ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಹಾಸ್ಟೆಲ್ ವಿದ್ಯಾರ್ಥಿನಿಯರ ಪ್ರತಿಭಟನೆ
ಮೈಸೂರು

ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಹಾಸ್ಟೆಲ್ ವಿದ್ಯಾರ್ಥಿನಿಯರ ಪ್ರತಿಭಟನೆ

September 19, 2019

ಮೈಸೂರು, ಸೆ.18 (ಎಸ್‍ಪಿಎನ್)-ಸಮಸ್ಯೆಗೆ ಸ್ಪಂದಿಸದ ಹಾಸ್ಟೆಲ್ ವಾರ್ಡನ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಅಮಾನತು ಗೊಳಿಸುವಂತೆ ಒತ್ತಾಯಿಸಿ ವಿದ್ಯಾರ್ಥಿನಿಯರು ಬುಧವಾರ ಆರ್.ಎಸ್. ನಾಯ್ಡುನಗರದ ಹಾಸ್ಟೆಲ್ ಆವರಣದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.

ಮೈಸೂರು ಆರ್.ಎಸ್.ನಾಯ್ಡುನಗರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ (ಪದವಿ ಮತ್ತು ಪಿಯುಸಿ) ವಿದ್ಯಾರ್ಥಿನಿಯರ ಹಾಸ್ಟೆಲ್ ಹಾಗೂ ಕರ್ತವ್ಯ ನಿರತ ಮಹಿಳಾ ಹಾಸ್ಟೆಲ್‍ನ ಮಹಿಳೆಯರು ಜಿಲ್ಲಾಡಳಿತ ಮತ್ತು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಿನನಿತ್ಯ ಬಳಸುವ ಅಕ್ಕಿ, ಬೇಳೆಯಲ್ಲಿ ಹುಳು ಇದ್ದರೂ ಅಡುಗೆಯವರು ಸ್ವಚ್ಛ ಮಾಡದೇ ಅಡುಗೆ ಮಾಡುತ್ತಾರೆ ಎಂದು ಆರೋಪಿಸಿದರು.

ಕಳೆದೆರಡು ದಿನಗಳಿಂದ ಮಟನ್, ಚಿಕನ್ ನೀಡಿಲ್ಲ. ಕೊಳೆತ ತರಕಾರಿಯಲ್ಲಿ ಸಾಂಬಾರು ತಯಾರು ಮಾಡುತ್ತಾರೆ. ಇದನ್ನು ಪ್ರಶ್ನಿಸಿದರೆ, ವಾರ್ಡನ್ ಉಷಾ ಅವರು, ಇಲ್ಲದ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಾರೆ. ಈ ಸಮಸ್ಯೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲು ಪ್ರಯತ್ನಿಸಿದರೆ, ಯಾರೂ ಕೈಗೆ ಸಿಗುತ್ತಿಲ್ಲ. ಇದು ನಿತ್ಯ ಸಮಸ್ಯೆಯಾದರೆ, ಇನ್ನು ನೀರು ಸರಬರಾಜು ವಾರಕ್ಕೆ 2 ದಿನ ಬರುತ್ತದೆ. ಅದರಲ್ಲಿ ವಿದ್ಯುತ್ ನಿಲುಗಡೆ ಸಮಸ್ಯೆ, ಬೆಳಿಗ್ಗೆ ವೇಳೆ ವಿದ್ಯುತ್ ಇಲ್ಲದಿದ್ದರೂ ಇರಬಹುದು. ಆದರೆ, ರಾತ್ರಿ ವೇಳೆ ಈಗಾದರೆ ವಿದ್ಯಾರ್ಥಿನಿ ಯರಿಗೆ ಸಾಕಷ್ಟು ಸಮಸ್ಯೆ ಆಗಲಿದೆ ಎಂದು ಸಮಸ್ಯೆಯ ಸರಮಾಲೆಯನ್ನು ವಿವರಿಸಿದರು.

ಈ ಹಾಸ್ಟೆಲ್ ಆವರಣದಲ್ಲಿ ಸ್ನಾತಕೋತ್ತರ ಹಾಗೂ ಕರ್ತವ್ಯ ನಿರತ ಮಹಿಳೆಯರ ಹಾಸ್ಟೆಲ್ ಇದೆ. ಇಲ್ಲಿನ ರೂಂಗಳಿಗೆ ಕರ್ತವ್ಯ ನಿರತ ಮಹಿಳೆಯರು ಬಾಡಿಗೆ ನೀಡಿ ವಾಸವಿ ದ್ದಾರೆ. ಅವರಿಗೂ ನೀರಿನ ಸಮಸ್ಯೆ, ಶೌಚಾಲಯ ಸಮಸ್ಯೆ ಇದೆ. ಅಲ್ಲದೆ, ಋತುವಿನ ವೇಳೆ ಬಳಸುವ ಪ್ಯಾಡ್ ವಿಲೇವಾರಿ ಮಾಡಲು ಸರಿಯಾದ ವ್ಯವಸ್ಥೆ ಇಲ್ಲ. ಒಟ್ಟಿನಲ್ಲಿ ನಮ್ಮ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಒತ್ತಾಯಿಸಿ, ಜಿಲ್ಲಾಡಳಿತ ವಿರುದ್ದ ಧಿಕ್ಕಾರ ಕೂಗುತ್ತ, ಪ್ರತಿಭಟಿಸಿದರು. ವಿಷಯ ತಿಳಿದ ಎನ್.ಆರ್.ಠಾಣೆ ಪೊಲೀಸರು, ಸ್ಥಳಕ್ಕೆ ಧಾವಿಸಿ, ಪ್ರತಿಭಟನಾನಿರತ ವಿದ್ಯಾರ್ಥಿನಿಯರನ್ನು ಮನವೋಲಿಸಲು ಪ್ರಯತ್ನಿಸಿದರು. ಆದರೂ ಪಟ್ಟು ಬಿಡದ ವಿದ್ಯಾರ್ಥಿ ನಿಯರು ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿನ ಸಮಸ್ಯೆ ಬಗೆಹರಿಸುವವರೆಗೂ ಪ್ರತಿಭಟನೆ ನಡೆಸುತ್ತೇವೆ ಎಂದರು. ಆದರೆ, ಪೊಲೀಸರು, ವಿದ್ಯಾರ್ಥಿನಿಯರ ಮನವೊಲಿಸಿ, ಹಿರಿಯ ಅಧಿಕಾರಿಗಳ ಗಮನಕ್ಕೆ ತರುವ ಭರವಸೆ ನೀಡಿ, ವಿದ್ಯಾರ್ಥಿನಿಯರ ಮನವೊಲಿಸುವಲ್ಲಿ ಯಶಸ್ವಿಯಾದರು.

Translate »