ನಮ್ಮದು ಅತಿಥಿ ದೇವೋಭವಃ ಸಂಸ್ಕೃತಿ
ಮೈಸೂರು

ನಮ್ಮದು ಅತಿಥಿ ದೇವೋಭವಃ ಸಂಸ್ಕೃತಿ

September 1, 2019

ಮೈಸೂರು,ಆ.31(ಎಂಟಿವೈ)- ರಾಜ್ಯ ದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕೆಲವರು ಕಾರಣರಾಗಿದ್ದಾರೆ. ಪಕ್ಷಕ್ಕೆ ಹೊಸದಾಗಿ ಬಂದಿರುವ ಅತಿಥಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಇದರಿಂದ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ನೋವು, ಬೇಸರ ಇಲ್ಲ. ದಸರಾ ಕಾರ್ಯಕ್ರಮ ಗಳಲ್ಲಿ ಇನ್ನು ಮುಂದೆ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ ಎಂದು ಶಾಸಕ ಎಸ್.ಎ. ರಾಮದಾಸ್ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭÀವನ ದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಥಿ ದೇವೋ ಭÀವಃ ಎನ್ನುವ ಸಂಸ್ಕøತಿ ನಮ್ಮದು. ಹೀಗಾಗಿ ಪಕ್ಷಕ್ಕೆ ಬರುವ ಅತಿಥಿಗಳಿಗೆ ಮೊದಲು ಉಣ ಬಡಿಸಲಿ, ನಂತರ ನಮ್ಮದು. ನನಗೆ ಮಂತ್ರಿಗಿರಿ ಸಿಗದೆ ಇರುವ ಬಗ್ಗೆ ಯಾವ ಅಸಮಾಧಾನ, ಅತೃಪ್ತಿ ಇಲ್ಲ. ಮುಂದಿನ ದಿನಗಳಲ್ಲಿ ನನ್ನ ಹಿರಿತನಕ್ಕೆ ಸೂಕ್ತ ಸ್ಥಾನಮಾನ ದೊರೆಯ ಲಿದೆ ಎಂಬ ವಿಶ್ವಾಸ ನನ್ನಲ್ಲಿದೆ. ಬಡತನ ಹಿನ್ನೆಲೆಯಿಂದ ಬಂದ ನಾನು 1994ರಲ್ಲಿ ಬಿಜೆಪಿ ನಗರ ಯುವ ಮೋರ್ಚಾ ಅಧ್ಯಕ್ಷ ನಾಗಿ ರಾಜಕೀಯ ಆರಂಭಿಸಿದೆ. ಆ ವೇಳೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೆ. ಮೋಟಾರ್ ಸೈಕಲ್‍ನಲ್ಲಿ ಓಡಾಡುತ್ತಿದ್ದ ನನ್ನ ಬಳಿ ದುಡ್ಡಿರಲಿಲ್ಲ. ಆದರೂ ಪಕ್ಷದ ಮುಖಂಡರು ನನಗೆ ಕೆ.ಆರ್.ಕ್ಷೇತ್ರದಿಂದ ಬಿ-ಫಾರಂ ನೀಡಿದರು. ಇದರಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಪಕ್ಷ ಬಿಟ್ಟು ಹೋದರು. ನನಗೆ ಟಿಕೆಟ್ ನೀಡಿ ಬೆಳೆಸಿದ ಪಕ್ಷದ ಋಣ ನನ್ನ ಮೇಲಿದೆ ಎಂದರು.

ನನ್ನ ನಡೆ-ನುಡಿಯನ್ನು ಇಡೀ ರಾಜ್ಯ ಗಮನಿಸುತ್ತಿದೆ. ಜಿಲ್ಲೆಯಲ್ಲಿ ಹಲವರು ಬಿಜೆಪಿಗೆ ಬಂದು ಅಧಿಕಾರ ಅನುಭವಿಸಿ ಹೋಗಿದ್ದಾರೆ. ಅಧಿಕಾರ ಇರಲಿ-ಬಿಡಲಿ ಬಿಜೆಪಿಯಲ್ಲಿ ಉಳಿದವನು ನಾನೊಬ್ಬನೇ. ಇದು ಪಕ್ಷದ ನಾಯಕರಿಗೂ ಗೊತ್ತಿದೆ. ಆದರೂ ತಂಡ ಕಟ್ಟುವಾಗ ಕ್ಯಾಪ್ಟನ್ ತನಗೆ ಬೇಕಾದ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈಗಾಗಲೇ ಒಂದು ತಂಡ ರಚನೆಯಾಗಿದೆ. ಇದರಿಂದ ನಾನು ವಿಚಲಿತನಾಗಿಲ್ಲ ಎಂದು ತಿಳಿಸಿದರು.

ದಸರಾಗೆ ಪೂರ್ಣ ಸಹಕಾರ
ತಾಯಿ ಚಾಮುಂಡೇಶ್ವರಿ ನಮ್ಮೆಲ್ಲರ ದೇವತೆ. ತಾಯಿಯ ಉತ್ಸವವಾದ ದಸರಾ ಮಹೋತ್ಸವದ ಆಚರಣೆ ವಿಜೃಂಭಣೆಯಿಂದ ನಡೆಯಬೇಕು. ಗಜಪಯಣ ಕಾರ್ಯಕ್ರಮಕ್ಕೆ ವೀರನಹೊಸಳ್ಳಿಗೆ ಹೋಗಿದ್ದೆ. ಆ.22ರಂದು ಬೆಳಿಗ್ಗೆ 11.30ರವರೆಗೆ ಗಜಪಡೆ ಪೂಜೆಗೆ ಮುಹೂರ್ತ ನಿಗದಿಯಾಗಿತ್ತು. ಮುಹೂರ್ತ ಮೀರಬಾರದು ಎಂಬ ಕಾರಣಕ್ಕೆ 11 ಗಂಟೆಗೆ ಸರ್ಕಾರದ ಪ್ರತಿನಿಧಿಯಾಗಿ ನಾನು ಒಬ್ಬನೇ ಆ ಸ್ಥಳದಲ್ಲಿದ್ದೆ. ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿ ಹೆಸರಲ್ಲಿ ಪೂಜೆ ಸಲ್ಲಿಸಿ, ಅರ್ಜುನನಿಗೆ ಫಲತಾಂಬೂಲ ನೀಡಿದ್ದೆ.

ಕಳೆದ ವಾರ ಸುಳ್ಯ ಬಳಿ ನಮ್ಮ ಕಾರು ಅಪಘಾತವಾಗಿ, ಆರೋಗ್ಯದಲ್ಲಿ ಏರು ಪೇರಾಯಿತು. ಇದರಿಂದ ಒಂದು ದಿನ ವೈದ್ಯರ ಸೂಚನೆ ಮೇರೆಗೆ ಸಂಪೂರ್ಣ ವಿಶ್ರಾಂತಿ ಪಡೆದಿದ್ದೆ. ಆದರೆ ಅದೇ ದಿನ ಉಸ್ತುವಾರಿ ಸಚಿವ ವಿ.ಸೋಮಣ್ಣ ದಸರಾ ಸಭೆ ಕರೆದಿದ್ದರು. ಆದರೆ ಅನಾರೋಗ್ಯದ ಕಾರಣ ನಾನು ಗೈರು ಹಾಜ ರಾಗಿದ್ದೆ. ಕಾಲಿಗೆ ಏಟಾಗಿರುವುದರಿಂದ ವೇಗವಾಗಿ ನಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಇಂದು ಬೆಳಿಗ್ಗೆ ಸಚಿವರೊಂದಿಗೆ ರಾಜಮಾರ್ಗದ ವೀಕ್ಷಣೆಗೆ ಹೋಗಲು ಸಾಧ್ಯವಾಗಿಲ್ಲ. ಆದರೆ ವೆಬ್‍ಸೈಟ್‍ನ್ನು ನಾನೇ ಉದ್ಘಾಟಿಸಿದ್ದೇನೆ. ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದೇನೆ. ಮುಂದಿನ ದಿನಗಳಲ್ಲಿ ದಸರಾ ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದಸರಾ ಉದ್ಘಾಟನೆಯೊಂದಿಗೆ ಜಂಬೂ ಸವಾರಿವರೆಗೆ ಮಾತ್ರವಲ್ಲ, ತೆಪೆÇ್ಪೀತ್ಸವದವರೆಗೂ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡುತ್ತೇನೆ. ಜಿಲ್ಲಾ ಮಂತ್ರಿ ಸೋಮಣ್ಣ ಅವರು ಹಿರಿಯರು, ಅನುಭವಿಗಳಿದ್ದಾರೆ. ಅವರ ಜತೆ ಕೈಜೋಡಿಸಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

Translate »