ಮೋದಿ ಮತ್ತೆ ಪ್ರಧಾನಿಯಾದ್ರೆ ರಾಜಕೀಯ ನಿವೃತ್ತಿ
ಮೈಸೂರು

ಮೋದಿ ಮತ್ತೆ ಪ್ರಧಾನಿಯಾದ್ರೆ ರಾಜಕೀಯ ನಿವೃತ್ತಿ

April 12, 2019

ಮೈಸೂರು: ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಪ್ರಧಾನಿ ಯಾದರೆ ನಾನು ರಾಜಕೀಯದಿಂದ ನಿವೃತ್ತಿಯಾಗು ತ್ತೇನೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಇಂದಿಲ್ಲಿ ಸವಾಲು ಹಾಕಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಕರೆದಿದ್ದ ಮೈತ್ರಿ ಪಕ್ಷಗಳ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಮುವಾದಿ ಪಕ್ಷವನ್ನು ದೂರವಿಡಲು ಜನ ಈ ಬಾರಿ ಬಿಜೆಪಿಯನ್ನು ದೂರವಿಡಲಿದ್ದಾರೆ. ಕೇಂದ್ರದಲ್ಲಿ ಎನ್‍ಡಿಎ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದರು.

ದೇಶಕ್ಕೆ, ರಾಜ್ಯಕ್ಕೆ ಮೋದಿ ಅವರ ಕೊಡುಗೆ ಏನು, ಇದುವರೆಗೆ ರಾಮ ಮಂದಿರದ ವಿಚಾರ ಇಟ್ಟುಕೊಂಡು ರಾಮ-ಕೃಷ್ಣನ ಭಜನೆ ಮಾಡುತ್ತಿದ್ದ ಬಿಜೆಪಿಯವರು, ಇದೀಗ ದೇವೇಗೌಡರ ಭಜನೆ ಮಾಡುತ್ತಿದ್ದಾರೆ. ಅವರಿಗೆ ದೇವೇಗೌಡರು ಸಿಂಹಸ್ವಪ್ನವಾಗಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಆದ್ದರಿಂದ ಮೋದಿ ಅವರು ಮತ್ತೆ ಪ್ರಧಾನಿ ಆಗುವು ದಿಲ್ಲ. ಒಂದು ವೇಳೆ ಪ್ರಧಾನಿ ಆದರೆ ನಾನು ರಾಜ ಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದ ರೇವಣ್ಣ, ಮೊನ್ನೆ ಮೈಸೂರಿಗೆ ಬಂದಿದ್ದಾಗ ಸಂಕಷ್ಟದಲ್ಲಿರುವ ರೈತರಿಗೆ ಕೇಂದ್ರದ ಪಾಲಿನ ಹಣ ನೀಡಲು ರಾಜ್ಯ ಸರ್ಕಾರ ರೈತರ ಪಟ್ಟಿಯನ್ನೇ ಕಳಿಸಿಲ್ಲ ಎಂದು ಮೋದಿ ಹೇಳಿದ್ದಾರೆ. ನಾವು ಪಟ್ಟಿಯನ್ನು ಮೋದಿಗೋ, ಯಡಿಯೂರಪ್ಪಗೋ ಕಳುಹಿಸಲಾಗುವುದಿಲ್ಲ ಎಂದರು.

ರಾಜ್ಯದಿಂದ 15 ಲಕ್ಷ ರೈತರ ಕುಟುಂಬದ ಪಟ್ಟಿಯನ್ನು ಸಂಬಂಧಪಟ್ಟ ಇಲಾಖಾ ಮುಖ್ಯ ಕಾರ್ಯದರ್ಶಿ ಗಳಿಗೆ ಕಳುಹಿಸಲಾಗಿದೆ. ಕಳುಹಿಸಿಲ್ಲ ಎಂಬುದನ್ನು ಸಾಬೀತು ಪಡಿಸಿದಲ್ಲಿ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮತ್ತೊಮ್ಮೆ ಸವಾಲೆಸೆದರು.
ಕೇಂದ್ರದಲ್ಲಿ ಬಡವರ ಪರ ಸರ್ಕಾರ ರಚಿಸಲು ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾ ಗಿದ್ದು, ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಚುನಾವಣಾ ಪ್ರಚಾರ ಮಾಡುತ್ತಿವೆ. ಮೈತ್ರಿ ಸರ್ಕಾರ ಕಳೆದ 9 ತಿಂಗಳಲ್ಲಿ ಮಾಡಿರುವ ಕೆಲಸಗಳನ್ನು ಮುಂದಿಟ್ಟು ಪ್ರಚಾರ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ರೈತರ ಸಾಲ ಮನ್ನಾ, ವೃದ್ಧಾಪ್ಯ ವೇತನ, ತೆಂಗು ಬೆಳೆಗಾರರಿಗೆ ನೆರವು, ಕೊಡಗು ನೆರೆ ಸಂತ್ರಸ್ತರಿಗೆ ಆಶ್ರಯ, ಸಕ್ಕರೆ ಕಾರ್ಖಾನೆಗಳ ಪುನಶ್ಚೇತನ ಸೇರಿದಂತೆ ಹಲವು ಪ್ರಗತಿಪರ ಯೋಜನೆಗಳಿಂದಾಗಿ ನಮ್ಮ ಮೈತ್ರಿ ಅಭ್ಯರ್ಥಿ ಗಳನ್ನು ಜನ ಬೆಂಬಲಿಸುತ್ತಾರೆ ಎಂದ ಅವರು, ರಾಜ್ಯದ 22 ಮಂದಿ ಗೆಲುವು ಸಾಧಿಸುವುದು ಖಚಿತ ಎಂದೂ ಭವಿಷ್ಯ ನುಡಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಎ.ಹೆಚ್. ವಿಶ್ವನಾಥ್, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಮಾಜಿ ಶಾಸಕ ವಾಸು, ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮಂಡ್ಯ ಜನರಿಗೆ ಜೆಡಿಎಸ್ ಮೇಲೆ ವಿಶ್ವಾಸವಿದೆ
ಮೈಸೂರು: ಮಂಡ್ಯ ಜನರಿಗೆ ಜೆಡಿಎಸ್ ಮೇಲೆ ವಿಶ್ವಾಸವಿದೆ. ಈ ಚುನಾವಣೆ ಯಲ್ಲಿ `ಹೆಂಗ್ ಹೊಡೀತಾರೆ ಅಂತಾ ನೋಡ್ತಾ ಯಿರಿ’ ಎಂದು ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್ ಗೆಲ್ಲಲು ಕಾಂಗ್ರೆಸ್, ಬಿಜೆಪಿ, ರೈತ ಸಂಘ ಅಡ್ಡಿಯಾಗಿದೆಯಂತಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಂಡ್ಯ ಜನರ ಬಗ್ಗೆ ನಿಮಗೆ ಗೊತ್ತಿಲ್ಲ. ಜೆಡಿಎಸ್ ಮೇಲೆ ಜನರಿಗೆ ವಿಶ್ವಾಸವಿದೆ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಂಗ ಪಟ್ಟಣದಿಂದ ಬಿಡದಿವರೆಗೆ ಮಂಡ್ಯ ಜನ ಹೇಗೆ ಹೊಡೆದರೆಂಬುದನ್ನು ಫಲಿತಾಂಶದ ದಿನ ನೋಡಿ ದಿರಲ್ಲ. ಈ ಬಾರಿ ಏಪ್ರಿಲ್ 18ರಂದು ಜನರು ಮೆಷಿನ್‍ನಲ್ಲಿ ಗುದ್ದೊದನ್ನು ನೀವೇ ನೋಡುವಿ ರಂತೆ ಇರಿ ಎಂದೂ ರೇವಣ್ಣ ನುಡಿದರು.

ಮಾಧ್ಯಮದವರ ಮೇಲೆ ಹಲ್ಲೆಯಾದರೆ ನಾನು ಜವಾಬ್ದಾರನಲ್ಲ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಯವರು ಹಲ್ಲೆ ಮಾಡಿದರೂ ನೀವು (ಮಾಧ್ಯಮದವರು) ಜೆಡಿಎಸ್ ಕಾರ್ಯಕರ್ತರೇ ಹಲ್ಲೆ ಮಾಡಿದಾರೆ ಅಂದುಕೊಳ್ಳುತ್ತೀರಿ ಎಂಬ ಅರ್ಥದಲ್ಲಿ ಹೇಳಿದ್ದಾ ರಷ್ಟೆ. ಅದನ್ನು ಬಿಟ್ಟು ಬೇರೇನೂ ಅಲ್ಲ. ಕುಮಾರ ಸ್ವಾಮಿ ಹೇಳಿರೋದು ನಿಮ್ಮ ಒಳ್ಳೆಯದಕ್ಕಾಗಿ . ಅದನ್ನು ಅಪಾರ್ಥ ಮಾಡಿಕೊಳ್ಳಬೇಡಿ. ಹುಷಾ ರಾಗಿರಿ ಎಂದು ರೇವಣ್ಣ ಹೇಳಿದರು.

ದಿನೇ ದಿನೆ ಪ್ರಚಾರದ ಬಿಸಿ ಏರುತ್ತಿದ್ದಂತೆಯೇ ದ್ವೇಷಕ್ಕಾಗಿ ಬಿಜೆಪಿಯವರು ಹಲ್ಲೆ ಮಾಡಬಹು ದೆಂಬ ಅರ್ಥದಲ್ಲಿ ಕುಮಾರಸ್ವಾಮಿ ತಿಳಿಸಿರ ಬಹುದು ಎಂದೂ ಅವರು ಸ್ಪಷ್ಟಪಡಿಸಿದರು.

ರಾಜ್ಯದ 30 ಜಿಲ್ಲೆಗಳಲ್ಲಿ ದೇವೇಗೌಡರ ಕುಟುಂಬ ದಲ್ಲಿ ಮಾತ್ರ ವಂಶಪಾರಂಪರ್ಯ ರಾಜಕಾರಣ ಇರೋದಾ. ಜಗದೀಶ್ ಶೆಟ್ಟರ್ ತಮ್ಮನನ್ನು ನಿಲ್ಸಿಲ್ವೆ. ಶಿವಮೊಗ್ಗದಲ್ಲಿ ಯಡಿಯೂರಪ್ಪ ಮಗನನ್ನು ಸ್ಪರ್ಧೆ ಗಿಳಿಸಿಲ್ವಾ. ಹಾಗಾದರೆ ರಾಘವೇಂದ್ರ ಮಗ ನಲ್ಲವೆ? ಎಂದು ರೇವಣ್ಣ ಟಾಂಗ್ ನೀಡಿದರು.

ಮೈತ್ರಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಲಕ್ಕಿ ನಂಬರ್!ಅದೃಷ್ಟ ಸಂಖ್ಯೆ ವ್ಯಾಖ್ಯಾನ ಬಿಡಿಸಿದ ಹೆಚ್.ಡಿ.ರೇವಣ್ಣ
ಮೈಸೂರು: ನನಗೆ 6, 8, 22 ಅದೃಷ್ಟದ ಸಂಖ್ಯೆಗಳು ಎಂದು ಮೈತ್ರಿ ಅಭ್ಯರ್ಥಿಗಳ ಗೆಲುವಿನ ಸೀಕ್ರೆಟ್ ಅನ್ನು ಸಚಿವ ಹೆಚ್.ಡಿ.ರೇವಣ್ಣ ಇಂದಿಲ್ಲಿ ಬಹಿರಂಗಗೊಳಿಸಿದ್ದಾರೆ.
ಮೈಸೂರಿನ ಖಾಸಗಿ ಹೋಟೆಲಿನಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, 18ನೇ ಸಂಖ್ಯೆ ಕೂಡಾ ಲಕ್ಕಿ ನಂಬರ್. 18 ಅಂದರೆ 1+8=9. 9 ಬಹಳ ಅದೃಷ್ಟದ ಸಂಖ್ಯೆ. ಕಳೆದ ಬಾರಿ 2018 ರಲ್ಲಿ ನಡೆದ ಚುನಾವಣೆಯಲ್ಲಿ ಕುಮಾರಸ್ವಾಮಿ ಮುಖ್ಯ ಮಂತ್ರಿ ಆದರು. ಈ ಸಲವೂ 18ರಂದು ಮತದಾನ ಇದೆ. ಆದ್ದರಿಂದ ಮೊದಲ ಹಂತದ ಎಲ್ಲಾ 14 ಮೈತ್ರಿ ಅಭ್ಯರ್ಥಿಗಳೂ ಗೆಲ್ಲುತ್ತಾರೆ ಎಂದರು.

6, 8ನೇ ತಾರೀಖು ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡಿದರು. ಆ ದಿನಾಂಕ, ಸಮಯ ವನ್ನು ನಾನು ಮೊದಲೇ ಹೇಳಿದ್ದೆ. ಬಿಜೆಪಿಯವರು ವಿರೋಧ ಮಾಡಿದರೂ ನಾನು ಹೇಳಿದಂಗೆ ಬಜೆಟ್ ಮಂಡನೆಯಾಯಿತಲ್ಲ ಎಂದ ಸಚಿವರು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಮ್ಮ ಮೈತ್ರಿಯ 22 ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ. ಮೇ 23ರಂದು ಅಚ್ಚರಿ ಫಲಿತಾಂಶ ಬರುತ್ತದೆ. ಕಾದು ನೋಡಿ ಎಂದರು.

ಅಂಬರೀಶ್ ಬಗ್ಗೆ ಗೌರವ: ಅಂಬರೀಶ್ ಬಗ್ಗೆ ನನಗೆ ಗೌರವವಿದೆ. ಕಳೆದ ಬಾರಿ ಅವರ ಮನೆಗೇ ಬಂದ ಕಾಂಗ್ರೆಸ್ ಟಿಕೆಟ್ ಅನ್ನು ಬೇಡ ಎಂದು ನಿರಾಕರಿಸಿದ್ದರು. ಆಗ ಕಾಂಗ್ರೆಸ್ ಗೆಲ್ಲುವ ಹೋಪ್ ಸಹ ಇರಲಿಲ್ಲ ಎಂದ ರೇವಣ್ಣ, ಸುಮಲತಾ ಬಗ್ಗೆ ಮಾತನಾಡಲು ನಯವಾಗಿಯೇ ನಿರಾಕರಿಸಿದರು.

ಹಾಸನ, ಮಂಡ್ಯದಲ್ಲಿ ಜೆಡಿಎಸ್‍ಗೆ ಯಾರೂ ಸವಾಲಾಗಿಲ್ಲ. ನಮಗೆ ಸವಾಲಿರೋದು ರಾಜ್ಯದ ರೈತ, ಜನರ ಹಿತ ಕಾಯುವುದಷ್ಟೇ. ಪ್ರಜ್ವಲ್ ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆಲ್ಲು ತ್ತಾನೆ. ಮಂಡ್ಯದಲ್ಲೂ ನಿಖಿಲ್ ಜಯ ಶತಃಸಿದ್ಧ ಎಂದೂ ಸಚಿವ ರೇವಣ್ಣ ಭವಿಷ್ಯ ನುಡಿದರು.

ನಿಂಬೆಹಣ್ಣು ರಹಸ್ಯ ಬಿಚ್ಚಿಟ್ಟ ಸಚಿವ ಹೆಚ್.ಡಿ.ರೇವಣ್ಣ
ಮೈಸೂರು: ಕೆಲವೊಂದಕ್ಕೆ ನಿಂಬೆ ಹಣ್ಣು ಬೇಕೇ ಬೇಕು. ಅದಕ್ಕೆ ಇಟ್ಟುಕೊಂಡಿರುತ್ತೇನೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ನಿಂಬೆ ಹಣ್ಣಿನ ರಹಸ್ಯ ಬಿಚ್ಚಿಟ್ಟಿದ್ದಾರೆ. ಸುದ್ದಿಗಾರರ ಪ್ರಶ್ನೆಗೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ ಅವರು, `ನಿಂಬೆಹಣ್ಣು ಬೇಕು ರೀ, ಕೆಲವೊಂದಕ್ಕೆ ನಿಂಬೆಹಣ್ಣು ಬೇಕೇ ಬೇಕು. ಅದಕ್ಕೆ ಇಟ್ಟುಕೊಂಡಿರುತ್ತೇನೆ. ನಮ್ಮನೆ ದೇವರು ಈಶ್ವರ, ನಮ್ಮ ಗುರುಗಳು ಶೃಂಗೇರಿ ಶ್ರೀಗಳು, ಈಶ್ವರನ ಫೋಟೋ ಜೊತೆ ನಿಂಬೆಹಣ್ಣು ಇಟ್ಟುಕೊಂಡಿರುತ್ತೇನೆ’ ಎಂದು ನುಡಿದರು. ಕಾರ್ಯಕ್ರಮದಲ್ಲಿ ಯಾರೋ ನಿಂಬೆಹಣ್ಣು ಗಳನ್ನು ಕೊಟ್ಟಿದ್ದರು. ಅದನ್ನು ಹಿಡಿದುಕೊಂಡಿದ್ದರೆ

`ನಿಂಬೆಹಣ್ಣು ರೇವಣ್ಣ ಎಂದರೆ ನಾನೇನು ಮಾಡಲಿ, ಬೇಕಿದ್ದರೆ ಯಡಿಯೂರಪ್ಪ, ಆರ್.ಅಶೋಕ್‍ಗೂ ನಿಂಬೆಹಣ್ಣು ಕೊಡ್ತೇನೆ. ಬೇಕಾದರೆ ಕೇಳಲಿ’ ಎಂದು ರೇವಣ್ಣ ಹಾಸ್ಯ ಚಟಾಕಿ ಹಾರಿಸಿದರು.

ಈಶ್ವರಪ್ಪರನ್ನು ಏಕೆ ನೆನಪಿಸಿಕೊಳ್ತೀರಿ: ಪ್ರಶ್ನೆಯೊಂ ದಕ್ಕೆ ಉತ್ತರಿಸಿದ ರೇವಣ್ಣ, ಈಶ್ವರಪ್ಪರನ್ನು ಈ ಹೊತ್ನಲ್ಲಿ ಏಕೆ ನೆನಪಿಸಿಕೊಳ್ಳುತ್ತೀರಿ, ಅವರ ಬಗ್ಗೆ ಮಾತನಾಡಿದ್ರೆ ನಾನು ಪಳ್ಳಾಗುತ್ತೇನೆ ಎಂದರು. 2008ರ ಚುನಾವಣೆ ಯಲ್ಲಿ ಈಶ್ವರಪ್ಪ ಸ್ಥಿತಿ ಏನಾಗಿತ್ತು, ಯಾವ ಬ್ರಿಗೇಡ್ ಕಟ್ಟಲು ಹೋಗಿದ್ದರೆಂದು ಎಲ್ಲರಿಗೂ ಗೊತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈಶ್ವರಪ್ಪ ಜೆಡಿಎಸ್‍ಗೆ ಬರಲು ಸಿದ್ಧರಾಗಿದ್ದರು ಎಂದೂ ಹೊಸ ಬಾಂಬ್ ಸಿಡಿಸಿ ದರು. ಯಡಿಯೂರಪ್ಪರನ್ನು ಬಾಯಿಗೆ ಬಂದಂತೆ ಬೈಯ್ಯು ತ್ತಿದ್ದ ಈಶ್ವರಪ್ಪ, ಬಿಜೆಪಿ ತೊರೆದು ನಮ್ಮ ಪಕ್ಷಕ್ಕೆ ಬರಲು ಸಿದ್ಧರಾಗಿದ್ದರು. ನಮ್ಮಲ್ಲೇ ಬಸ್ಸಿನ ಸೀಟು ಫುಲ್ ಆಗಿದೆ, ಟಿಕೆಟ್ ಸಿಗುತ್ತಿಲ್ಲ, ಅವರನ್ನು ಬಸ್ಸಿಗೆ ಹತ್ತಿಸಿಕೊಂಡರೆ ರಸ್ತೆಯಲ್ಲಿ ಆರ್‍ಟಿಓದವರು ಬಂದು ಕೇಸ್ ಹಾಕುತ್ತಾರೆ ಎಂದು ನಿಮ್ಮ ಸಹವಾಸವೇ ಬೇಡ ಎಂದು ರೇವಣ್ಣ ಮತ್ತೊಮ್ಮೆ ಹಾಸ್ಯದ ಮೂಲಕ ಲೇವಡಿ ಮಾಡಿದರು.

Translate »