ಕೇಂದ್ರ ಬಜೆಟ್ ಸಿಎಂ ಕುಮಾರಸ್ವಾಮಿಗೆ ಅರ್ಥವಾಗದಿದ್ದರೂ ಸಾಮಾನ್ಯ ಜನರಿಗೆ ತಿಳಿದಿದೆ
ಮೈಸೂರು

ಕೇಂದ್ರ ಬಜೆಟ್ ಸಿಎಂ ಕುಮಾರಸ್ವಾಮಿಗೆ ಅರ್ಥವಾಗದಿದ್ದರೂ ಸಾಮಾನ್ಯ ಜನರಿಗೆ ತಿಳಿದಿದೆ

February 3, 2019

ಮೈಸೂರು: ಕೇಂದ್ರ ಬಜೆಟ್ ಅನ್ನು ಟೀಕಿಸಿದ್ದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಕಿಡಿಕಾರಿದ ಸಂಸದ ಪ್ರತಾಪ್‍ಸಿಂಹ, ಕುಮಾರಸ್ವಾಮಿ ಅಂತಹವರಿಗೆ ಬಜೆಟ್‍ನಲ್ಲಿ ಕಲ್ಪಿಸಿರುವ ತೆರಿಗೆ ವಿನಾಯಿತಿ ಮಹತ್ವ ಅರ್ಥ ಆಗುವುದಿಲ್ಲ. ಆದರೆ ಇದರಿಂದ ಅನುಕೂಲ ಪಡೆಯುವ ಸಾಮಾನ್ಯ ಜನರಿಗೆ ಅದು ಅರ್ಥವಾಗುತ್ತದೆ ಎಂದು ತಿರುಗೇಟು ನೀಡಿದರು.

ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್ ಮಂಡಿಸಿದ ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯಲ್ ಅನುಭವಿ ಚಾರ್ಟರ್ಡ್ ಅಕೌಂಟೆಂಟ್. ಅವರು ಮೊದಲ ಬಾರಿಗೆ ಎಲ್ಲರಿಗೂ ಅನುಕೂಲ ವಾಗುವಂತಹ ಬಜೆಟ್ ಮಂಡಿಸಿದ್ದಾರೆ. ಇದುವರೆಗೆ ವಕೀಲರು ಅಥವಾ ಫುಲ್‍ಟೈಮ್ ರಾಜಕಾರಣಿಗಳು ಬಜೆಟ್ ಮಂಡಿಸುತ್ತಿದ್ದರು. ಈ ಬಾರಿ ಆಡಿಟ್ ಎಕ್ಸ್‍ಪರ್ಟ್ ಒಬ್ಬರು ಅತ್ಯುತ್ತಮ ಬಜೆಟ್ ಮಂಡಿಸಿದ್ದಾರೆ. ಅದನ್ನು ಮುಖ್ಯಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕು. ಸಾಮಾನ್ಯ ಜನರಿಗೆ ಬಜೆಟ್ ಮಹತ್ವ ಅರ್ಥವಾಗಿದೆ. ಆದರೆ ಕುಮಾರಸ್ವಾಮಿಯಂತಹವರಿಗೆ ಹಾಗೂ ಕಮಿಷನ್ ರಾಜಕಾರಣಿ ಗಳಿಗೆ ಅದರ ಮಹತ್ವ ಅರ್ಥವಾಗದು ಎಂದು ಕಿಡಿಕಾರಿದರು.

ಸರ್ಕಾರಿ ಆಸ್ಪತ್ರೆಗಳೀಗ ಶಿಫಾರಸ್ಸು ಕೇಂದ್ರಗಳು: `ಆಯುಷ್ಮಾನ್ ಭಾರತ’ ಯೋಜನೆಗೆ ಸಂಬಂಧಿಸಿದಂತೆ ಹೆಸರು ಮಾತ್ರ ಕೇಂದ್ರ ಸರ್ಕಾರದ್ದು ಹಣ ಮಾತ್ರ ರಾಜ್ಯ ಸರ್ಕಾರ ಭರಿಸಬೇಕೆಂದು ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ ಎನ್ನುವ ಸಂಬಂಧ ಪ್ರತಿಕ್ರಿಯಿಸಿದ ಸಿಂಹ, ರಾಜ್ಯ ಸರ್ಕಾರದಿಂದ ಎಷ್ಟು ಹಣ ನೀಡು ತ್ತಾರೆಂದು ಅವರು ಸ್ಪಷ್ಟಪಡಿಸಲಿ ಎಂದು ಸವಾಲೆಸೆದರು.

ಕೇಂದ್ರ ಸರ್ಕಾರ ಶೇ.60ರಷ್ಟು ಹಾಗೂ ರಾಜ್ಯ ಸರ್ಕಾರ ಶೇ.40 ರಷ್ಟು ಅನುದಾನ ಭರಿಸಲಿವೆ. ರಾಜ್ಯ ಸರ್ಕಾರದ ಆರೋಗ್ಯ ಕರ್ನಾ ಟಕ ಯೋಜನೆಯಲ್ಲಿ ಕೇಂದ್ರದ ಆಯುಷ್ಮಾನ್ ಯೋಜನೆಯನ್ನು ವಿಲೀನಗೊಳಿಸಿದ್ದಾರೆ. ಈ ಆರೋಗ್ಯ ಕರ್ನಾಟಕ ಯೋಜನೆಯಡಿ ಸೌಲಭ್ಯ ಪಡೆಯಲು ಎಂತಹ ತುರ್ತು ಪರಿಸ್ಥಿತಿಯಲ್ಲೂ ಸರ್ಕಾರಿ ಆಸ್ಪತ್ರೆಗೆ ಮೊದಲು ಬರಬೇಕು. ಆ ಬಳಿಕ ಶಿಫಾರಸ್ಸು ಪಡೆದು ಖಾಸಗಿ ಆಸ್ಪತ್ರೆಗೆ ಹೋಗಲು ಅವಕಾಶ ಮಾಡಿದ್ದಾರೆ. ಆ ಮೂಲಕ ಸರ್ಕಾರಿ ಆಸ್ಪತ್ರೆಗಳನ್ನು ಶಿಫಾರಸ್ಸು ಕೇಂದ್ರಗಳಾಗಿ ಮಾಡಿದ್ದಾರೆ. ಕೂಡಲೇ ಅದನ್ನು ಬದಲಾವಣೆಗೆ ಸಿಎಂ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಸೈದ್ಧಾಂತಿಕ ವಿರೋಧಿಗಳು ನನ್ನನ್ನು ಬೆಂಬಲಿಸುತ್ತಾರೆ: ಮುಂಬ ರುವ ಲೋಕಸಭಾ ಚುನಾವಣೆಗೆ ಸಿದ್ಧತೆಯನ್ನು 2014ರಲ್ಲಿ ನಾನು ಹಾಗೂ ನಮ್ಮ ಪಕ್ಷ ಶುರು ಮಾಡಿದೆ! ಅದು ಯಾವ ರೀತಿ ಎಂದರೆ ಅಧಿಕಾರಾವಧಿಯಲ್ಲಿ ಜನಪರ ಕೆಲಸ ಮಾಡುವುದಾಗಿದೆ. ಹೀಗಾಗಿ ಮುಂದೆಯೂ ಜನತೆ ನಮ್ಮನ್ನು ಉಳಿಸಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೋದಿಯವರು ನಾನೊಬ್ಬ ದೇಶದ ಜನತೆಯ ಪ್ರಧಾನ ಸೇವಕ ಎಂದಿದ್ದಾರೆ. ಅದೇ ರೀತಿ ನಾನೂ ಒಬ್ಬ ಜನಸೇವಕ. 2014ರಲ್ಲಿ ಊರಿಗೆ ಹೊಸಬನಾಗಿ ಬಂದು ಕಠಿಣ ಸವಾಲುಗಳನ್ನು ಎದುರಿಸಿ ಸಂಸದನಾಗಿ ಆಯ್ಕೆ ಯಾಗಿದ್ದೇನೆ. ಈ ವೇಳೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವಾರಕ್ಕೊಮ್ಮೆ ಮೈಸೂರಿಗೆ ಬಂದು ಹೋಗುತ್ತಿದ್ದರು. ಇಂತಹ ಸನ್ನಿವೇಶದಲ್ಲೂ ಜನತೆ ಆಯ್ಕೆ ಮಾಡಿದರು. ಈಗ ಮೈತ್ರಿ ಅಭ್ಯರ್ಥಿ ಕಣಕ್ಕಿಳಿದರೂ ನನಗೆ ಯಾವುದೇ ಆತಂಕವಿಲ್ಲ. ನಾನು ಗೆಲ್ಲುವುದು ಖಚಿತ ಎಂದರು.

ನನ್ನ ಅಧಿಕಾರಾವಧಿಯಲ್ಲಿ ಮಾಡಿರುವ ಕೆಲಸಗಳು ಜನತೆಗೆ ಗೊತ್ತಿದ್ದು, ಎದುರಾಳಿಗಳ ಬಗ್ಗೆ ಯಾವುದೇ ಆತಂಕವಿಲ್ಲ. ಸೈದ್ಧಾಂತಿಕ ವಾಗಿ ವಿರೋಧಿಸುವವರು ನನ್ನ ಕೆಲಸಕ್ಕಾಗಿ ಮೆಚ್ಚುಗೆ ವ್ಯಕ್ತಪಡಿ ಸಿದ್ದು, ಅಲ್ಪಸಂಖ್ಯಾತರು ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ. ಮೋದಿಯವರು ಸ್ಪರ್ಧೆ ಮಾಡುವ ವಾರಣಾಸಿ ಬಿಟ್ಟು ಎಲ್ಲಾ ಕ್ಷೇತ್ರ ಗಳಲ್ಲೂ ಟಿಕೆಟ್ ಆಕಾಂಕ್ಷೆಗಳು ಇದ್ದಾರೆ. ಅರ್ಹತೆ ಇರುವುದು ಕೆಲವರಿಗೆ ಮಾತ್ರ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುವ ಮೂಲಕ ಕ್ಷೇತ್ರದ ಟಿಕೆಟ್ ತಮಗೆ ಲಭಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ತಾವು ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಶಾಸಕ ಅಪ್ಪಚ್ಚು ರಂಜನ್ ಅವರು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಪ್ಪಚ್ಚು ರಂಜನ್ ಅವರು ತಮಾಷೆಗಾಗಿ ಆ ರೀತಿ ಹೇಳಿದ್ದಾರೆ. ತಮಾಷೆಗೆ ಹೇಳಿರುವುದಾಗಿ ಅವರೇ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.

Translate »