ಹೆಚ್‍ಡಿಕೆ ಕನಸು ನನಸಾಗಲ್ಲ, ಬಿಜೆಪಿ ಅಧಿಕಾರಕ್ಕೆ ಬರಲ್ಲ ಇಂಧನ ಸಚಿವ ಡಿ.ಕೆ. ಶಿವಕುಮಾರ್
ಹಾಸನ

ಹೆಚ್‍ಡಿಕೆ ಕನಸು ನನಸಾಗಲ್ಲ, ಬಿಜೆಪಿ ಅಧಿಕಾರಕ್ಕೆ ಬರಲ್ಲ ಇಂಧನ ಸಚಿವ ಡಿ.ಕೆ. ಶಿವಕುಮಾರ್

April 30, 2018

ಹಾಸನ: ಈ ಬಾರಿಯ ವಿಧಾನಸಭಾ ಚುನಾವಣೆ ಯಲ್ಲಿ 132 ಸ್ಥಾನದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗುವ ಕನಸು ನನಸಾಗು ವುದಿಲ್ಲ, ಬಿಜೆಪಿಯಂತೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದರು.

ನಗರದ ಅರಳೇಪೇಟೆ ರಸ್ತೆಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 132 ಸ್ಥಾನ ಗೆಲ್ಲುವುದು ಖಚಿತವಾಗಿದ್ದು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗುವ ಕನಸು ಕಾಣುವುದು ತಪ್ಪುವುದಿಲ್ಲ. ಹಾಗೇ ಬಿಜೆಪಿಗೆ ಹಾಸನ ಜಿಲ್ಲೆಯಲ್ಲಂತೂ ಒಂದು ಸ್ಥಾನವೂ ಬರಲ್ಲ ಎಂದರು.

ಹಾಸನ ಕ್ಷೇತ್ರದಲ್ಲಿ ಹೆಚ್.ಎಸ್.ಪ್ರಕಾಶ್ 4 ಬಾರಿ ಶಾಸಕರಾಗಿದ್ದರೂ ಕ್ಷೇತ್ರದಲ್ಲಿ ಸರಿಯಾದ ರಸ್ತೆ, ಕುಡಿಯುವ ನೀರು ಸೇರಿದಂತೆ ಯಾವ ಅಭಿವೃದ್ಧಿಯನ್ನೂ ಮಾಡಿಲ್ಲ. ಜೊತೆಗೆ ವಿಧಾನಸೌಧದಲ್ಲಂತೂ ಎದ್ದು ಒಂದು ಬಾರಿಯೂ ಪ್ರಶ್ನೆ ಮಾಡಲಿಲ್ಲ. ಇಂತಹವರು ಶಾಸಕರಾದೆ ಮನೆಯಲ್ಲಿದ್ದರೆ ಸೂಕ್ತ ಎಂದು ಟೀಕಿಸಿದರಲ್ಲದೆ, ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡರು ಮಾತ್ರ ಪ್ರಶ್ನೆ ಕೇಳುತ್ತಿದ್ದರು. ಸಾರ್ವ ಜನಿಕರು ಹಾಕುವ ಮತಕ್ಕೆ ಕಿಮ್ಮತ್ತು ಇರಬೇಕು ಎಂದರು.

ಈ ಜಿಲ್ಲೆಯಲ್ಲಿ ಇದುವರೆಗೂ ಯಾವ ಬದಲಾವಣೆ ಆಗಿಲ್ಲ. ಈಗ ಜನರು ಒಂದು ಬದಲಾವಣೆ ಬಯಸಿದ್ದಾರೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಕೆ.ಮಹೇಶ್‍ರಿಗೆ ಅವಕಾಶ ಕೊಡುವ ಮೂಲಕ ಅಭಿವೃದ್ಧಿಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು.

ಒಂದು ವರ್ಷ ಅಧಿಕಾರಿ ನಡೆಸಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡಿದೆ. ಪಕ್ಷ ಭೇದ ಮಾಡದೆ ಎಲ್ಲಾ ತಾಲೂಕುಗಳಿಗೂ ಸಮಾನ ಅನುದಾನ ನೀಡಿದೆ. 3 ವರ್ಷ ಬರ ಇದ್ದರೂ ನಮ್ಮ ಆಡಳಿತದಲ್ಲಿ ವಿದ್ಯುತ್ ಕೊರತೆ ಯಾಗದಂತೆ ನೋಡಿಕೊಳ್ಳಲಾಗಿದೆ. ಈಗಾಗಲೇ 13 ಸಾವಿರ ಎಕರೆಯಲ್ಲಿ ವಿಶ್ವದಲ್ಲೇ ದೊಡ್ಡ ಸೋಲಾರ್ ಪಾರ್ಕ್ ಸ್ಥಾಪಿಸಿ ದಿನದ 24 ಗಂಟೆಯೂ ವಿದ್ಯುತ್ ನೀಡಲು ತೀರ್ಮಾ ನಿಸಿದ್ದೇವೆ ಎಂದರು. ನಾಡಿನ ಯಾವ ಪ್ರಜೆಯೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಉಚಿತ ಅಕ್ಕಿ ನೀಡಿದ್ದೇವೆ. ಆದರೆ ಬಿಜೆಪಿ ಮತ್ತು ಜೆಡಿಎಸ್ ಇದನ್ನು ತಿಳಿದುಕೊಳ್ಳದೆ ಆರೋಪ ಮಾಡುತ್ತಿವೆ. ದೇಶದಲ್ಲಿಯೇ ಎಲ್ಲೂ ಇಲ್ಲದ ಭಾಗ್ಯಗಳನ್ನೂ ನಮ್ಮ ಆಡಳಿತ ನೀಡಿದೆ. ಮುಂದೆ 4 ಕೋಟಿ ಜನರಿಗೂ ಉಚಿತವಾಗಿ ಆರೋಗ್ಯದ ಭಾಗ್ಯ ಕೊಡಬೇಕೆಂದು ತೀರ್ಮಾನಕೈಗೊಂಡಿದ್ದೇವೆ ಎಂದರು.

ದಕ್ಷಿಣ ಹಾಗೂ ಉತ್ತರ ಭಾರತದ ರಾಜಕಾರಣಕ್ಕೆ ಭಾರೀ ವ್ಯತ್ಯಾಸವಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಯಾವ ತಂತ್ರಗಾರಿಕೆಯೂ ಇಲ್ಲಿ ಫಲಿಸುವುದಿಲ್ಲ. ತೆಲಂಗಾಣ ಮತ್ತು ಆಂಧ್ರ ಸರ್ಕಾರ ತಾವು ಎನ್‍ಡಿಎಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿವೆ. ಕೇರಳದಲ್ಲೂ ಬಿಜೆಪಿಯ ಯಾವ ತಂತ್ರ ಫಲಿಸುವುದಿಲ್ಲ. ಕರ್ನಾಟಕದಲ್ಲಂತೂ ಬಿಜೆಪಿ ಅಧಿಕಾರ ಹಿಡಿಯುವುದಿಲ್ಲ ಎಂದು ವ್ಯಂಗ್ಯವಾಡಿದರು.

ಮೇ.12 ರಂದು ನಡೆಯುವ ವಿಧಾನಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷದ ಬಟನ್ ಒತ್ತುವುದು ಕನಕಪುರ ಕ್ಷೇತ್ರಕ್ಕೆ ಕೇಳಬೇಕು. ಸದ್ಯ ಯಾವ ಜೈಕಾರ ಹಾಕುವುದು ಬೇಡ. ಮೇ.15ಕ್ಕೆ ಕಾಂಗ್ರೆಸ್ ಗೆಲುವಿನೊಂದಿಗೆ ಎಲ್ಲರೂ ಒಟ್ಟಿಗೆ ಜೈಕಾರ ಹಾಕೋಣ ಎಂದು ಕರೆ ನೀಡಿದರು.

ಕೆಪಿಸಿಸಿ ಉಪಾಧ್ಯಕ್ಷ ಬಿ. ಶಿವರಾಂ ಮಾತನಾಡಿ, ಹಾಸನ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿ ಹೆಚ್.ಎಸ್.ಪ್ರಕಾಶ್ ಯಾವ ಅಭಿವೃದ್ಧಿ ಕೆಲಸ ಮಾಡಿದ್ದಾರೆ? 20 ವರ್ಷದಲ್ಲಿ ನಗರ ಇನ್ನು ಎತ್ತರಕ್ಕೆ ಬೆಳೆಯಬೇಕಾಗಿತ್ತು. ಇವರೊಂದು ರೀತಿ ಪ್ರಯಾಣ ಕರ ಹಾಗೇ ಬಂದು, ಹೋಗುತ್ತಾರೆ ಎಂದರು. ಈ ಬಾರಿ ಹೆಚ್.ಕೆ.ಮಹೇಶ್ ಅವರಿಗೆ ಅವಕಾಶ ನೀಡಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡೋಣ ಎಂದು ಹೇಳಿದರು.

ಹಾಸನ ಕ್ಷೇತ್ರದ ಅಭ್ಯರ್ಥಿ ಹೆಚ್.ಕೆ. ಮಹೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್‍ಗೆ ನಗರಸಭೆ ಸದಸ್ಯರು ಸೇರಿದಂತೆ ವಿವಿಧ ಪಕ್ಷದ ಇತರರು ಸೇರ್ಪಡೆ ಗೊಂಡರು. ಡಿ.ಕೆ.ಶಿವಕುಮಾರ್ ಅಭಿಮಾನಿಗಳು ಬೃಹತ್ ಹಾರ ಹಾಕಿ ಗೌರವಿಸಿದರು.

ಇದೇ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ಹುಡಾ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್, ವಿಧಾನಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಂ.ಆನಂದ್, ರಾಜ್ಯಸಭಾ ಮಾಜಿ ಸದಸ್ಯ ಹೆಚ್.ಕೆ. ಜವರೇಗೌಡ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಮ್ಮಿಗೆ ಮೋಹನ್, ಎಸ್‍ಎಂ.ಆನಂದ್ ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್, ಜಿ.ಟಿ.ಕುಮಾರಸ್, ನಗರಸಭೆ ಸದಸ್ಯ ರಾಜೇಶ್, ಯಶ್ವಂತ, ವನಮಾಲಾ, ತಾರಾಚಂದನ್, ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್, ಕೆಲವತ್ತಿ ಸೋಮಶೇಖರ್, ಮದುಸೀಧನ್, ರಾಜೇಶ್, ರಾಘವೇಂದ್ರ, ತಂಬ್ಲಾಪುರ ಗಣೇಶ್ ಇತರರಿದ್ದರು.

Translate »