ಸಂಗೀತ ವಿವಿ ಹಂಗಾಮಿ ಕುಲಪತಿ ಬದಲಾವಣೆಗೆ ಹಿಮಾಂಶು ಒತ್ತಾಯ
ಮೈಸೂರು

ಸಂಗೀತ ವಿವಿ ಹಂಗಾಮಿ ಕುಲಪತಿ ಬದಲಾವಣೆಗೆ ಹಿಮಾಂಶು ಒತ್ತಾಯ

October 18, 2019

ಮೈಸೂರು, ಅ.17- ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯನ್ನು ಹಂಗಾಮಿ ಕುಲಪತಿ ನಾಗೇಶ್ ಬೆಟ್ಟಕೋಟೆ ಯವರ ಏಕಚಕ್ರಾಧಿಪತ್ಯದ ಸಂಕೋಲೆಯಿಂದ ಮುಕ್ತಿಗೊಳಿಸಬೇಕೆಂದು ಸಂಗೀತ ಸಂಘಟಕ ಸಿ.ಆರ್.ಹಿಮಾಂಶು ಒತ್ತಾಯಿಸಿದ್ದಾರೆ. ವಿವಿಯಲ್ಲಿ ಹಂಗಾಮಿ ಕುಲಪತಿ, ಕುಲಸಚಿವ, ಹಣಕಾಸು ಅಧಿಕಾರಿ ಎಲ್ಲವೂ ಒಬ್ಬರೇ ಆಗಿದ್ದು, ನೀತಿ ನಿಯಮಗಳನ್ನು ಗಾಳಿಗೆ ತೂರಿ ಆಡಳಿತ ನಡೆಸುತ್ತಿದ್ದಾರೆ. ವಿವಿಯ ಆರ್ಥಿಕ ಸ್ಥಿತಿ ಹದಗೆಡುತ್ತಿದ್ದು, ಅನವಶ್ಯಕ ಸಭೆ-ಸಮಾರಂಭಗಳನ್ನು ನಡೆಸಿ ದುಂದುವೆಚ್ಚ ಮಾಡುತ್ತಿದ್ದಾರೆ. ಶೈಕ್ಷಣಿಕ ಕೋರ್ಸ್‍ಗಳಿಗೆ ಪ್ರಾಧಾನ್ಯತೆ ನೀಡದೆ, ಸರ್ಟಿಫಿಕೇಟ್ ಕೋರ್ಸ್‍ಗಳಿಗೆ ಅನವಶ್ಯಕ ಶುಲ್ಕ ಹೆಚ್ಚಿಸಿ ನಾಗರಿಕರು ಹಾಗೂ ಸಂಗೀತ ಆಸಕ್ತರಿಗೆ ನಿರಾಸೆ ಉಂಟು ಮಾಡಿದ್ದಾರೆ ಎಂದು ದೂರಿದ್ದಾರೆ.

ವಿದ್ಯಾರ್ಥಿಗಳ ಪ್ರವೇಶಾತಿಗೆ ಗಮನ ನೀಡದೆ ವಿವಿಯನ್ನು ವಿನಾಶದ ಅಂಚಿಗೆ ದೂಡುತ್ತಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಅಧಿಕಾರಿಗಳನ್ನು ನೇಮಕ ಮಾಡಿ, ಅರ್ಹ ಕುಲಪತಿಯನ್ನು ನೇಮಕ ಮಾಡಬೇಕು. ಹಂಗಾಮಿ ಕುಲಪತಿ ನಾಗೇಶ್ ಬೆಟ್ಟಕೋಟೆಯವರ ಏಕಚಕ್ರಾಧಿಪತ್ಯ ಕೊನೆಗಾಣಿಸಬೇಕು ಎಂದು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.

Translate »