ಮೈಸೂರು: ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಏರ್ಪಡಿಸಿದ್ದ ನಾಡಕುಸ್ತಿ ಪಂದ್ಯಾವಳಿ ಉದ್ಘಾಟನೆ ವೇಳೆ ಹೀಲಿಯಂ ಬಲೂನ್ ಗಳನ್ನು ಹಾರಿ ಬಿಡುವಾಗ ಸ್ಫೋಟ ಸಂಭವಿಸಿದ್ದು, ಸುತ್ತೂರು ಶ್ರೀಗಳು ಅದೃಷ್ಟವ ಶಾತ್ ಅಪಾಯದಿಂದ ಪಾರಾಗಿದ್ದಾರೆ.
ಸುತ್ತೂರು ಶ್ರೀ ಕ್ಷೇತ್ರದಲ್ಲಿ ಇಂದು ಮಧ್ಯಾಹ್ನ 2 ಗಂಟೆ ವೇಳೆಗೆ ಬಲೂನ್‍ಗಳು ಸ್ಫೋಟ ಗೊಂಡು ಮೂವರು ಕುಸ್ತಿ ತೀರ್ಪುಗಾರರು ಸೇರಿ ಹಲವರಿಗೆ ಗಾಯಗಳಾಗಿದ್ದು ಸ್ಥಳದಲ್ಲಿದ್ದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಸೇರಿದಂತೆ ಕೆಲ ಅತಿಥಿಗಳು ಸಹ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಶ್ರೀಗಳಿಗೆ ಯಾವುದೇ ತೊಂದರೆಯಾಗಿಲ್ಲ. ಕುಸ್ತಿ ಪಂದ್ಯಾವಳಿಗೆ ಅಖಾಡ ಸಿದ್ಧವಾಗಿತ್ತು. ಉದ್ಘಾಟನೆ ವೇಳೆ ಹಾರಿ ಬಿಡಲು ಹೀಲಿಯಂ ತುಂಬಿದ ಬಲೂನ್‍ಗಳನ್ನು ತರಲಾಗಿತ್ತು. ಹಾಗೆಯೇ ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳೂ ಸೇರಿ ದಂತೆ ಉಪಸ್ಥಿತರಿದ್ದ ಗಣ್ಯರಿಗೆ ಹಸ್ತಾಂತ ರಿಸಲೆಂದು ಕುಸ್ತಿಪಟುಗಳು ಕ್ರೀಡಾ ಜ್ಯೋತಿ ಯನ್ನೂ ತಂದಿದ್ದರು. ಶ್ರೀಗಳು ಸೇರಿದಂತೆ ಗಣ್ಯರ ಅಕ್ಕಪಕ್ಕದಲ್ಲಿ ಕ್ರೀಡಾಪಟುಗಳು ಬಲೂನ್ ಹಿಡಿದು ನಿಂತಿದ್ದರು. ಇನ್ನೇನು ಕ್ರೀಡಾಜ್ಯೋತಿ
ಹಸ್ತಾಂತರಿಸಿ ಬಲೂನುಗಳನ್ನು ಹಾರಿ ಬಿಡಬೇಕು ಎನ್ನುವಷ್ಟರಲ್ಲಿ ಉರಿ ಬಿಸಿಲಿನ ಝಳ ಹಾಗೂ ಕ್ರೀಡಾ ಜ್ಯೋತಿಯ ಶಾಖ ಸೇರಿ ಹೊಗೆ ಪಸರಿಸಿದ ಪರಿಣಾಮ ತಕ್ಷಣ ರಸಾಯನ ತುಂಬಿದ್ದ ಬಣ್ಣ ಬಣ್ಣದ ಬಲೂನ್‍ಗಳು ಹಠಾತ್ ಸ್ಫೋಟಗೊಂಡವು.
ಬಲೂನ್ ಬಂಚ್‍ಗಳನ್ನು ತುಸು ಎತ್ತರಕ್ಕೆ ಹಿಡಿದಿದ್ದರು. ಶ್ರೀಗಳು ತಲೆಯ ಮೇಲೆ ಕಾವಿ ಬಟ್ಟೆ ಹೊದ್ದಿದ್ದರಿಂದ ಹಾಗೂ ಕುಸ್ತಿಪಟುಗಳು ರುಮಾಲು ಪೇಟ ಹಾಕಿಕೊಂಡಿದ್ದರಿಂದಾಗಿ ಹೆಚ್ಚಿನ ಬೆಂಕಿಯ ಪ್ರಖರತೆ ತಾಕಿಲ್ಲ. ಹಾಗಾಗಿ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಆದರೆ ಬಲೂನ್ ಸ್ಫೋಟಗೊಂಡಾಗ ಜ್ವಾಲೆಯ ಪ್ರಖರತೆಯಿಂದ ಹತ್ತಿರದಲ್ಲಿದ್ದ ಮೂವರ ಮುಖದ ಭಾಗಕ್ಕೆ ಸಣ್ಣಪುಟ್ಟ ಗಾಯಗಳಾಗಿವೆ. ಅವರಿಗೆ ಸುತ್ತೂರು ಶ್ರೀ ಕ್ಷೇತ್ರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆಂದು ಮೈಸೂರು ಜೆಎಸ್‍ಎಸ್ ಆಸ್ಪತ್ರೆಗೆ ಕಳುಹಿಸಲಾಯಿತು. ಸ್ಥಳದಲ್ಲೇ ಸುತ್ತೂರು ಶ್ರೀಗಳು ಇದ್ದರಾದರೂ, ಯಾವುದೇ ಅಪಾಯವಿಲ್ಲದೆ ಅದೃಷ್ಟವಶಾತ್ ಪಾರಾಗಿರುವುದರಿಂದ ಲಕ್ಷಾಂತರ ಭಕ್ತರು, ಶ್ರೀಮಠದ ಅನುಯಾಯಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಗೃಹ ಸಚಿವ ಎಂ.ಬಿ. ಪಾಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಿದ್ಧಗಂಗಾ ಶ್ರೀಗಳು ಸೇರಿದಂತೆ ಹಲವು ಗಣ್ಯರು ದೂರವಾಣಿ ಮೂಲಕ ಸಂಪರ್ಕಿಸಿ ಶ್ರೀಗಳ ಆರೋಗ್ಯ ವಿಚಾರಿಸಿದರು. ದಕ್ಷಿಣ ವಲಯ ಐಜಿಪಿ ಕೆ.ವಿ. ಶರತ್‍ಚಂದ್ರ, ಎಸ್ಪಿ ಅಮಿತ್ ಸಿಂಗ್, ಎಎಸ್ಪಿ ಸ್ನೇಹ ಇನ್ನಿತರ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಬಲೂನ್ ಸ್ಫೋಟದಿಂದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಮತ್ತಿತರ ಅತಿಥಿ ಗಣ್ಯರು, ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಭಕ್ತರು, ಮಠದ ವಿದ್ಯಾರ್ಥಿಗಳು, ಸ್ವಯಂ ಸೇವಕರು ಹಾಗೂ ಸುತ್ತೂರು ಗ್ರಾಮಸ್ಥರು ಆತಂಕಗೊಂಡರು. ಘಟನೆಯಲ್ಲಿ ಯಾರಿಗೂ ಹೆಚ್ಚಿನ ಅಪಾಯವಾಗಿಲ್ಲ ಎಂದು ತಿಳಿದ ಬಳಿಕ ನಿಟ್ಟುಸಿರು ಬಿಟ್ಟರು. ಪ್ರತಿಕ್ರಿಯಿಸಿದ ವಿಧಿವಿಜ್ಞಾನ ತಜ್ಞ ಡಾ. ದಿನೇಶ್‍ರಾವ್, ನೈಟ್ರೋಜನ್ ತುಂಬಿದ್ದರಿಂದ ಬೆಂಕಿ ಮತ್ತು ಬಿಸಿಲಿನ ತಾಪಕ್ಕೆ ಬಲೂನ್
ಸ್ಫೋಟಗೊಂಡಿರಹುದೆಂದು ಅಭಿಪ್ರಾಯ ಪಟ್ಟಿದ್ದಾರೆ.
ಗಾಯಾಳುಗಳಿಗೆ ಚಿಕಿತ್ಸೆ: ಸುತ್ತೂರಿನಲ್ಲಿ ಹೀಲಿಯಂ ಬಲೂನ್ ಸ್ಫೋಟಗೊಂಡ ಘಟನೆಯಲ್ಲಿ ಸುಮಾರು 15 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದ್ದು, ಇವರಲ್ಲಿ 7 ಮಂದಿಯನ್ನು ಮೈಸೂರಿನ ಜೆಎಸ್‍ಎಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹಾಸನ ಜಿಲ್ಲೆ, ಹಂಪನಹಳ್ಳಿಯ ಕಾಳೇಗೌಡ(55), ಮೈಸೂರಿನ ರವಿಕುಮಾರ್(57), ಪಿ.ವೆಂಕಟಸ್ವಾಮಿ, ಚೊಕ್ಕಮೂರ್ತಿ(55), ಕಲ್ಮಳ್ಳಿ ಶಿವಕುಮಾರ್(62), ನಂಜನಗೂಡಿನ ಪ್ರವೀಣ್ ಕುಮಾರ್(33) ಹಾಗೂ ಶ್ರೀರಂಗಪಟ್ಟಣ ತಾಲೂಕು ಹೊಸಹಳ್ಳಿಯ ಶಿವು(34) ಅವರಿಗೆ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಯಾರಿಗೂ ಹೆಚ್ಚಿನ ತೊಂದರೆಯಾಗಿಲ್ಲ. ನಾಳೆ ಎಲ್ಲರನ್ನೂ ಡಿಸ್ಚಾರ್ಜ್ ಮಾಡಲಾಗುವುದು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಮಂಡ್ಯ ಜಿಲ್ಲೆಗೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲೆಂದು ಶ್ರೀರಂಗಪಟ್ಟಣದ ಹಳೆ ಸಂತೆ ಮೈದಾನದಲ್ಲಿ ಬೃಹತ್ ಗಾತ್ರದ ನೈಟ್ರೋಜನ್ ಬಲೂನ್ ಹಾರಿಬಿಡುವ ವೇಳೆ ಸ್ಫೋಟಗೊಂಡು ಶಾಲಾ ಮಕ್ಕಳು ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅವರಲ್ಲಿ ಓರ್ವ ಬಾಲಕ ಇಂದಿಗೂ ಚಿಂತಾಜನಕ ಸ್ಥಿತಿಯಲ್ಲಿರುವುದನ್ನು ಇಲ್ಲಿ ಸ್ಮರಿಸಬಹುದು.
ನನಗೆ ಯಾವುದೇ ತೊಂದರೆಯಾಗಿಲ್ಲ, ಆತಂಕ ಬೇಡ: ಸುತ್ತೂರು ಶ್ರೀಗಳು
ಬಲೂನ್ ಸ್ಫೋಟದಿಂದ ನಾನೂ ಸೇರಿದಂತೆ ಯಾರಿಗೂ ತೊಂದರೆ ಆಗಿಲ್ಲ, ಯಾರೂ ಆತಂಕಪಡಬೇಡಿ ಎಂದು ಸುತ್ತೂರು ಮಠಾಧೀಶ ರಾದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ಭಕ್ತ ಸಮು ದಾಯಕ್ಕೆ ಅಭಯ ನೀಡಿದ್ದಾರೆ.
ಘಟನೆಯಿಂದ ಮೂರ್ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯಗಳಾ ಗಿವೆಯಾದರೂ, ತೊಂದರೆ ಏನೂ ಆಗಿಲ್ಲ, ಎಲ್ಲರೂ ಚೆನ್ನಾಗಿದ್ದೇವೆ. ಕುಸ್ತಿ ಪಂದ್ಯಾವಳಿಯೂ ಸುಸೂತ್ರವಾಗಿ ನಡೆದಿದೆ. ವಿಷಯ ತಿಳಿದು ಮುಖ್ಯಮಂತ್ರಿ ಕುಮಾರ ಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ್, ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಅನೇಕರು ಕರೆ ಮಾಡಿ, ವಿಚಾರಿಸಿದರು. ಬಲೂನ್ ಒಳಗಿದ್ದ ಬಣ್ಣದ ಹೀಲಿಯಂ ಹೊರಗೆ ಪಸರಿಸಿತು. ಆ ದೃಶ್ಯವನ್ನು ಮಾಧ್ಯಮದಲ್ಲಿ ನೋಡಿದವರಿಗೆ ದೊಡ್ಡ ಪ್ರಮಾಣದ ಅನಾಹುತವಾದಂತೆ ಕಾಣಿಸಿದೆ. ಆದರೆ ಇದೊಂದು ಸಣ್ಣ ಅವಘಡ. ಯಾರಿಗೂ ಅಪಾಯವಾಗಿಲ್ಲ. ಆತಂಕ ಬೇಡ ಎಂದು ಶ್ರೀಗಳು ಪ್ರತಿಕ್ರಿಯಿಸಿದ್ದಾರೆ. ಘಟನೆ ಸಂಬಂಧ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಸಮಿತಿ ಕಾರ್ಯದರ್ಶಿ ಎಸ್.ಶಿವ ಕುಮಾರ್ ಪ್ರಕಟಣೆ ನೀಡಿದ್ದು, ಬಲೂನ್‍ಗಳಿಂದ ಹೀಲಿಯಂ ಹೊರಚೆಲ್ಲಿದ್ದರಿಂದ ಬೆಂಕಿಯ ಶಾಖಕ್ಕೆ ಸಮೀಪ ದಲ್ಲಿದ್ದವರಿಗೆ ಸ್ವಲ್ಪ ತೊಂದರೆಯಾಗಿದೆ. ಅವರಿಗೆ ಪ್ರಾಥ ಮಿಕ ಚಿಕಿತ್ಸೆ ನೀಡಲಾಗಿದೆ. ಶ್ರೀಗಳಿಗೆ ಯಾವುದೇ ತೊಂದರೆ ಯಾಗಿಲ್ಲ. ಘಟನೆ ನಂತರ ಶ್ರೀಗಳು ಪೂಜೆ ಮುಗಿಸಿ, ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ. ಈ ಬಗ್ಗೆ ಭಕ್ತರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.