊಡದೆ ಅಡ್ಡಿಪಡಿಸುತ್ತಿದ್ದಾರೆಂದು ಪೂಜಾರಿಗೌಡ, ನಿಂಗೇಗೌಡ, ಸುರೇಶ್, ಮಲ್ಲಿಕಾರ್ಜುನ ಇನ್ನಿತರ ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೆ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಮರಮುಟ್ಟುಗಳು ಹಾಗೂ ತಿಪ್ಪೆಯನ್ನು ತೆರವುಗೊಳಿಸಿ, ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.

Translate »