ಇತಿಹಾಸದ ಬಗ್ಗೆ ತಿಳಿಸಲು ಇತಿಹಾಸಕಾರರು ಮುಂದೆ ಬರುತ್ತಿಲ್ಲ
ಮೈಸೂರು

ಇತಿಹಾಸದ ಬಗ್ಗೆ ತಿಳಿಸಲು ಇತಿಹಾಸಕಾರರು ಮುಂದೆ ಬರುತ್ತಿಲ್ಲ

March 25, 2019

ಮೈಸೂರು: ಇತಿಹಾಸದ ಬಗ್ಗೆ ಆಧಾರರಹಿತವಾಗಿ ಯಾರು ಏನು ಬೇಕಾದರೂ ಮಾತನಾಡುವ ಸನ್ನಿವೇಶ ನಿರ್ಮಾಣವಾಗಿದ್ದು, ಈ ಸಂದರ್ಭದಲ್ಲಿ ನೈಜ ಇತಿಹಾಸದ ಬಗ್ಗೆ ಜನತೆಗೆ ತಿಳಿಸಲು ಇತಿಹಾಸಕಾರರೂ ಮುಂದೆ ಬರುತ್ತಿಲ್ಲ ಎಂದು ಮೈಸೂರು ವಿವಿ ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎಸ್.ರಂಗರಾಜು ವಿಷಾದಿಸಿದರು.

ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ (ಕಸಾಪ), ಮಹಿಮಾ ಪ್ರಕಾಶನದ ವತಿಯಿಂದ ಭಾನುವಾರ ಹಮ್ಮಿಕೊಂ ಡಿದ್ದ ಬಿ.ಶಾಮಸುಂದರ ಅವರ `ಅಲ್ಲಾ ಉದ್ದೀನ್ ಖಿಲ್ಜಿ’ ಮತ್ತು `ಕುವರಲಕ್ಷ್ಮ’ ಎಂಬ ಎರಡು ಐತಿಹಾಸಿಕ ನಾಟಕಗಳ ಕೃತಿ ಬಿಡುಗಡೆ ಸಮಾರಂಭದಲ್ಲಿ ಕೃತಿ ಕುರಿತು ಅವರು ಮಾತನಾಡಿದರು.
ಅಲ್ಲಾ ಉದ್ದೀನ್ ಖಿಲ್ಜಿ ಮತ್ತು ಕುವರಲಕ್ಷ್ಮ ಈ ಇಬ್ಬರ ವ್ಯಕ್ತಿತ್ವ ಭಿನ್ನವಾಗಿದ್ದು, ದೆಹಲಿ ಸುಲ್ತಾನರ ಅಲ್ಲಾ ಉದ್ದೀನ್ ಖಿಲ್ಜಿ ಮಹಾ ಕ್ರೂರಿಯಾದರೆ, ಹೊಯ್ಸ ಳರ ಕಾಲದ ಕುವರಲಕ್ಷ್ಮ ಮಹಾ ತ್ಯಾಗಮಯಿ. ಈ ಎರಡು ವ್ಯಕ್ತಿ ಚಿತ್ರಗಳನ್ನು ನಾಟಕ ರೂಪದಲ್ಲಿ ಬಿ. ಶಾಮಸುಂದರ ಅವರು ಅದ್ಭುತವಾಗಿ ಕಟ್ಟಿಕೊಟ್ಟಿ ದ್ದಾರೆ. ಅವರು ಎಲ್ಲಿಯೂ ಉತ್ಪ್ರೇಕ್ಷೆಗೆ ಒಳಗಾಗದೇ ಎಚ್ಚರಿಕೆ ಮತ್ತು ಆಳವಾದ ಅಧ್ಯಯನದಿಂದ ಕೃತಿ ರಚನೆ ಮಾಡಿದ್ದಾರೆ ಎಂದು ತಿಳಿಸಿದರು.

ಪುಸ್ತಕ ಬಿಡುಗಡೆ ಮಾಡಿದ ತಿ.ನರಸೀಪುರದ ವಿಜಯ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ.ಲ.ನಾ.ಸ್ವಾಮಿ ಮಾತನಾಡಿ, ಅಲ್ಲಾ ಉದ್ದೀನ್ ಖಿಲ್ಜಿ ನಾಟಕದಲ್ಲಿ ಲೇಖಕರು ರಂಗಕ್ಕೆ ಅಳವಡಿಸಲು ಅಗತ್ಯ ರಂಗ ಸಜ್ಜಿಕೆಯನ್ನು ಸೂಚಿಸಿದ್ದಾರೆ. 20 ಅಧ್ಯಾಯಗಳಲ್ಲಿ ನಾಟಕ ರಚನೆ ಮಾಡಿದ್ದು, ಪ್ರತಿ ಪುಟದಲ್ಲೂ ಲೇಖಕರು ಇತಿಹಾಸವನ್ನು ಆಮೂಲಾಗ್ರ ಅಧ್ಯಯನ ಮಾಡಿದ್ದಾರೆ ಎಂಬುದು ಅರಿವಾಗು ತ್ತದೆ. ದೆಹಲಿ ಸುಲ್ತಾನರ ಆ ಕಾಲದಲ್ಲಿ ಸಾಮಾಜಿಕ, ಧಾರ್ಮಿಕ ಸ್ಥಿತಿಗಳ ಒಳ ಸುಳಿಗಳನ್ನು ಮಾಡಿ ಕೊಳ್ಳಲು ಈ ಕೃತಿ ಉಪಯುಕ್ತ. ದಾಖಲೆಗಳ ಆಧಾರ ದಲ್ಲಿ ಇತಿಹಾಸದ ಚೌಕಟ್ಟು ಮೀರದಂತೆ ಲೇಖಕರು ಅದ್ಭುತ ಬರವಣಿಗೆ ಮಾಡಿದ್ದಾರೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಕೃತಿ ಕರ್ತೃ ಬಿ.ಶಾಮ ಸುಂದರ ಮತ್ತಿತರರು ಹಾಜರಿದ್ದರು.

Translate »