ಮುಂದಿನ ಚುನಾವಣೆಗೂ ನಾನೇ ಜೆಡಿಎಸ್  ಅಭ್ಯರ್ಥಿ: ಸಂಸದ ಶಿವರಾಮೇಗೌಡ ವಿಶ್ವಾಸ
ಮಂಡ್ಯ

ಮುಂದಿನ ಚುನಾವಣೆಗೂ ನಾನೇ ಜೆಡಿಎಸ್ ಅಭ್ಯರ್ಥಿ: ಸಂಸದ ಶಿವರಾಮೇಗೌಡ ವಿಶ್ವಾಸ

December 6, 2018

ಮಂಡ್ಯ: ಮುಂದಿನ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿಯೂ ನಾನೇ ಜೆಡಿಎಸ್ ಅಭ್ಯರ್ಥಿ. ನನಗೇ ಟಿಕೆಟ್ ನೀಡುವಂತೆ ದೇವೇಗೌಡರನ್ನು ಕೇಳುತ್ತೇನೆ ಎಂದು ಮಂಡ್ಯ ಲೋಕಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಭಾರಿ ಬಹುಮತದ ಗೆಲುವು ಸಾಧಿಸಿರುವ ಎಲ್.ಆರ್.ಶಿವರಾಮೇಗೌಡ ಹೇಳಿದರು.

ನಗರದ ಡಿಸಿ ಕಚೇರಿಯಲ್ಲಿ ಬುಧವಾರ ನೂತನ ಜನಸಂಪರ್ಕ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಸುದ್ದಿ ಗಾರರೊಂದಿಗೆ ಅವರು ಮಾತನಾಡಿದರು. ಐದೂವರೇ ತಿಂಗಳಿಗೇ ವಾಪಸು ಹೋಗಲು ಅಖಾಡಕ್ಕೆ ಬಂದಿಲ್ಲ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿಯೂ ನನಗೇ ಜೆಡಿಎಸ್ ಟಿಕೆಟ್ ನೀಡಬೇಕು ಎಂದು ಕೇಳುತ್ತೇನೆ. ನಾನು ಐದುವರೇ ತಿಂಗಳಿಗೆ ವಾಪಸು ಹೋಗಬೇಕು ಎಂಬುದು ನಿಮ್ಮ ಆಸೆಯೇ? ಎಂದು ಅವರು ಸುದ್ದಿಗಾರರನ್ನೇ ಪ್ರಶ್ನಿಸಿದರು.

ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ವೇಳೆ ‘ಮುಂದಿನ ಚುನಾವಣೆಗೂ ತಾವೇ ಸ್ಪರ್ಧೆ ಮಾಡುವಿರಾ’ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಎಲ್.ಆರ್. ಶಿವರಾಮೇಗೌಡ, ಪಕ್ಷದ ವರಿಷ್ಠರು ಟಿಕೆಟ್ ನೀಡಿದರೆ ಮುಂದೆಯೂ ಸ್ಪರ್ಧೆ ಮಾಡುತ್ತೇನೆ. ಇಲ್ಲವಾದರೆ, ಪಕ್ಷದ ಕಚೇರಿ ಜೆಪಿ ಭವನದಲ್ಲಿ ಕಸ ಹೊಡೆದುಕೊಂಡು ಇರುತ್ತೇನೆ ಎಂದಿದ್ದರು. ಆದರೆ, ಇವತ್ತು ಅದಕ್ಕೆ ವ್ಯತಿರಿಕ್ತವಾಗಿ ಮಾತನಾ ಡಿದ್ದು ಜೆಡಿಎಸ್ ಪಾಳೆಯದಲ್ಲಿ ಹುಬ್ಬೇರುವಂತೆ ಮಾಡಿದ್ದಾರೆ.ಜನರ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ: ಜಿಲ್ಲೆಯ ಜನರ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕ್ಯಾಬಿನೆಟ್ ಸಭೆ ಮುಗಿದ ನಂತರ ವಾರಕ್ಕೆ ಒಂದು ದಿನ ಕಚೇರಿಯಲ್ಲಿ ಉಳಿದು ಜನರ ಸಂಕಷ್ಟವÀನ್ನು ಬಗೆಹರಿ ಸಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ನೂತನ ಸಂಸದರು, ಶಾಸಕರ ಕಚೇರಿ ಉದ್ಘಾಟನೆ: ನಗರದಲ್ಲಿಂದು ನೂತನ ಸಂಸದರು ಹಾಗೂ ಶಾಸಕರು ತಮ್ಮ ತಮ್ಮ ಜನ ಸಂಪರ್ಕ ಕಚೇರಿಗಳನ್ನು ಉದ್ಘಾಟಿಸಿದರು. ಮಂಡ್ಯದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ಶಿವ ರಾಮೇಗೌಡ ತಮ್ಮ ಕಚೇರಿ ಉದ್ಘಾಟಿಸಿದರೆ, ಶ್ರೀರಂಗ ಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಕಾವೇರಿ ಭವನದಲ್ಲಿ ನೂತನ ಕಚೇರಿಗೆ ಟೇಪ್ ಕತ್ತರಿಸುವ ಮೂಲಕ ಪ್ರವೇಶ ಪಡೆದರು.

ರಾಹುಕಾಲ ಅಡ್ಡಿ: ಬೆಳಿಗ್ಗೆ 8:30ಕ್ಕೆ ನಿಗದಿಯಾಗಿದ್ದ ಉದ್ಘಾಟನೆ ಕಾರ್ಯಕ್ರಮಕ್ಕೆ ತಡವಾಗಿ ಬಂದ ರವೀಂದ್ರ ಶ್ರೀಕಂಠಯ್ಯ, ಪುರೋಹಿತರ ಅಣತಿಯಂತೆ ರಾಹುಕಾಲ ಕಳೆಯುವವರೆಗೆ ಕಾದು ಕುಳಿತು, ರಾಹುಕಾಲ ಕಳೆದ ನಂತರ 10:25ಕ್ಕೆ ಕಚೇರಿ ಉದ್ಘಾಟಿಸಿದರು. ನಂತರ ಕಚೇರಿ ಯಲ್ಲಿ ನಡೆದ ಪೂಜಾ ಕೈಂಕರ್ಯ ನೆರವೇರಿಸಿದರು.

ಇನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಮ್ಮ ಕಚೇರಿ ಉದ್ಘಾಟಿಸಿದ ನೂತನ ಸಂಸದ ಶಿವರಾಮೇಗೌಡ ಕೂಡ ಪೂಜೆ ನೆರವೇರಿಸಿದರು. ಈ ವೇಳೆ ಶಾಸಕ ಎಂ.ಶ್ರೀನಿ ವಾಸ್, ಜೆಡಿಎಸ್ ಮುಖಂಡರಾದ ತಗ್ಗಹಳ್ಳಿ ವೆಂಕಟೇಶ್, ನಾಗೇಶ್, ಕಾಂಗ್ರೆಸ್ ಸ್ಥಳೀಯ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Translate »