3 ತಿಂಗಳು ಹೋಂ ಸ್ಟೇ, ರೆಸಾರ್ಟ್  ಬುಕ್ಕಿಂಗ್ ಸ್ಥಗಿತಕ್ಕೆ ಜಿಲ್ಲಾಡಳಿತ ಸೂಚನೆ
ಮೈಸೂರು

3 ತಿಂಗಳು ಹೋಂ ಸ್ಟೇ, ರೆಸಾರ್ಟ್ ಬುಕ್ಕಿಂಗ್ ಸ್ಥಗಿತಕ್ಕೆ ಜಿಲ್ಲಾಡಳಿತ ಸೂಚನೆ

June 3, 2019

ಮಡಿಕೇರಿ: ಪ್ರಕೃತಿ ವಿಕೋಪದ ಕರಿ ನೆರಳು ಈ ಬಾರಿ ಕೂಡ ಜಿಲ್ಲೆಯನ್ನು ಕಾಡುತ್ತಿದ್ದು, ಕಳೆದ ಬಾರಿ ಭೂ ಕುಸಿತ ಹಾಗೂ ನದಿ ಪ್ರವಾಹಕ್ಕೆ ತುತ್ತಾಗಿದ್ದ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ. ಈ ಗ್ರಾಮಗಳ ಪೈಕಿ ಮಕ್ಕಂದೂರು ಗ್ರಾಮ ಪಂಚಾಯಿತಿ ಅತೀ ಹೆಚ್ಚು ಹಾನಿಗೆ ಒಳಗಾದ ಗ್ರಾಮವಾಗಿದ್ದು, ಈ ಬಾರಿಯೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಾರಂಭಿಕ ಹಂತ ಎಂಬಂತೆ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ರುವ 21 ಹೋಂ ಸ್ಟೇ ಮತ್ತು ಒಂದು ರೆಸಾರ್ಟ್‍ಗೆ ಪ್ರವಾಸಿಗರ ಬುಕ್ಕಿಂಗ್ ಮಾಡದಂತೆ ಜಿಲ್ಲಾಡಳಿತದ ಸೂಚನೆಯ ಮೇರೆಗೆ ನೋಟಿಸ್ ನೀಡಲಾಗಿದ್ದು, ಅದರ ಪ್ರತಿ ಮೈಸೂರು ಮಿತ್ರನಿಗೆ ಲಭ್ಯವಾಗಿದೆ.

ಜೂನ್ 1ರಿಂದಲೇ ಈ ಆದೇಶ ಜಾರಿಯಾಗಿದ್ದು, ಆಗಸ್ಟ್ 30ರವರೆಗೆ ಇದು ಮುಂದುವರಿಯಲಿದೆ. ಮಳೆಗಾಲದ ಮಳೆಯ ತೀವ್ರತೆಯನ್ನು ಆಧರಿಸಿ ಈ ಆದೇಶವನ್ನು ಇತರ ಗ್ರಾಮಗಳಿಗೆ ವಿಸ್ತರಿಸುವ ಸಾಧ್ಯತೆಯೂ ಇದೆ. ಹೀಗಾದಲ್ಲಿ ಮತ್ತೆ ಜಿಲ್ಲೆಯ ಆರ್ಥಿಕ ಪರಿಸ್ಥಿತಿ, ರಿಯಲ್ ಎಸ್ಟೇಟ್, ವ್ಯಾಪಾರ ವಹಿವಾಟು, ಕಾರ್ಮಿಕರು, ವರ್ತಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ.

ಅಪಾಯಕಾರಿ ಸ್ಥಳಗಳು: ಮಕ್ಕಂದೂರು ವ್ಯಾಪ್ತಿಯ ಹಟ್ಟಿಹೊಳೆ, ತಂತಿಪಾಲ, ಮುಕ್ಕೋಡ್ಲು, ಹೊದಕಾನ, ಮೇಘತ್ತಾಳು, ಹೆಮ್ಮೆತ್ತಾಳು ಪ್ರದೇಶಗಳು ಸಂತ್ರಸ್ತ ಪ್ರದೇಶ ಗಳಾಗಿದ್ದು, ಭೂ ಕುಸಿತ ನದಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದವು. ಮಾತ್ರವಲ್ಲದೇ ಇಂದಿಗೂ ಈ ಗ್ರಾಮಗಳಲ್ಲಿ ಭೂಮಿಯಲ್ಲಿ ಬಿರುಕುಗಳಿದ್ದು, ಭೂವಿಜ್ಞಾನಿಗಳ ಪ್ರಕಾರ ಮಣ್ಣಿಗೆ ನೀರನ್ನು ಹಿಡಿದಿಟ್ಟುಕೊಳ್ಳಲಾಗದೇ ಭೂ ಕುಸಿತವಾಗುವ ಸಾಧ್ಯತೆಯೂ ಇದ್ದು, ಈ ಗ್ರಾಮಗಳು ಇಂದಿಗೂ ಅಪಾಯದಲ್ಲಿವೆ. ಕಳೆದ ಬಾರಿ ಪ್ರಕೃತಿ ವಿಕೋಪವಾದ ಸಂದರ್ಭ ಮಡಿಕೇರಿ ಮಕ್ಕಂದೂರು ಮುಖ್ಯ ರಸ್ತೆ ಹೊರತುಪಡಿಸಿದರೆ, ದೇವಸ್ತೂರು, ಹಟ್ಟಿಹೊಳೆ, ಮಕ್ಕಂದೂರು ತಂತಿಪಾಲ ರಸ್ತೆಗಳು ಸಂಪೂರ್ಣ ಬಂದ್ ಆಗಿ ಗ್ರಾಮಸ್ಥರಿಗೆ ತೀವ್ರ ತೊಂದರೆ ಯಾಗಿತ್ತು. ಈ ಹಿನ್ನಲೆಯಲ್ಲಿ ಈ ಬಾರಿ ಕೂಡ ಪ್ರಕೃತಿ ವಿಕೋಪ ಘಟಿಸಿದರೆ ಈ ವ್ಯಾಪ್ತಿಯಲ್ಲಿ ರುವ ಹೋಂ ಸ್ಟೇ ಮತ್ತು ರೆಸಾರ್ಟ್‍ಗಳಲ್ಲಿ ಪ್ರವಾಸಿಗರು ಸಿಕ್ಕಿ ಹಾಕಿಕೊಳ್ಳಬಾರದೆಂಬ ಉದ್ದೇಶದಿಂದ ಮುಂಜಾಗೃತಾ ನೋಟಿಸ್ ನೀಡಿದ್ದು, ಈ ಸೂಚನೆ ಉಲ್ಲಂಘಿಸಿದರೆ ಅವರೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಚೆಂಗಪ್ಪ ತಿಳಿಸಿದರು.

‘ಕಳೆದ ಮಳೆಗಾಲದಲ್ಲಿ ನಾವು ಕಾಟೇಜ್ ಹಿಂಬದಿ ಪ್ರದೇಶದಲ್ಲಿ ಭಾರಿ ಬಿರುಕು ಮೂಡಿದೆ. ವಿಜ್ಞಾನಿಗಳು ಕೂಡ ಬಂದು ಪರಿಶೀಲನೆ ನಡೆಸಿ ಭೂ ಕುಸಿತವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಮಕ್ಕಂದೂರು ಪಂಚಾಯಿತಿ ನೋಟೀಸ್ ನೀಡಿದೆ. ಅನಿವಾರ್ಯವಾಗಿ 3 ತಿಂಗಳ ಕಾಲ ಕಾಟೇಜ್‍ಅನ್ನು ಖಾಲಿ ಮಾಡುತ್ತೇವೆ. ಅದರೊಂದಿಗೆ ನೌಕರರಿಗೂ ಸಂಬಳ ಸಹಿತ ರಜೆ ನೀಡುವ ಅನಿರ್ವಾತೆಯೂ ಇದೆ ಎಂದು ಹೋಂ ಸ್ಟೇ ವ್ಯವಸ್ಥಾಪಕಿ ಲೀನಾ ಪೂವಯ್ಯ ‘ಮೈಸೂರು ಮಿತ್ರ’ನೊಂದಿಗೆ ಹೇಳಿದರು. ಹೋಂ ಸ್ಟೇ, ರೆಸಾರ್ಟ್‍ಗಳನ್ನು ಪ್ರಾರಂಭಿಸಲು ಲಕ್ಷಾಂತರ ರೂ.ಗಳನ್ನು ಬಂಡವಾಳ ಹಾಕಲಾಗಿದೆ. 3 ತಿಂಗಳ ಕಾಲ ಪ್ರವಾಸಿಗರಿಗೆ ನಿರ್ಬಂಧ ಹೇರಿದರೆ ಅದನ್ನೇ ನಂಬಿಕೊಂಡು ಬದುಕುವವರು ಬೀದಿ ಪಾಲಾಗುತ್ತಾರೆ. ಸರ್ಕಾರಕ್ಕೆ ಎಲ್ಲಾ ರೀತಿಯ ತೆರಿಗೆಯನ್ನು ಕೂಡ ಕಟ್ಟುತ್ತಿದ್ದು, ಮಳೆಯ ನೆಪದಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರುವುದು ಸರಿಯಲ್ಲ ಎಂದು ಮಕ್ಕಂದೂರಿನ ಹೋಂ ಸ್ಟೇ ಮಾಲೀಕ ದೇವಮಾನಿ ಉತ್ತಪ್ಪ ಹೇಳಿದರು. ಮಳೆ ಜೋರಿದ್ದಾಗ ಮಾತ್ರವೇ ಶಾಲೆಗೆ ರಜೆ ನೀಡುತ್ತಾರೆ. ಅದರಂತೆಯೇ ತೀವ್ರ ಮಳೆ-ಗಾಳಿ ಇದ್ದ ಸಂದರ್ಭ ಮಾತ್ರವೇ ಪ್ರವಾಸಿಗರು ಜಿಲ್ಲೆ ಬರಲು ನಿರ್ಬಂಧ ಹೇರಲಿ. ಇಲ್ಲವಾದಲ್ಲಿ ಹೋಂ ಸ್ಟೇ ಮಾಲೀಕರು ಬ್ಯಾಂಕ್ ಸಾಲ, ಕೈಸಾಲ ಕಟ್ಟಲಾಗದೇ ಆತ್ಮಹತೈ ಮಾಡಿಕೊಳ್ಳುವ ಪರಿಸ್ಥಿತಿಯೂ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಜಿಲ್ಲಾಡಳಿತದ ಆದೇಶಕ್ಕೆ ವಿರೋಧ: 3 ತಿಂಗಳು ಕಾಲ 21 ಹೋಂ ಸ್ಟೇ ಮತ್ತು ಒಂದು ರೆಸಾರ್ಟ್‍ಗೆ ಪ್ರವಾಸಿಗರ ಬುಕ್ಕಿಂಗ್ ಮಾಡದಂತೆ ಜಿಲ್ಲಾಡಳಿತದ ಆದೇಶಕ್ಕೆ ಮಕ್ಕಂದೂರು ವ್ಯಾಪ್ತಿಯ ಕೆಲವು ಹೋಂ ಸ್ಟೇ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತದ ಇಂತಹ ನೋಟೀಸ್‍ಗಳಿಂದ ಪ್ರವಾಸಿಗರು ಭಯಭೀತಿಗೆ ಒಳಗಾಗುವ ಮೂಲಕ ಜಿಲ್ಲೆಗೆ ಬರಲು ಹಿಂಜರಿಯುವ ಸಾಧ್ಯತೆ ಇದೆ. ಒಮ್ಮೆ ಪ್ರವಾಸಿಗರನ್ನು ನಿರ್ಬಂಧಿಸಿದರೆ ಮತ್ತೆ ಪ್ರವಾಸೋದ್ಯಮ ಚೇತರಿಸಿಕೊಳ್ಳಲು ಹಲವು ಸಮಯ ಹಿಡಿಯುತ್ತದೆ. ಇದರಿಂದ ಜಿಲ್ಲೆಯ ಆರ್ಥಿಕ ಚಟುವಟಿಕೆಯ ಮೇಲೆ ಹೊಡೆತ ಬೀಳುತ್ತದೆ. 3 ತಿಂಗಳ ಕಾಲ ಪ್ರವಾಸಿರಿಗೆ ನಿರ್ಬಂಧÀ ವಿಧಿಸಿದರೆ ಅದನ್ನು ನಂಬಿಕೊಂಡು ಬದುಕು ಸಾಗಿಸುವವರಿಗೆ ತೀವ್ರ ತೊಂದರೆಯಾಗುತ್ತದೆ ಎಂದು ಮಕ್ಕಂದೂರು ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷ ಶಾಂತೆಯಂಡ ವಿಶಾಲ್ ಅಚ್ಚಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಈ ಕುರಿತು ಪುನರ್ ಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Translate »