ಹುಬ್ಬಳ್ಳಿ ಟೈಗರ್ಸ್ ಕೆಪಿಎಲ್ ಚಾಂಪಿಯನ್
ಮೈಸೂರು

ಹುಬ್ಬಳ್ಳಿ ಟೈಗರ್ಸ್ ಕೆಪಿಎಲ್ ಚಾಂಪಿಯನ್

September 1, 2019

ಮೈಸೂರು,ಆ.31(ವೈ.ಡಿ.ಶೇಖರ್)- ಬಳ್ಳಾರಿ ಟಸ್ಕರ್ಸ್ ವಿರುದ್ಧ ಹುಬ್ಬಳ್ಳಿ ಟೈಗರ್ಸ್ 8 ರನ್‍ಗಳ ಜಯ ಸಾಧಿಸುವ ಮೂಲಕ 8ನೇ ಆವೃತ್ತಿಯ ಕೆಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅಲ್ಲದೇ ಇದೇ ಪ್ರಥಮ ಬಾರಿಗೆ ಟ್ರೋಫಿ ಗೆದ್ದ ಸಾಧನೆ ಮಾಡಿತು.

ಇಲ್ಲಿನ ಮಾನಸ ಗಂಗೋತ್ರಿಯ ಗ್ಲೈಡ್ಸ್ ಮೈದಾನದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ನಿಗದಿತ 20 ಓವರ್‍ಗಳಲ್ಲಿ 6ವಿಕೆಟ್ ಕಳೆದುಕೊಂಡು 152ರನ್‍ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತ್ತು.

ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಮಹಮ್ಮದ್ ತಾಹ 9ರನ್ ಗಳಿಸಿ ಔಟಾ ಗುವ ಮೂಲಕ ವೈಫಲ್ಯ ಅನುಭವಿ ಸಿದರು. ನಂತರ ಬಂದ ನಾಯಕ ಆರ್.ವಿನಯ್‍ಕುಮಾರ್ ಕೂಡ ಹೆಚ್ಚು ಹೊತ್ತು ಕ್ರೀಸ್‍ನಲ್ಲಿ ನಿಲ್ಲದೇ 4ರನ್‍ಗಳಿಸಿ ಪೆವಿಲಿಯನ್ ಸೇರಿಕೊಂಡರು. ಆಗ ತಂಡದ ಮೊತ್ತ 2 ವಿಕೆಟ್ ನಷ್ಟಕ್ಕೆ 21ರನ್ ಗಳಾಗಿತ್ತು. ಈ ವೇಳೆ ಸೋಮಣ್ಣ ಅವರಿಗೆ ಜೊತೆಯಾದ ಸಿಸೋಡಿಯಾ ತಂಡಕ್ಕೆ ಅರ್ಧ ಶತಕ ಜೊತೆಯಾಟದ ಕಾಣಿಕೆ ನೀಡಿದರು. ಆದರೆ, 29ರನ್‍ಗಳಿಸಿ ಉತ್ತಮವಾಗಿ ಆಟವಾಡುತ್ತಿದ್ದ ಸಿಸೋಡಿಯಾ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಬಳಿಕ ಬಂದ ಕೆ.ಬಿ. ಪವನ್ 4ರನ್‍ಗಳಿಸಿ ಬಂದಷ್ಟೇ ವೇಗ ವಾಗಿ ಪೆವಿಲಿಯನ್ ಸೇರಿಕೊಂಡರು. ಈ ವೇಳೆ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಸೋಮಣ್ಣ 2 ಸಿಕ್ಸರ್ ಒಳಗೊಂಡ 47 ರನ್‍ಗಳಿಸಿ ಔಟಾಗುವ ಮೂಲಕ ಅರ್ಧ ಶತಕದಿಂದ ವಂಚಿತರಾದರು. ಅಂತಿಮ ಓವರ್‍ಗಳಲ್ಲಿ ಚುರುಕಿನ ಬ್ಯಾಟಿಂಗ್ ನಡೆಸಿದ ಪಿ.ದುಬೆ 26, ಶ್ರೇಯಸ್ ಗೋಪಾಲ್ 14ರನ್‍ಗಳಿಸಿದರು.

ಬಳ್ಳಾರಿ ಟಸ್ಕರ್ಸ್ ಪರ ಕೆ.ಪಿ.ಬೊಪ್ಪಣ್ಣ 2, ಪ್ರಸಿದ್ಧ ಕೃಷ್ಣ, ಗೌತಮ್, ಅಬ್ರರ್ ಖಾಜಿಂ ಹಾಗೂ ಕಾರ್ತಿಕ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.

ಹುಬ್ಬಳ್ಳಿ ನೀಡಿದ್ದ 153ರನ್‍ಗಳ ಗುರಿ ಬೆನ್ನತ್ತಿದ್ದ ಬಳ್ಳಾರಿ ಟಸ್ಕರ್ಸ್ ಆರಂಭ ಉತ್ತಮವಾಗಿರಲಿಲ್ಲ. ತಂಡದ ಮೊತ್ತ ಕೇವಲ 25ರನ್ ಆಗುವಷ್ಟರಲ್ಲಿಯೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲು ಕಿತ್ತು. ಆದರೆ, ಈ ವೇಳೆ ಜೊತೆಯಾದ ಸಿಎಂ ಗೌತಮ್ ಹಾಗೂ ಪಡಿಕಲ್ 75ರನ್‍ಗಳ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರಾದರೂ 29ರನ್‍ಗಳಿಸಿ ಗೌತಮ್ ವಿಕೆಟ್ ಒಪ್ಪಿಸಿದ್ದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ತಂಡದ ಗೆಲುವಿಗೆ ಏಕಾಂಗಿಯಾಗಿ ಹೋರಾಡಿದ ಪಡಿಕಲ್ 68ರನ್ ಗಳಿಸಿದ್ದರು. ಅವರ ಈ ಆಟದಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್‍ಗಳಿದ್ದವು. ಅಂತಿಮವಾಗಿ ಬಳ್ಳಾರಿ ಟಸ್ಕರ್ಸ್ 20ಓವರ್‍ಗಳಲ್ಲಿ 144ರನ್‍ಗಳಿಗೆ ಆಲೌಟಾಗುವ ಮೂಲಕ 8ರನ್‍ಗಳ ಸೋಲು ಅನುಭವಿಸಿ ರನ್ನರ್ ಆಪ್ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿತ್ತು.

ಹುಬ್ಬಳ್ಳಿ ಪರ ಅಭಿಲಾಷ್ ಶೆಟ್ಟಿ ಹಾಗೂ ಸೋಮಣ್ಣ ತಲಾ 3, ಎಸ್.ಗೋಪಾಲ್, ಮಿತ್ರಕಾಂತ್ ಯಾದವ್ ಹಾಗೂ ಮಥಿ ಯಸ್ ತಲಾ ಒಂದೊಂದು ವಿಕೆಟ್ ಪಡೆದರು.

ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ನೀಡಿದ ಸೋಮಣ್ಣ ಪಂದ್ಯಶ್ರೇಷ್ಠ, ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕೃಷ್ಣಪ್ಪ ಗೌತಮ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Translate »