ತಿಂದಿದ್ದು ಎರಡೇ ತುತ್ತು, ತಲೆ ಸುತ್ತಲಾರಂಭಿಸಿತು!
ಮೈಸೂರು

ತಿಂದಿದ್ದು ಎರಡೇ ತುತ್ತು, ತಲೆ ಸುತ್ತಲಾರಂಭಿಸಿತು!

December 21, 2018

ಮೈಸೂರು: ನಾವು ಸುಳವಾಡಿ ಮಾರಮ್ಮ ದೇವಾಲಯಕ್ಕೆ ಹೋಗಿದ್ದೋ. ಬಂದವರನೆಲ್ಲಾ ಸಾಲಾಗಿ ನಿಲ್ಲಿಸಿ, ಪಂಚಾಮೃತ ಹಾಗೂ ಟೊಮೆಟೊ ಬಾತ್ ನೀಡಲಾಯಿತು. ಪಚ್ಚೆ ಕರ್ಪೂರದ ವಾಸನೆ ಬರುತ್ತಿತ್ತು. ತಿನ್ನಲಾಗಲಿಲ್ಲ. ಎರಡೇ ತುತ್ತು ತಿಂದು ಬೀಸಾಡಿ ಬಿಟ್ಟೋ. ಸ್ವಲ್ಪ ಹೊತ್ತಿನ ನಂತರ ತಲೆ ತಿರುಗ ತೊಡಗಿತು. ವಾಂತಿ-ಭೇದಿ ಆರಂಭವಾಗಿ ಹೊಟ್ಟೆನೋವು ಆರಂಭವಾಯಿತು. ವಿಷ ಪ್ರಸಾದ ಸೇವಿಸಿ ಸಾವಿನ ದವಡೆಯಿಂದ ಪಾರಾಗಿ ಬಂದ ಮಕ್ಕಳ ನೋವಿನ ನುಡಿ ಇದು.

ಮೈಸೂರಿನ ರಾಮ ಕೃಷ್ಣನಗರದಲ್ಲಿ ರುವ ಸುಯೋಗ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಮರಳುವ ಮುನ್ನ `ಮೈಸೂರು ಮಿತ್ರ’ ನೊಂದಿಗೆ ಅಂದು ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾಲಯದ ಆವರಣದಲ್ಲಿ ನಡೆದ ಘಟನೆಯನ್ನು ವಿವರಿಸಿದರು. ಆಸ್ಪತ್ರೆಗೆ ದಾಖಲಾಗಿದ್ದ 9 ಮಕ್ಕಳಲ್ಲಿ 7 ಮಕ್ಕಳು ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆಯಾದರು.

ಕೊಂಗಾಡಿ ಪುಟ್ಟ: ತಮಿಳುನಾಡಿನ ಕೊಂಗಾಡಿ ಗ್ರಾಮದ ಕಾಳತಂಬಡಿ ಹಾಗೂ ಚಿನ್ನಮ್ಮ ದಂಪತಿ ಪುತ್ರ ಪುಟ್ಟ (14) `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿ, ನಾನು ಒಬ್ಬನೇ ಪೂಜೆ ಮಾಡಿಸಿ ಕೊಳ್ಳುವುದಕ್ಕಾಗಿ ದೇವಾಲಯಕ್ಕೆ ಬಂದಿದ್ದೆ. ಪೂಜೆ ಆದ ನಂತರ ಪ್ರಸಾದ ಕೊಡುವುದಾಗಿ ತಿಳಿಸಿದರು.

ಪಂಚಾ ಮೃತ ಹಾಗೂ ಬಾತ್ ನೀಡಿದರು. ಬಾತ್‍ನಿಂದ ಸೀಮೆಯೆಣ್ಣೆ ಯಂತಹ ವಾಸನೆ ಬರುತ್ತಿತ್ತು. ಅಲ್ಲಿದ್ದ ವರು ದೇವರ ಪ್ರಸಾದಕ್ಕೆ ವಾಸನೆ ಎನ್ನ ಬಾರದು ತಿನ್ನು ಎಂದರು. ಸ್ವಲ್ಪ ತಿಂದೆ. ನಂತರ ಅದನ್ನು ಎಸೆದುಬಿಟ್ಟೆ. ಅರ್ಧ ಗಂಟೆಯ ನಂತರ ವಾಂತಿ, ಹೊಟ್ಟೆ ನೋವು ಕಾಣಿಸಿಕೊಂಡಿತು.

ಸುಳವಾಡಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡ ನಂತರ ಹನೂರು ಆಸ್ಪತ್ರೆಗೆ ಕರೆದುಕೊಂಡು ಬಂದರು. ರಾತ್ರಿ ಮೈಸೂರಿಗೆ ಕರೆತಂದರು. ಇದೀಗ ಸಂಪೂರ್ಣವಾಗಿ ಗುಣಮುಖನಾಗಿ ದ್ದೇನೆ. ನಮ್ಮೂರಿಗೆ ಹೋಗುತ್ತಿದ್ದೇನೆ ಎಂದು ವಿವರಿಸಿದನು.

ತಿನ್ನಬೇಡಿ ಎಂದು ಅಮ್ಮನಿಗೆ ನಾನೇ ಹೇಳಿದ್ದೆ: ಎಂ.ಜಿ.ದೊಡ್ಡಿ ಗ್ರಾಮದ ಮುರು ಗೇಶ್ ಮಗ ಮೋಹನ್ ಕುಮಾರ್(13) ಮಾತನಾಡಿ, ಮಾರಮ್ಮ ದೇವಾಲಯಕ್ಕೆ ಅಪ್ಪ-ಅಮ್ಮನೊಂದಿಗೆ ಹೋಗಿದ್ದೆ. ಅಂದು ದೇವಾಲಯದಲ್ಲಿ ನೀಡಿದ ಬಾತ್ ನಲ್ಲಿ ವಾಸನೆ ಬರುತ್ತಿತ್ತು. ನಾನು ಮೂರು ತುತ್ತು ತಿನ್ನುವಷ್ಟರಲ್ಲಿ ವಾಂತಿ ಬಂದಂತೆ ಆಗುತ್ತಿತ್ತು. ಕೊನೆಗೆ ಬಾತ್ ಎಸೆದು ಬಿಟ್ಟೆ. ನನ್ನ ಅಮ್ಮ ನಿಗೆ ಅನ್ನ ತಿನ್ನಬೇಡ ಅಂದೆ. ಆದರೆ ಅವರು ಮನೆಯಲ್ಲಿ ಅಡುಗೆ ಮಾಡಿಲ್ಲ. ಇಲ್ಲಿಯೇ ತಿಂದು ಹೋಗೋಣ ಎಂದರು. ಸ್ವಲ್ಪ ಹೊತ್ತಿನ ನಂತರ ವಾಂತಿ ಆಯಿತು. ನಂತರ ಭೇದಿ ಆಯಿತು. ನಂತರ ವಿಷ ಬೆರೆಸಲಾಗಿದೆ ಎಂದು ಎಲ್ಲರೂ ಮಾತನಾಡಿಕೊಂಡು, ಆಸ್ಪತ್ರೆಗೆ ಕರೆದುಕೊಂಡು ಬಂದರು ಎಂದು ತಿಳಿಸಿದನು.

ಹೊಟ್ಟೆ ಉರಿಯ ತೊಡಗಿತು: ಎಂ.ಜಿ. ದೊಡ್ಡಿಯ ಪಾಪಣ್ಣ, ಈಶ್ವರಿ ದಂಪತಿ ಪುತ್ರಿ ರೋಜ (8) ಮಾತನಾಡಿ, ದೇವಾ ಲಯದಲ್ಲಿ ಕಾಯಿ ಬಿರಿಯಾನಿ ಕೊಟ್ಟರು. ಕರ್ಪೂರದ ವಾಸನೆ ಬಂತು. ಎರಡು ತುತ್ತು ತಿಂದೆ. ನಂತರ ಅಮ್ಮನಿಗೆ ಕೊಟ್ಟು ಬಿಟ್ಟೆ. ಅವರು ತಿಂದರು. ನಾವು ಮನೆಗೆ ಬಂದಾಗ ವಾಂತಿ ಬಂತು. ಹೊಟ್ಟೆ ಉರಿಯ ತೊಡಗಿತು. ನಂತರ ಅಮ್ಮ ವಾಂತಿ ಮಾಡಿಕೊಳ್ಳಲಾರಂಭಿಸಿದರು. ನಂತರ ಆಸ್ಪತ್ರೆಗೆ ಕರೆತಂದರು. ನನ್ನ ಅಮ್ಮನಿಗೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ ಎಂದು ದುಃಖಿತಳಾದಳು.

ನರಳಾಡುತ್ತಿತ್ತು ಪಾಪು: ಬಿದರಹಳ್ಳಿಯ ನಿವಾಸಿ ರಾಜೇಶ್ವರಿ(4) ಮಾತನಾಡಿ, ದೇವಾಲಯದಲ್ಲಿ ನೀಡಿದ ಪ್ರಸಾದ ತಿಂದ ಸ್ವಲ್ಪ ಹೊತ್ತಿನ ನಂತರ ವಾಂತಿ ಆಯಿತು. ನಾನು ಒಂಚೂರು ಬಾತ್ ತಿಂದಿದ್ದೆ. ಎಲ್ಲರೂ ಆಸ್ಪತ್ರೆಗೆ ಬಂದ್ದಿದ್ದರು. ನನ್ನನ್ನು ಕರೆದುಕೊಂಡು ಬಂದು ಇಂಜೆಕ್ಷನ್ ಕೊಡಿಸಿದರು. ರಾತ್ರಿ ಮೈಸೂರಿಗೆ ಕರೆದು ಕೊಂಡು ಬಂದರು ಎಂದು ತೊದಲು ನುಡಿಗಳಿಂದ ಹೇಳಿದಳು.

ತಲೆ ಸುತ್ತಿತು: ಮಾರ್ಟಳ್ಳಿ ನಿವಾಸಿ ಮುತ್ತು ಎಂಬುವರ ಮಗ ಸಾರದಿ ಮಾತ ನಾಡಿ, ಕರ್ಪೂರದ ವಾಸನೆ ಬರುತ್ತಿದ್ದ ಪ್ರಸಾದ ತಿಂದು ಮನೆಗೆ ಬಂದ ನಂತರ ತಲೆ ಸುತ್ತುತ್ತಿತ್ತು. ವಾಂತಿ, ಬೇದಿ ಆರಂಭ ವಾಯಿತು. ಆಸ್ಪತ್ರೆ ಕರೆದುಕೊಂಡು ಬಂದರು. ಎಷ್ಟೋ ಜನ ಆಸ್ಪತ್ರೆಯಲ್ಲಿದ್ದರು. ಗಲಾಟೆ ಆಗುತ್ತಿತ್ತು. ಅಲ್ಲಿದ್ದವರು ಅಳುತ್ತಿದ್ದರು. ಟೆಂಪೋದಲ್ಲಿ ಮೈಸೂರಿಗೆ ಕರೆದು ಕೊಂಡು ಬಂದರು ಎಂದು ಹೇಳಿದನು.

Translate »