ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ರೈತ ದಸರಾ ಉಪ ಸಮಿತಿ ಮೈಸೂರಿನ ಜೆ.ಕೆ.ಮೈದಾನದಲ್ಲಿ ಶನಿವಾರ ರೈತರಿಗಾಗಿ ಆಯೋಜಿಸಿದ್ದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಹುಣಸೂರು ತಾಲೂಕಿನ ರೈತರು ಹೆಚ್ಚಿನ ಬಹುಮಾನಗಳನ್ನು ಬಾಚಿಕೊಂಡಿದ್ದಾರೆ.
ರೈತ ದಸರಾ ಉಪ ಸಮಿತಿ ಕಾರ್ಯಾಧ್ಯಕ್ಷರೂ ಆದ ಜಂಟಿ ಕೃಷಿ ನಿರ್ದೇಶಕ ಮಹಂತೇಶಪ್ಪ ನೇತೃತ್ವದಲ್ಲಿ ನಡೆದ ಕ್ರೀಡಾ ಸ್ಪರ್ಧೆಗಳಲ್ಲಿ ರೈತ ಪುರುಷರು, ಮಹಿಳೆಯರು ಗೆಲ್ಲಲೇಬೇಕೆಂಬ ಹಠದಲ್ಲಿ ಓಡಿದರು, ಬಿದ್ದು ಮತ್ತೆ ಎದ್ದು ಓಡಿದರು.
50 ಕೆ.ಜಿ ಗೊಬ್ಬರದ ಮೂಟೆ ಹೊತ್ತು ಓಡುವಾಗ ಸ್ಪರ್ಧಿಯೊಬ್ಬರು ಮುಗ್ಗರಿಸಿ ಬಿದ್ದರೆ, ತಲೆಯ ಮೇಲೆ ನೀರು ತುಂಬಿದ ಬಿಂದಿಗೆ ಹೊತ್ತು ಓಡುವಾಗ ಕೆಲವು ಮಹಿಳಾ ಸ್ಪರ್ಧಿಗಳು ಬಿದ್ದರು.
ಕಪ್ಪೆ ಜಿಗಿತ ಸ್ಪರ್ಧೆಯಲ್ಲಿ ರೈತ ಮಹಿಳೆ ಯರು ಕಪ್ಪೆಯಂತೆ ಜಿಗಿದು ಕುಪ್ಪಳಿಸಿದರು. ಗೋಣಿಚೀಲದೊಳಗೆ ಎರಡೂ ಕಾಲನ್ನಿಟ್ಟು ಓಡುವ ಸ್ಪರ್ಧೆಯಲ್ಲೂ ಕೆಲವರು ಬಿದ್ದು, ಎದ್ದರು. ಮೂರು ಕಾಲಿನ ಓಟ ಸ್ಪರ್ಧೆಯಲ್ಲಿ ಇಬ್ಬರು ಸ್ಪರ್ಧಿಗಳು ತಮ್ಮ ಒಂದೊಂದು ಕಾಲನ್ನು ಕಟ್ಟಿ ಕೊಂಡು ಓಡಿದರು, ಮುಗ್ಗರಿಸಿ ಬಿದ್ದರು. ಒಟ್ಟಾರೆ ಬಿದ್ದು, ಎದ್ದರೂ ಸ್ವಲ್ಪವೂ ಬೇಸರಿಸದೆ ರೈತ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಇಡೀ ಕ್ರೀಡಾ ಸ್ಪರ್ಧೆಗಳನ್ನು ಶಿಕ್ಷಣ ಇಲಾಖೆಯ ಕ್ರೀಡಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಣ ಸುರೇಶ್ ಮತ್ತು ತಂಡ ನಡೆಸಿಕೊಟ್ಟಿತು. ವಿಜೇತರಿಗೆ ಕ್ರಮವಾಗಿ 5, 3 ಮತ್ತು ಎರಡು ಸಾವಿರ ರೂ. ಬಹುಮಾನ, ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.