ಅಂಬಾರಿ ಆನೆ ಅರ್ಜುನ ತೂಕದಲ್ಲೂ ನಾಯಕ
ಮೈಸೂರು

ಅಂಬಾರಿ ಆನೆ ಅರ್ಜುನ ತೂಕದಲ್ಲೂ ನಾಯಕ

September 7, 2018

ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ವಿವಿಧ ಆನೆ ಶಿಬಿರಗಳಿಂದ ಬಂದು ಅರಮನೆ ಅಂಗಳದಲ್ಲಿ ಬೀಡುಬಿಟ್ಟಿರುವ ಅರ್ಜುನ ನೇತೃತ್ವದ ಎಲ್ಲಾ ಆರು ಆನೆಗಳ ತೂಕ ಮಾಡಿಸಲಾಯಿತು.

ಪ್ರತಿ ವರ್ಷದಂತೆ ಮೈಸೂರಿನ ಧನ್ವಂತರಿ ರಸ್ತೆಯ ಸಾಯಿರಾಮ್ ಅಂಡ್ ಕೊ ಲಾರಿ ವೇಯಿಂಗ್ ಸರ್ವಿಸ್‍ನಲ್ಲಿ ಇಂದು ಬೆಳಿಗ್ಗೆ ಅರಮನೆಯಿಂದ ಆರು ಆನೆ ಕರೆತಂದು ತೂಕ ಮಾಡಿಸಲಾಯಿತು.

ಯಾರು ಎಷ್ಟು ತೂಗುತ್ತಾರೆ! : ದಸರಾ ಗಜಪಡೆಯ ನಾಯಕ ಅಂಬಾರಿ ಆನೆ ಅರ್ಜುನ 5,650 ಕೆಜಿ ತೂಕವಿದ್ದಾನೆ. ಕಳೆದ ವರ್ಷ ಬಂದಾಗ ಅವನ ತೂಕ 5,250 ಕೆಜಿ ಇತ್ತು. ಜಂಬೂ ಸವಾರಿ ಯಲ್ಲಿ ಚಿನ್ನದ ಅಂಬಾರಿ ಹೊತ್ತು ಕಾಡಿಗೆ ವಾಪಸ್ಸಾಗುವಾಗ 5910 ಕೆಜಿಗೆ ತೂಕ ಹೆಚ್ಚಿಸಿ ಕೊಂಡಿದ್ದ. ಕುಮ್ಕಿ ಆನೆ ಚೈತ್ರ 2970 ಕೆಜಿ, ವರಲಕ್ಷ್ಮೀ 3120 ಕೆಜಿ ಇವೆ. ಕಳೆದ ಬಾರಿ ವರಲಕ್ಷ್ಮೀ 2830 ಕೆಜಿ ತೂಕವಿತ್ತು. ಕಾಡಿಗೆ ಮರಳುವಾಗ 3030 ಕೆಜಿಗೆ ಹೆಚ್ಚಳವಾಗಿತ್ತು. ಇದೇ ಮೊದಲ ಬಾರಿ ಆಗಮಿಸಿರುವ ಧನಂಜಯ 4045 ಕೆಜಿ ತೂಕವಿದ್ದಾನೆ. ವಿಕ್ರಮ 3985, ಗೋಪಿ 4435 ಕೆಜಿ ತೂಗಿದ್ದಾರೆ.

ದಸರಾ ಮಹೋತ್ಸವದಲ್ಲಿ 12 ಆನೆಗಳು ಪಾಲ್ಗೊಳ್ಳಲಿದ್ದು, ಮೊದಲ ತಂಡದಲ್ಲಿ ಆಗಮಿಸುವ ಆನೆಗಳಿಗೆ ಮಾತ್ರ ತೂಕ ಮಾಡಿಸಲಾಗುತ್ತದೆ. ಈ ಆನೆಗಳಿಗೆ ಹೆಚ್ಚಿನ ಜವಾಬ್ದಾರಿ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಪಾಲನೆ ಮಾಡ ಲಾಗುತ್ತದೆ. ರಾಮನಗರದಲ್ಲಿ ಕಾಡಾನೆ ಕಾರ್ಯಾಚರಣೆಗಿಳಿದಿದ್ದ ಬಲರಾಮ, ಅಭಿಮನ್ಯು ಹಾಗೂ ದ್ರೋಣ ಮೊದಲ ತಂಡದಲ್ಲಿ ಬಂದಿಲ್ಲ. ಹಾಗಾಗಿ ಎರಡನೇ ತಂಡದಲ್ಲಿ ಬರಬೇಕಾಗಿದ್ದ ಧನಂಜಯ, ವಿಕ್ರಮ ಹಾಗೂ ಗೋಪಿ ಮೊದಲ ತಂಡದಲ್ಲೇ ಆಗಮಿಸಿವೆ. ಚೈತ್ರ ಮರಿಗೆ ಜನ್ಮ ನೀಡಿದ್ದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷದಿಂದ ದಸರಾ ಮಹೋತ್ಸವದಿಂದ ದೂರವುಳಿದಿತ್ತು.

ದಸರಾ ಸಂಭ್ರಮ: ಸೆ.2ರಂದು ನಾಗರ ಹೊಳೆಯ ವೀರನಹೊಸಳ್ಳಿಯಿಂದ ಮೈಸೂ ರಿನ ಅಶೋಕಪುರಂನ ಅರಣ್ಯ ಭವನಕ್ಕೆ ಬಂದು ಬೀಡುಬಿಟ್ಟಿದ್ದ ಗಜಪಡೆಯನ್ನು ಬುಧವಾರ(ಸೆ.5) ಸಂಜೆಯಷ್ಟೇ ಅರಮನೆ ಆವರಣಕ್ಕೆ ಕರೆ ತರಲಾಗಿದೆ. ಆದರೆ ಇಂದು ಬಲರಾಮ ದ್ವಾರದ ಮೂಲಕ ಆರು ಆನೆ ಗಳನ್ನು ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಧನ್ವಂತರಿ ರಸ್ತೆ ಮೂಲಕ ತೂಕ ಮಾಡಿಸಲು ಸಾಯಿರಾಮ್ ಅಂಡ್ ಕೋ ವೇಯಿಂಗ್ ಸೆಂಟರ್‍ಗೆ ಕರೆತರಲಾಯಿತು. ರಸ್ತೆಯಲ್ಲಿ ಈ ಆರು ಆನೆಗಳು ಬರುವುದನ್ನು ಕಂಡ ಜನರು ಮೊಬೈಲ್‍ಗಳಲ್ಲಿ ಫೋಟೊ ಕ್ಲಿಕ್ಕಿಸಿದರು. ಸಯ್ಯಾಜಿರಾವ್ ರಸ್ತೆ ಹಾಗೂ ಧನ್ವಂತರಿ ರಸ್ತೆಯ ಎರಡು ಬದಿಯಲ್ಲಿ ಹೂವು, ಹಣ್ಣಿನ ವ್ಯಾಪಾರಿಗಳು ಆನೆಗಳಿಗೆ ಹೂವು, ಹಣ್ಣು ನೀಡಿ, ಕೈ ಮುಗಿದು ಸಂಭ್ರಮಿಸಿದರು.

Translate »