ಮಡಿಕೇರಿ: ಹೊಸ ವರ್ಷವನ್ನು ಸಂಭ್ರಮಿಸಲು ಕೊಡಗು ಜಿಲ್ಲೆಗೆ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರ ಆಗಮನ ವಾಗಿದೆ. ಜಿಲ್ಲೆಯ ಪ್ರವಾಸಿತಾಣಗಳಲ್ಲಿ ಕಾಲಿಡಲು ಸ್ಥಳವಿಲ್ಲದ ರೀತಿಯಲ್ಲಿ ಪ್ರವಾಸಿ ಗರು ತುಂಬಿಕೊಂಡಿದ್ದರು. ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಬಳಿಕ ಮಡಿ ಕೇರಿ ದಸರಾ ಉತ್ಸವ, ಶ್ರೀ ತಲಕಾವೇರಿ ತೀರ್ಥೋದ್ಭವವನ್ನು ಹೊರತುಪಡಿಸಿದರೆ ಡಿ.3ನೇ ವಾರದಿಂದ ಜಿಲ್ಲೆಯಲ್ಲಿ ಪ್ರವಾಸಿಗರು ಕಂಡು ಬಂದರು.
ಕುಶಾಲನಗರದ ದುಬಾರೆ, ಗೋಲ್ಢನ್ ಟೆಂಪಲ್, ಕಾವೇರಿ ನಿಸರ್ಗಧಾಮ, ಮಡಿಕೇರಿಯ ಮಾಂದಲ್ ಪಟ್ಟಿ, ಅಬ್ಬಿಫಾಲ್ಸ್ ಮತ್ತು ನೈಸರ್ಗಿಕ ಸೌಂದರ್ಯದ ರಾಜಾಸೀಟ್‍ನಲ್ಲಿ ವರ್ಷಾಂತ್ಯದ ಕೊನೆಯ ದಿನದ ಸೂರ್ಯಾಸ್ತ ವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಸಹಸ್ರ ಸಂಖ್ಯೆಯಲ್ಲಿ ಕಿಕ್ಕಿರಿದು ತುಂಬಿದ್ದರು. ಸಂಜೆ 6 ಗಂಟೆಗೆ ವೇಳೆಗೆ ನೇಸರ ಮೋಡದ ಮರೆಯಲ್ಲಿ ಜಾರುತ್ತಿರುವುದನ್ನು ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆ ಹಿಡಿದು ಕೊಂಡ ಪ್ರವಾಸಿಗರು, ಸೂರ್ಯ ರಶ್ಮಿ ಮರೆಯಾಗುತ್ತಿದ್ದಾಗ, ‘2018ಕ್ಕೆ ಗುಡ್‍ಬೈ’ ಎಂದು ಕೂಗುತ್ತಾ ನೇಸರನನ್ನು ಬೀಳ್ಕೊಟ್ಟರು. ಪುಟಾಣಿ ಮಗುವಿನಿಂದ ಯುವಕ-ಯುವತಿ ಯರು, ದಂಪತಿಗಳು, ಪ್ರೇಮಿಗಳು ಮಾತ್ರವಲ್ಲದೇ ವಯೋವೃದ್ಧರೂ ಕೂಡ ರಾಜಾಸೀಟ್‍ಗೆ ಆಗಮಿಸಿ ವರ್ಷಾಂತ್ಯದ ಸೂರ್ಯಾಸ್ತಮಾನವನ್ನು ಸಾಕ್ಷೀಕರಿಸಿದರು.
ಟ್ರಾಫಿಕ್ ಜಾಮ್: ಬೆಂಗಳೂರು, ಮೈಸೂರು, ಕೇರಳ, ತಮಿಳುನಾಡು, ಮಹಾ ರಾಷ್ಟ್ರ, ಪಂಜಾಬ್ ಸೇರಿದಂತೆ ದೇಶದ ವಿವಿಧ ಕಡೆಗಳಿಂದ ಪ್ರವಾಸಿಗರು ಈ ಬಾರಿ ಮಡಿಕೇರಿಗೆ ಆಗಮಿಸಿದ್ದು ವಿಶೇಷವಾಗಿತ್ತು. ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ವಾಹನದಟ್ಟಣೆ ಕಂಡು ಬಂತು. ನಗರದ ರಸ್ತೆಗಳಲ್ಲೂ ಪ್ರವಾಸಿಗರ ವಾಹನಗಳೇ ತುಂಬಿಕೊಂಡಿದ್ದವು. ಹೀಗಾಗಿ ನಗರದ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಕಂಡು ಬಂತು. ಸಂಚಾರಿ ಪೊಲೀಸರು ವಾಹನ ದಟ್ಟಣೆಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದುದರಿಂದ ಟ್ರಾಫಿಕ್‍ನಲ್ಲಿ ಸಿಲುಕಿದ್ದ ಸ್ಥಳೀಯರು ಪೊಲೀಸರೊಂದಿಗೆ ಕೈ ಜೋಡಿಸಿ ವಾಹನ ಸಂಚಾರ ಸುಗಮಗೊಳಿಸಿದರು.
ಪ್ರವಾಸೋದ್ಯಮ ಚೇತರಿಕೆ: ಡಿ.3ನೇ ವಾರದಿಂದ ಜಿಲ್ಲೆಯೆಲ್ಲೆಡೆ ಪ್ರವಾಸಿಗರು ಭೇಟಿ ನೀಡಿದ್ದರಿಂದಾಗಿ ಪ್ರವಾಸೋದ್ಯಮ ದಲ್ಲಿ ತುಸು ಚೇತರಿಕೆ ಕಂಡಿದೆ. ಪ್ರಕೃತಿ ವಿಕೋಪದಲ್ಲಿ ಸಂಪೂರ್ಣ ಕೊಡಗು ಜಿಲ್ಲೆಗೆ ಹಾನಿಯಾಗಿದೆ ಎಂದೇ ನಂಬಿದ್ದ ಪ್ರವಾಸಿಗರಿಗೆ ಜಿಲ್ಲೆಗೆ ಭೇಟಿ ನೀಡಿದ ಬಳಿಕ ವಾಸ್ತವಾಂಶದ ಅರಿವಾಗಿದೆ. ಹೀಗಾಗಿ ಡಿ.4ನೇ ವಾರದಲ್ಲಿ ಅತೀ ಹೆಚ್ಚು ಪ್ರವಾಸಿ ಗರು ಕೊಡಗು ಜಿಲ್ಲೆಗೆ ಭೇಟಿ ನೀಡುವಂತಾ ಗಿದೆ. ಪರಿಣಾಮವೆಂಬಂತೆ ಹೊಟೇಲ್, ರೆಸಾರ್ಟ್, ಹೋಂಸ್ಟೇ, ಟ್ಯಾಕ್ಸಿಯಂತಹ ಪ್ರವಾಸೋದ್ಯಮ ಪೂರಕ ವ್ಯವಸ್ಥೆಗಳನ್ನೇ ನಂಬಿ ಬದುಕು ಕಟ್ಟಿಕೊಂಡವರ ಪಾಲಿಗೆ ಜೀವಕಳೆ ಬಂದಂತಾಗಿದೆ.
ಹೌಸ್ ಪುಲ್: ಜಿಲ್ಲೆಯ ಎಲ್ಲಾ ಲಾಡ್ಜ್ ಗಳು, ಹೊಟೇಲ್, ರೆಸಾರ್ಟ್‍ಗಳು ಪೂರ್ವ ನಿಗದಿಯಾಗಿ ವರ್ಷಾಂತ್ಯದ ದಿನಕ್ಕೆ ಬುಕ್ ಆಗಿದ್ದು ಕಂಡು ಬಂತು. ರಾತ್ರಿ ಕಳೆಯಲು ರೂಂಗಳು ದೊರೆಯುತ್ತದೆ ಎಂದು ನಂಬಿಕೊಂಡು ಮಡಿಕೇರಿಗೆ ಆಗಮಿಸಿದ ಹಲವು ಪ್ರವಾಸಿಗರಿಗೆ ಇದರಿಂದ ನಿರಾಸೆ ಯಾಯಿತು. ತಡರಾತ್ರಿಯವರೆಗೂ ಹೊರ ಊರ ಪ್ರವಾಸಿಗರು ಲಾಡ್ಜ್‍ಗಳು, ಹೊಟೇಲ್ ಗಳಲ್ಲಿ ರೂಂ ಗಾಗಿ ತಡಕಾಡುತ್ತಿದ್ದುದು ಕಂಡು ಬಂತು. ವಾಹನಗಳಲ್ಲಿ ಬಂದ ಪ್ರವಾಸಿಗರು ತಮ್ಮ ವಾಹನಗಳಲೇ ರಾತ್ರಿ ಕಳೆದರಲ್ಲದೇ, ರೂಂ ವ್ಯವಸ್ಥೆ ದೊರೆಯದ ಪ್ರವಾಸಿಗರು ರಾತ್ರಿ ಕುಶಾಲನಗರದ ಕಡೆ ಮುಖ ಮಾಡಿದ್ದರು.
ಜಿಲ್ಲೆಯ ವಿವಿಧ ರೆಸಾರ್ಟ್‍ಗಳು ಹೊಸ ವರ್ಷಾಚರಣೆಗಾಗಿ ವಿವಿಧ ಕಾರ್ಯಕ್ರಮ ಗಳನ್ನು ಆಯೋಜಿಸಿದ್ದವು. ಡಿ.ಜೆ. ನೈಟ್ಸ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕ-ಯುವತಿಯರು ಪಾಲ್ಗೊಂಡಿದ್ದರಲ್ಲದೆ, ಅಬ್ಬರದ ಡಿ.ಜೆ ಸೌಂಡ್ಸ್‍ಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ವಿವಿಧ ಖಾದ್ಯಗಳು, ಹೋಂ ಮೇಡ್ ವೈನ್‍ಗಳು ವಿಶೇಷ ಎನಿಸಿದವು.