ಸಿದ್ದಾಪುರದಲ್ಲಿ ಭಾರಿ ಗಾಳಿ-ಮಳೆ ಮನೆಗಳಿಗೆ ಹಾನಿ, ಮಹಿಳೆಗೆ ಗಾಯ
ಕೊಡಗು

ಸಿದ್ದಾಪುರದಲ್ಲಿ ಭಾರಿ ಗಾಳಿ-ಮಳೆ ಮನೆಗಳಿಗೆ ಹಾನಿ, ಮಹಿಳೆಗೆ ಗಾಯ

April 25, 2019

ಸಿದ್ದಾಪುರ: ಸಿದ್ದಾಪುರ ವ್ಯಾಪ್ತೀಯಲ್ಲಿ ಸುರಿದ ಭಾರೀ ಗಾಳಿ, ಮಳೆಗೆ ಮೂರು ಮನೆಗಳು ಸಂಪೂರ್ಣ ಹಾನಿಯಾಗಿದ್ದು ಮಹಿಳೆಯೊಬ್ಬರು ಗಂಭೀರ ಗಾಯಗೊಂಡು ಹಲವರು ಪ್ರಾಣಾಪಾಯದಿಂದ ಪಾರಾದ ಘಟನೆ ಸಿದ್ದಾಪುರ ಮೈಸೂರು ರಸ್ತೆಯಲ್ಲಿ ನಡೆದಿದೆ.

ಮಂಗವಾರ ಸಂಜೆ ಮೋಡ ಕವಿದ ವಾತಾವರಣದೊಂದಿಗೆ ರಾತ್ರಿ ದಿಢೀರನೆ ಸುರಿದ ಧಾರಾಕಾರ ಗಾಳಿ ಮಳೆಗೆ ಮೈಸೂರು ರಸ್ತೆಯ ಸುಜಯ್ ಎಂಬವರಿಗೆ ಸೇರಿದ ಕಾರ್ಮಿಕರ ವಾಸದ ಮನೆಯ ಮೇಲ್ಚಾವಣಿ ಹಾರಿಹೋಗಿದ್ದು ಮೂರು ಕುಟುಂಬಗಳು ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ಪ್ರಜೀದಾ ಎಂಬ ಮಹಿಳೆಗೆ ಮನೆಯ ಮೇಲ್ಛಾವಣಿಯ ಸೀಟು ತಗುಲಿ ತಲೆಗೆ ಗಂಭೀರ ಗಾಯಗಳಾಗಿದ್ದು ಸಿದ್ದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪ್ರೇಮಿ, ಬೇಬಿ, ಚಂದ್ರ ಎಂಬವರು ವಾಸವಾಗಿದ್ದ ಮನೆಯ ಮೇಲ್ಚಾವಣಿಗಳು ಸಂಪೂರ್ಣ ಹಾರಿ ಹೋಗಿದ್ದು ಭಾರಿ ನಷ್ಟ ಉಂಟಾಗಿದೆ.

ಮೂರು ಮನೆಗಳಲ್ಲಿ 10ಕ್ಕೂ ಹೆಚ್ಚು ಮಂದಿ ವಾಸವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರ ನೆರವಿನೊಂದಿಗೆ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಸ್ಥಳಕ್ಕೆ ಕಂದಾಯ ಅಧಿಕಾರಿಗಳ ಭೇಟಿ: ಮಳೆ ಗಾಳಿಯಿಂದ ಹಾನಿಗೊಳಗಾದ ಮನೆಗೆ ಕಂದಾಯ ಇಲಾಖೆ ಅಧಿಕಾರಿ ವಿನು, ಗ್ರಾಮ ಲೆಕ್ಕಿಗ ಸಂತೋಷ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆ ಹಾಗೂ ಗಾಯಗೊಂಡ ಮಹಿಳೆಗೆ ಸರಕಾರದ ಪರಿಹಾರಕ್ಕಾಗಿ ಇಲಾಖೆಗೆ ಮಾಹಿತಿ ನೀಡಲಾಗುವುದು ಎಂದರು.

Translate »