ಬೆಂಗಳೂರು,ಮಾ.21(ಕೆಎಂಶಿ)- ಕನಿಷ್ಠ ಒಂದು ವಾರಕ್ಕೆ ಆಗುವಷ್ಟು ಆಹಾರ ಸಾಮಗ್ರಿಗಳನ್ನು ದಾಸ್ತಾನು ಮಾಡಿಕೊಳ್ಳುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಕರೆ ನೀಡಿದ್ದಾರೆ.
ಕ್ಲಬ್, ಬಾರ್, ಮಾಲ್, ಸಿನಿಮಾ ಮಂದಿರ, ಹವಾ ನಿಯಂತ್ರಿತ ಹೊಟೇಲ್‍ಗಳನ್ನು ಮುಚ್ಚಿಸಿರುವ ರಾಜ್ಯ ಸರ್ಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವ ಇಂಗಿತವನ್ನು ಸಚಿ ವರು ವ್ಯಕ್ತಪಡಿಸಿದಂತಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದಂತೆ ಎಚ್ಚೆತ್ತಿರುವ ಸರ್ಕಾರ ಮತ್ತಷ್ಟು ಬಿಗಿ ಕ್ರಮಕ್ಕೆ ಮುಂದಾದಂತಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯ ದಲ್ಲಿ ಆಹಾರದ ಕೊರತೆ ಇಲ್ಲ. ಎರಡು ತಿಂಗಳಿಗಾಗು ವಷ್ಟು ದಾಸ್ತಾನು ಮಾಡಿಕೊಂಡಿದ್ದೇವೆ. ನಾಗರಿಕರೂ ಕೂಡ ತಮ್ಮ ಆರೋಗ್ಯ ದೃಷ್ಟಿಯಿಂದ ಒಂದು ವಾರ ಕ್ಕಾಗುವಷ್ಟು ಸಾಮಗ್ರಿಗಳನ್ನು ಶೇಖರಿಸಿಟ್ಟುಕೊಳ್ಳ ಬೇಕೆಂದು ಮನವಿ ಮಾಡಿದ್ದಾರೆ. ಸೋಂಕಿತ ಪ್ರಕರಣ ಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಹಾರ ಸಾಮಗ್ರಿ ಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಮೂಲಕ ಜನತೆ ಮನೆ ಯಿಂದ ಹೊರಬಾರದೆ ಸುರಕ್ಷತೆಗೆ ಒತ್ತು ಕೊಡಬೇ ಕೆಂದು ಕೋರಿದ್ದಾರೆ. ಅನಗತ್ಯವಾಗಿ ಮನೆಯಿಂದ ಆಚೆ ಬರಬೇಡಿ, ಸೋಂಕು ನಿಯಂತ್ರಣವಾಗುವ ವರೆಗೂ ಸರ್ಕಾರದ ಜೊತೆ ಕೈಜೋಡಿಸಿ ಎಂದು ಮನವಿ ಮಾಡಿದ್ದಾರೆ. ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹಬ್ಬುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ವೈದ್ಯರೇ ಹೇಳುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರು ಸೋಂಕು ಹರಡದಂತೆ ಸ್ವಯಂಪ್ರೇರಿತರಾಗಿ ಮನೆ ಯಲ್ಲೇ ಉಳಿಯಬೇಕು. ನಿಮ್ಮ ಕುಟುಂಬದ ಸದಸ್ಯರನ್ನು ಕೆಲ ದಿನಗಳ ಮಟ್ಟಿಗೆ ಮನೆಯಲ್ಲೇ ಉಳಿಸಿಕೊಳ್ಳಿ ಎಂದು ಕಿವಿಮಾತು ಹೇಳಿದ್ದಾರೆ. ದೇವಾಲಯ ಗಳಿಗೂ ಹೆಚ್ಚಿನ ಜನರು ಹೋಗಬಾರದು. ಅಲ್ಲಿಯೂ ಕೂಡ ಸೋಂಕು ತಗುಲುತ್ತಿರುವುದರಿಂದ ಕೆಲವು ದಿನಗಳ ವರೆಗೆ ಮಠಮಂದಿರಗಳಿಂದ ದೂರ ಉಳಿಯಬೇಕು. ಅಲ್ಲದೆ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯ ವಾಗಿ ಪಾಲಿಸಿದರೆ ಸೋಂಕು ಹಬ್ಬುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರದ ನಾನಾ ಭಾಗಗಳಿಂದ ಇಲ್ಲಿಗೆ ನಗರಕ್ಕೆ ಸಾವಿರಾರು ವಾಹನಗಳು ಬರುತ್ತವೆ. ಜೊತೆಗೆ ಅಷ್ಟೇ ಪ್ರಮಾಣದ ಸಾರ್ವಜನಿಕರು ಸಹ ಆಗಮಿಸುತ್ತಾರೆ. ಒಬ್ಬರಿಂದ ಸೋಂಕು ಹಬ್ಬುವ ಸಾಧ್ಯತೆ ಇರುವು ದರಿಂದ ಇನ್ನೂ ಬಿಗಿಯಾದ ಕ್ರಮಗಳನ್ನು ತೆಗೆದು ಕೊಳ್ಳುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಸೋಮವಾರ, ಮಂಗಳವಾರ ರಾತ್ರಿ 9ರವರೆಗೆ ಪಡಿತರ ವಿತರಣೆ
ಬೆಂಗಳೂರು: ಭಾನುವಾರ ಜನತಾ ಕರ್ಪ್ಯೂ ಕಾರಣದಿಂದಾಗಿ ಎಲ್ಲಾ ಅಂಗಡಿಗಳು ಮುಚ್ಚುವ ಕಾರಣ ಬಡ ಜನರಿಗೆ ಆಹಾರದ ಕೊರತೆಯಾಗದಂತೆ ಸೋಮವಾರ ಹಾಗೂ ಮಂಗಳವಾರ ಬೆಳಿಗ್ಗೆ 7 ರಿಂದ ರಾತ್ರಿ 9ರವರೆಗೆ ಪಡಿತರ ಕೇಂದ್ರಗಳು ಕಡ್ಡಾಯವಾಗಿ ತೆರೆಯಲಿವೆ ಎಂದು ಸಚಿವ ಗೋಪಾಲಯ್ಯ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ತಿಂಗಳ ಪಡಿತರ ವಿತರಣೆ ಬದಲಿಗೆ ಎರಡು ತಿಂಗಳ ಪಡಿತರ ನೀಡಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳ ಪಡಿತರ ಏಪ್ರಿಲ್ ಮೊದಲ ವಾರದಲ್ಲಿ ವಿತರಣೆ ಮಾಡ ಲಾಗುವುದು ಎಂದರು. ಬಿಪಿಎಲ್ ಕಾರ್ಡ್‍ದಾರರಿಗೆ 10 ಕೆಜಿ ಅಕ್ಕಿ ಮತ್ತು 4 ಕೆಜಿ ಗೋಧಿ, ಅಂತ್ಯೋದಯ ಕಾರ್ಡ್‍ದಾರರಿಗೂ ನಿಗದಿಯಂತೆ ಅಗತ್ಯ ಪ್ರಮಾಣದಲ್ಲಿ ಅಕ್ಕಿ ವಿತರಣೆ ಮಾಡಲಾಗುವುದು. ಕೊರೊನಾದಿಂದ ಬಾಧಿತವಾಗಿರುವ ಕಲ್ಬುರ್ಗಿ ಜಿಲ್ಲೆಯಲ್ಲಿ ಯಾವ ತೊಂದರೆಯೂ ಆಗದಂತೆ ಕ್ರಮ ವಹಿಸಲಾಗುತ್ತಿದೆ. ಎಪಿಎಂಸಿ ಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದರು. ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಹಾರ ಸಾಮಾಗ್ರಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಮೂಲಕ ಜನತೆ ಮನೆಯಿಂದ ಹೊರಬಾರದೆ ಸುರಕ್ಷತೆಗೆ ಒತ್ತು ಕೊಡಬೇಕು. ಕನಿಷ್ಟಪಕ್ಷ 1 ವಾರಕ್ಕಾಗುವಷ್ಟು ಆಹಾರ ಸಾಮಾಗ್ರಿಗಳನ್ನು ಜನತೆ ಮುಂಚಿತವಾಗಿಯೇ ಖರೀದಿಸಿ ಕೊಟ್ಟುಕೊಳ್ಳುವುದು ಸೂಕ್ತ. ಅನಗತ್ಯವಾಗಿ ಮನೆಯಿಂದ ಆಚೆ ಬಾರದೆ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಪ್ರತಿಯೊಬ್ಬರು ಕೈ ಜೋಡಿಸಬೇಕೆಂದು ಮನವಿ ಮಾಡಿದರು.