ಮಹಿಳಾ ದಸರಾ ವಸ್ತು ಪ್ರದರ್ಶನದಲ್ಲಿ ಹರಪ್ಪ, ಮೊಹೆಂಜೋದಾರೋ ಶೈಲಿಯ ಮಣ್ಣಿನಿಂದ ತಯಾರಿಸಿದ ವಸ್ತುಗಳು
ಮೈಸೂರು

ಮಹಿಳಾ ದಸರಾ ವಸ್ತು ಪ್ರದರ್ಶನದಲ್ಲಿ ಹರಪ್ಪ, ಮೊಹೆಂಜೋದಾರೋ ಶೈಲಿಯ ಮಣ್ಣಿನಿಂದ ತಯಾರಿಸಿದ ವಸ್ತುಗಳು

October 1, 2019

ಮೈಸೂರು, ಸೆ.30(ಪಿಎಂ)- ಮೈಸೂರಿನ ಜೆಕೆ ಮೈದಾನದಲ್ಲಿ ಏರ್ಪಡಿಸಿರುವ ಮಹಿಳಾ ದಸರಾ ರಾಜ್ಯ ಮಟ್ಟದ ವಸ್ತು ಪ್ರದರ್ಶನದಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಹಾಗೂ ಮಹಿಳಾ ಉದ್ಯಮಿ ಗಳಿಂದ ತಯಾರಿಸಲ್ಪಟ್ಟ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ಒಟ್ಟು 48 ಮಳಿಗೆ ಗಳು ಆರಂಭಗೊಂಡಿವೆ. ಈ ಪೈಕಿ ಸಿಂಧೂ ಬಯಲಿನ ನಾಗರಿಕತೆಯ ಹರಪ್ಪ ಹಾಗೂ ಮೊಹೆಂಜೋದಾರೋ ಶೈಲಿಯಲ್ಲಿ ಮಣ್ಣಿನಿಂದ ತಯಾರಿಸಿದ ಕರಕುಶಲ ವಸ್ತುಗಳು ಹಾಗೂ ದೈನಂದಿನ ಬಳಕೆಯ ವಸ್ತುಗಳ ಮಾರಾಟ ಮಳಿಗೆ ಗಮನ ಸೆಳೆಯುತ್ತಿದೆ. ಮೈಸೂರಿನ ರಮಾಬಾಯಿನಗರದ ಶ್ರೀ ಬಸವೇಶ್ವರ ಮಣ್ಣಿನ ಕರಕುಶಲ ಕಲೆ ತರಬೇತಿ ಕೇಂದ್ರದ ಮಳಿಗೆ ಇದಾಗಿದ್ದು, ಇಲ್ಲಿನ ಪ್ರಾಚೀನ ಕಾಲದ ಶೈಲಿಯ ಪರಿಸರ ಸ್ನೇಹಿ ಮಣ್ಣಿನ ವಸ್ತುಗಳು ಆಕರ್ಷಿಸುತ್ತಿವೆ. ಸದರಿ ಮಳಿಗೆಯ ಕಲಾವಿದೆ ಭಾಗ್ಯವತಿ ಹೇಳುವಂತೆ ಇಲ್ಲಿನ ವಸ್ತುಗಳು ಮಣ್ಣಿನಿಂದ ತಯಾರಿಸಿದ್ದಾಗಿದ್ದು, ಹರಪ್ಪ ಹಾಗೂ ಮೊಹೆಂಜೋದಾರೋ ಶೈಲಿಯ ಮಣ್ಣಿನ ವಸ್ತುಗಳು ಇವಾಗಿವೆ. ಬೆಡ್‍ಲ್ಯಾಂಪ್, ಮ್ಯಾಜಿಕ್ ಲ್ಯಾಂಪ್, ವಾಟರ್ ಬಾಟೆಲ್ ಸೇರಿದಂತೆ ಮಣ್ಣಿನಿಂದಲೇ ತಯಾರಿಸಿದ ದೈನಂದಿನ ಬಳಕೆಯ ವಸ್ತುಗಳು ದೊರೆಯಲಿವೆ.

ಪೆನ್, ಮೊಬೈಲ್ ಸ್ಟ್ಯಾಂಡ್‍ಗಳೂ ಮಣ್ಣಿನಲ್ಲಿ ಸಿದ್ಧಗೊಂಡು ಗಮನ ಸೆಳೆಯುತ್ತಿವೆ. ತಲೆಕೆಳಗಾಗಿ ಎಣ್ಣೆ ಹಾಕುವುದು ಮ್ಯಾಜಿಕ್ ಲ್ಯಾಂಪ್‍ನ ವಿಶೇಷ. `ಇದೊಂದು ಸುಲಭ ವಾಗಿ ಕಲಿಯುವ ಕಲೆ. ಜೊತೆಗೆ ಇವುಗಳ ಬಳಕೆ ಪರಿಸರ ಸ್ನೇಹಿ. ನಮ್ಮಲ್ಲಿ ಈ ಕಲೆ ಸಂಬಂಧ ಉಚಿತ ತರಬೇತಿಗಳನ್ನೂ ಸಹ ಕೊಡಲಾಗುತ್ತದೆ. ನಮ್ಮ ಇಲ್ಲಿನ ಮಳಿಗೆಯಲ್ಲಿ 2 ರೂ.ನಿಂದ ಹಿಡಿದು 5 ಸಾವಿರ ರೂ.ವರೆಗೆ ಬೆಲೆಬಾಳುವ ವಸ್ತುಗಳಿವೆ’ ಎನ್ನುತ್ತಾರೆ ಭಾಗ್ಯವತಿ. ಇದಲ್ಲದೆ, ಕೃತಕ ಆಭರಣ, ಸೀರೆ ಹಾಗೂ ವಿವಿಧ ರೀತಿಯ ಉಡುಪುಗಳು, ಕಲಾಕೃತಿಗಳು ಸೇರಿದಂತೆ ಇನ್ನಿತರ ವಸ್ತುಗಳ ಮಳಿಗೆಗಳಿವೆ. ಇಂದಿನಿಂದ ಅ.4ರವರೆಗೆ ಬೆಳಿಗ್ಗೆ 11ರಿಂದ ರಾತ್ರಿ 9ರವರೆಗೆ ಪ್ರದರ್ಶನಕ್ಕೆ ಭೇಟಿ ನೀಡಬಹುದು.

Translate »