ಕೊಡಗಿನಾದ್ಯಂತ ವರುಣನ ರೌದ್ರಾವತಾರ
ಕೊಡಗು

ಕೊಡಗಿನಾದ್ಯಂತ ವರುಣನ ರೌದ್ರಾವತಾರ

July 12, 2018
  • ಉಕ್ಕಿ ಹರಿಯುತ್ತಿರುವ ನದಿ ತೊರೆಗಳು
  •  ಜನ ಜೀವನ ಅಸ್ತವ್ಯಸ್ತ, ಪರದಾಟ
  •  ಇಂದು ಶಾಲಾ-ಕಾಲೇಜಿಗೆ ರಜೆ

ಮಡಿಕೇರಿ:  ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ನಾಡಿನ ಜೀವನದಿ ಕಾವೇರಿ ಉಗಮ ಸ್ಥಳ ತಲಕಾವೇರಿ, ತ್ರಿವೇಣಿ ಸಂಗಮ ಭಾಗಮಂಡಲ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಕಳೆದ ಐದು ದಿನ ಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ನಾಳೆ (ಜು.12)ಯೂ ಸಹ ಜಿಲ್ಲಾದ್ಯಂತ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ.

ಭಾಗಮಂಡಲ ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿದ್ದು, ಭಾಗಮಂಡಲ-ಅಯ್ಯಂಗೇರಿ ವಾಹನ ಸಂಚಾರ ಕಡಿತಗೊಂಡಿದೆ.

ಬೋಟ್ ಬಳಸಿ ಅಲ್ಲಿನ ನಾಗರಿಕರಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಮಡಿಕೇರಿ-ಭಾಗಮಂಡಲ ಮಾರ್ಗದ ರಸ್ತೆಯಲ್ಲಿ ನೀರು ಹೆಚ್ಳಳವಾಗಿದೆ. ಭಾಗಮಂಡಲದಲ್ಲಿ ನುರಿತ ಈಜು ತಜ್ಞರು, ಗೃಹ ರಕ್ಷಕದಳದ ಸಿಬ್ಬಂದಿಗಳು ಮೊಕ್ಕಾಂ ಹೂಡಿದ್ದು, ಪ್ರವಾಹ ಹೆಚ್ಚಾದ ಸಂದರ್ಭದಲ್ಲಿ ಬೋಟ್ ಬಳಸಿ ಅಲ್ಲಿನ ಜನರು ಹಾಗೂ ಪ್ರವಾಸಿಗರಿಗೆ ಸಂಚಾರಕ್ಕೆ ಅನುವು ಮಾಡಿಕೊಡಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ಕೊಡಗಿನ ದಕ್ಷಿಣ ಭಾಗದಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಲಕ್ಷ್ಮಣ ತೀರ್ಥನದಿ ತುಂಬಿ ಹರಿಯುತ್ತಿದೆ. ವ್ಯಾಪಕ ಮಳೆಯಿಂದಾಗಿ ತಿತಿಮತಿ ರಸ್ತೆಯು ಹದಗೆಟ್ಟಿದ್ದು, ಸರಿಪಡಿಸಿ ಸಂಚಾರಕ್ಕೆ ಅವಕಾಶ ಮಾಡಲಾಗಿದೆ. ಹಾಗೆಯೇ ಪೆರುಂಬಾಡಿ-ಮಾಕುಟ್ಟ ರಸ್ತೆ ಮಾರ್ಗದಲ್ಲಿ ಲಘು ವಾಹನಗಳು ಸಂಚರಿಸುತ್ತಿವೆ. ಹೀಗೆ ಜಿಲ್ಲೆಯಾದ್ಯಂತ ನಿರಂತರ ಸುರಿಯುತ್ತಿರು ವುದರಿಂದ ಮಳೆಗೆ ಜನರ ಬದುಕು ದುಸ್ತರವಾಗಿದೆ. ಸಂಚಾರ ಹಾಗೂ ಜನ ಜೀವನ ಪರಿಸ್ಥಿತಿ ಅಸ್ತವ್ಯಸ್ಥ ಉಂಟಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಸುಗಮ ಸಂಚಾರ ಹಾಗೂ ಜನಜೀವನಕ್ಕೆ ಅಗತ್ಯ ಕ್ರಮಕೈಗೊಂಡಿದೆ.

ಪ್ರವಾಹ ಪೀಡಿತ ಪ್ರದೇಶವಾಗಿರುವ ಭಾಗಮಂಡಲದ ತ್ರಿವೇಣಿ ಸಂಗಮ ತುಂಬಿ ಹರಿಯುತ್ತಿದ್ದು, ಪ್ರತಿ ವರ್ಷ ಮಳೆಗಾಲದ ಅವಧಿಯಲ್ಲಿ ಭಾಗಮಂಡಲದಲ್ಲಿ ಪ್ರವಾಹ ಉಂಟಾಗುತ್ತಿದೆ. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ನಾಗರಿಕರು, ಪ್ರವಾಸಿಗರು ಸೇರಿದಂತೆ ಎಲ್ಲರಿಗೂ ತೊಂದರೆಯಾಗಿದೆ. ಆದ್ದರಿಂದ ಈಗಾ ಗಲೇ ಸರ್ಕಾರದ ಪ್ರಸ್ತಾವನೆಯಲ್ಲಿರು ವಂತೆ ಆದಷ್ಟು ಶೀಘ್ರದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಬೇಕೆಂದು ಇಲ್ಲಿನ ನಿವಾಸಿ ವಸಂತ್ ಒತ್ತಾಯಿಸಿದರು.

ಮತ್ತೊಬ್ಬ ಸ್ಥಳೀಯರಾದ ನಿಷಾ ಮಾತನಾಡಿ, ಭಾಗಮಂಡಲದಲ್ಲಿ ಪ್ರವಾಹ ಉಂಟಾಗು ವುದರಿಂದ ಇಲ್ಲಿನ ಜನರ ಪರಿಸ್ಥಿತಿ ಹೇಳ ತೀರದು ಎಂದು ಅಳಲು ತೋಡಿಕೊಂಡರು.

ಮುಳುಗು ತಜ್ಞರಾದ ರವಿಮುತ್ತಪ್ಪ ಅವರು, ಭಾಗಮಂಡಲ-ಅಯ್ಯಂಗೇರಿ ರಸ್ತೆ ಮಾರ್ಗದಲ್ಲಿ ಬೋಟ್ ಬಳಸಲಾ ಗುತ್ತಿದೆ. ಮಡಿಕೇರಿ-ಭಾಗಮಂಡಲ ಮಾರ್ಗ ದಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ಬೋಟು ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ಸಂಬಂಧಪಟ್ಟ ಸಿಬ್ಬಂದಿಗ ಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಸೋಮವಾರಪೇಟೆ ವರದಿ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬಿರು ಗಾಳಿ ಸಹಿತ ಧಾರಾಕಾರ ಮಳೆ ಸುರಿಯು ತ್ತಿದ್ದು ಅಲ್ಲಲ್ಲಿ ಹಾನಿ ಸಂಭವಿಸಿದೆ.

ಸೋಮವಾರಪೇಟೆ, ಮಡಿಕೇರಿ ರಸ್ತೆಯ ಮಾದಾಪುರ ಸಮೀಪದ ರಸ್ತೆಯಲ್ಲಿ ಭಾರಿ ಗಾತ್ರದ ಮರ ಬಿದ್ದಿದ್ದು, ಸಂಚಾರ ಅಸ್ತ ವ್ಯಸ್ತಗೊಂಡಿತ್ತು. ರಸ್ತೆಯಲ್ಲಿ ಸಿಲುಕಿಗೊಂಡ ಪ್ರಯಾಣಿಕರು ಸ್ಥಳದಲ್ಲೇ ಹಣವನ್ನು ಸಂಗ್ರಹಿಸಿ, ಸ್ಥಳೀಯ ಕಾರ್ಮಿಕರಿಗೆ ಕೊಟ್ಟು ಮರವನ್ನು ತೆರವುಗೊಳಿಸಿ, ರಸ್ತೆ ಸಂಚಾರ ಸುಗಮ ಗೊಳಿಸಿದರು.

ಸೋಮವಾರಪೇಟೆ, ಶನಿವಾರಸಂತೆ ರಾಜ್ಯಹೆದ್ದಾರಿಯ ಹೊನವಳ್ಳಿ ಸಮೀಪ ರಸ್ತೆಗಡ್ಡಲಾಗಿ ಮರ ಬಿದ್ದ ಪರಿಣಾಮ 2 ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು.

ಸಮೀಪದ ಬಳಗುಂದ ಗ್ರಾಮದ ಪವಿತ್ರ ಕುಶಾಲಪ್ಪ ಎಂಬುವರ ವಾಸದ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದ್ದು, ಕುಟುಂ ಬದವರು ಅದೃಷ್ಟವಶಾತ್ ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. ಬಸವನಹಳ್ಳಿ ಗ್ರಾಮದ ಮುಗೇಶ್ವರಿ, ಕೂಡುಮಂಗಳೂರು ಗ್ರಾಮದ ತಿಮ್ಮ, ಜಾನಕಿ, ಶನಿವಾರಸಂತೆ ಸಮೀಪದ ದೊಡ್ಡಕಣಗಾಲು ಗ್ರಾಮದ ಕೆ.ಕೆ.ಮಲ್ಲೇಶ್ ಎಂಬುವರಗಳ ಮನೆಯ ಗೋಡೆ ಕುಸಿದು ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಸ್ಥಳಕ್ಕೆ ಅಲ್ಲಿನ ಕಂದಾಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಚಲಿಸುತ್ತಿದ್ದ ಆಟೋರಿಕ್ಷಾದ ಮೇಲೆ ಮರ ಉರುಳಿಬಿದ್ದ ಪರಿಣಾಮ ಚಾಲಕ ಗಾಯಗೊಂಡಿರುವ ಘಟನೆ ಪಟ್ಟಣದ ಐ.ಬಿ.ರಸ್ತೆಯಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಚಂದನಮಕ್ಕಿ ಗ್ರಾಮದ ತಿಮ್ಮಪ್ಪ ಪೂಜಾರಿ ಗಾಯಗೊಂಡವರು.

ಮುಖದ ಭಾಗಕ್ಕೆ ಪೆಟ್ಟಾಗಿರುವ ಚಾಲಕನಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆ ದೊಯ್ಯಲಾಗಿದೆ. ಮರದ ರೆಂಬೆಗಳು ರಿಕ್ಷಾ ಮೇಲೆ ಬಿದ್ದಿರುವುದರಿಂದ ಮುಂಭಾಗ ಜಖಂ ಗೊಂಡಿದೆ. ಪವಾಡಸದೃಶ ರೀತಿಯಲ್ಲಿ ಚಾಲಕ ಪ್ರಾಣ ಪಾಯದಿಂದ ಪಾರಾದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ಮಳೆ ವಿವರ

ಮಡಿಕೇರಿ:  ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 87.30 ಮಿ.ಮೀ. ಕಳೆದ ವರ್ಷ ಇದೇ ದಿನ 5.44 ಮಿ.ಮೀ., ಜನವರಿಯಿಂದ ಇಲ್ಲಿಯವರೆಗಿನ ಮಳೆ 1855.98 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 821.09 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 110.66 ಮಿ.ಮೀ. ಕಳೆದ ವರ್ಷ ಇದೇ ದಿನ 9.65 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2449.21 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1123.65 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ 58.40 ಮಿ.ಮೀ. ಕಳೆದ ವರ್ಷ ಇದೇ ದಿನ 4.80 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ 1544.17 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 720.45 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 92.85 ಮಿ.ಮೀ. ಕಳೆದ ವರ್ಷ ಇದೇ ದಿನ 1.87 ಜನವರಿಯಿಂದ ಇಲ್ಲಿಯವರೆಗಿನ ಮಳೆ 1312.67 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 602.85 ಮಿ.ಮೀ. ಮಳೆಯಾಗಿತ್ತು.

Translate »