ಜನಸಾಮಾನ್ಯರಲ್ಲಿ ಕಾನೂನು ಅರಿವು ಮೂಡಿಸಿದರೆ ಕೋರ್ಟ್‍ಗಳಲ್ಲಿ ದಾಖಲಾಗುವ ವ್ಯಾಜ್ಯಗಳಲ್ಲಿ ಇಳಿಮುಖ
ಮೈಸೂರು

ಜನಸಾಮಾನ್ಯರಲ್ಲಿ ಕಾನೂನು ಅರಿವು ಮೂಡಿಸಿದರೆ ಕೋರ್ಟ್‍ಗಳಲ್ಲಿ ದಾಖಲಾಗುವ ವ್ಯಾಜ್ಯಗಳಲ್ಲಿ ಇಳಿಮುಖ

June 5, 2018

ಮೈಸೂರು: – ಜನಸಾಮಾನ್ಯರಿಗೆ ಕಾನೂನು ಅರಿವು ಮೂಡಿಸುವುದರಿಂದ ನ್ಯಾಯಾಲಯಗಳಲ್ಲಿ ದಾಖಲಾಗುವ ವ್ಯಾಜ್ಯಗಳ ಪ್ರಮಾಣ ಇಳಿಮುಖವಾಗಲಿದೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ.ವಂಟಿಗೊಡಿ ಅಭಿಪ್ರಾಯಪಟ್ಟರು.

ಮೈಸೂರಿನ ಕುವೆಂಪುನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಶಾಲೆಯ ಕಾನೂನು ಸಾಕ್ಷರತಾ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನುಗಳ ಅರಿವು ಹೊಂದುವ ಮೂಲಕ ಅವುಗಳ ಪರಿಪಾಲನೆ ಸಾಧ್ಯವಾಗಲಿದೆ. ಸುಪ್ರಿಂ ಕೋರ್ಟ್ ಆದೇಶದಂತೆ ಕಾನೂನು ಸೇವೆಗಳ ಪ್ರಾಧಿಕಾರದಿಂದ ಶಾಲೆಗಳಲ್ಲಿ ಕಾನೂನು ಅರಿವು ಮೂಡಿಸಲು ಹಲವು ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ನಮ್ಮ ನಿತ್ಯ ಬದುಕಿನಲ್ಲಿ ಕೆಲ ಕಾನೂನುಗಳ ತಿಳುವಳಿಕೆ ಅತ್ಯಗತ್ಯವಾಗಿ ಬೇಕಾಗುತ್ತದೆ. ಹೀಗಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಬಗ್ಗೆ ಸಂಕ್ಷಿಪ್ತ ಮಾಹಿತಿ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಮೂಲಕ ಅವರ ಪೋಷಕರಿಗೂ ಕಾನೂನು ಅರಿವು ಮೂಡಲಿದೆ ಎಂದು ತಿಳಿಸಿದರು.

`ಮಾತು ಬಲ್ಲವನಿಗೆ ಜಗಳವಿಲ್ಲ’ ಎಂಬ ಗಾದೆ ಮಾತಿನಂತೆ ಕಾನೂನು ಬಲ್ಲವನಿಗೆ ಸಮಸ್ಯೆ ಎದುರಾಗದು. ಜ್ಞಾನವೇ ಶಕ್ತಿ ಎಂಬ ನುಡಿ ಮುತ್ತಿದ್ದು, ಕಾನೂನು ಜ್ಞಾನವಿದ್ದಲ್ಲಿ ಅದು ಇನ್ನಷ್ಟು ಹೆಚ್ಚು ಶಕ್ತಿ ತಂದುಕೊಡಲಿದೆ. ಭಾರತದ ಸಂವಿಧಾನ ಪ್ರಪಂಚದಲ್ಲೇ ಶ್ರೇಷ್ಠತೆಯಿಂದ ಕೂಡಿದ್ದು, ಆಳವಾದ ಹಾಗೂ ವಿಸ್ತøತ ಅಧ್ಯಯನದ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರು ಇಂತಹ ಉನ್ನತ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ. ದೇಶದ ಪ್ರತಿ ನಾಗರಿಕರಿಗೂ ಸಮಾನ ಹಕ್ಕು-ಬಾದತ್ಯೆಗಳನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ. ಹೀಗಾಗಿ ನಮಗೆ ಸಂವಿಧಾನದ ಹಾಗೂ ಕಾನೂನುಗಳ ಕನಿಷ್ಠ ಮಟ್ಟದ ಅರಿವು ಅಗತ್ಯ ಎಂದು ನುಡಿದರು.

ನಾವು ಶಾಲಾ ಹಂತದಲ್ಲಿ ಇದ್ದ ವೇಳೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯೇ ಹೆಚ್ಚಾಗಿತ್ತು. ಪಠ್ಯಪುಸ್ತಕ ಕೊಂಡುಕೊಳ್ಳಲು ಬಹುತೇಕ ಮಂದಿಗೆ ಆರ್ಥಿಕ ಶಕ್ತಿಯೂ ಇರಲಿಲ್ಲ. ಆದರೆ ಈಗ ಇಂತಹ ಪರಿಸ್ಥಿತಿ ಇಲ್ಲವಾಗಿದ್ದು, ಸಾಕಷ್ಟು ಸುಧಾರಣೆಯಾಗಿದೆ. ಜೊತೆಗೆ ಇಂದಿನ ಮಕ್ಕಳ ಬುದ್ಧಿಮತ್ತೆಯೂ ಹೆಚ್ಚಿದೆ. ಹೀಗಾಗಿ ಮಕ್ಕಳಿಗೆ ಕಾನೂನು ಅರಿವು ಮೂಡಿಸುವುದು ಅಂತಹ ಸವಾಲು ಆಗಲಾರದು. ಶಿಕ್ಷಕರು ಕಾನೂನುಗಳ ಬಗ್ಗೆ ತಿಳಿದುಕೊಂಡು ಮಕ್ಕಳಿಗೂ ಅರಿವು ಮೂಡಿಸಲು ಎಲ್ಲಾ ಪೂರಕವಾದ ವಾತಾವರಣ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಪ್ರಾಧಿಕಾರದಿಂದ ನೀಡಿರುವ ಕಾನೂನು ಬಗೆಗಿನ ಪುಸ್ತಕಗಳನ್ನು ಅಧ್ಯಯನ ನಡೆಸಿ ಮಕ್ಕಳಿಗೂ ತಿಳಿಸಿಕೊಡಬೇಕು ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ವಿಶ್ವ ಪರಿಸರ ದಿನದ ಅಂಗವಾಗಿ ಶಾಲೆಯ ಆವರಣದಲ್ಲಿ ಎರಡು ಗಿಡಗಳನ್ನು ನೆಡಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ಮೊಹಮ್ಮದ್ ಮುಜಿರುಲ್ಲಾ ಅತಿಥಿಯಾಗಿ ಪಾಲ್ಗೊಂಡಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕುಮಾರ್, ಕುವೆಂಪುನಗರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಎಲ್.ಚಿದಾನಂದಕುಮಾರ್ ಸೇರಿದಂತೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.

Translate »