ಆರೋಗ್ಯ ಸೇವೆ ಬೇಕಿದ್ದರೆ ಸದ್ಯಕ್ಕೆ ಪಡಿತರ ಚೀಟಿ, ಆಧಾರ್ ಹಾಜರುಪಡಿಸಿದರೆ ಸಾಕು
ಮೈಸೂರು

ಆರೋಗ್ಯ ಸೇವೆ ಬೇಕಿದ್ದರೆ ಸದ್ಯಕ್ಕೆ ಪಡಿತರ ಚೀಟಿ, ಆಧಾರ್ ಹಾಜರುಪಡಿಸಿದರೆ ಸಾಕು

October 5, 2018

ಮೈಸೂರು:  ರಾಜ್ಯ ಸರ್ಕಾರದ `ಆರೋಗ್ಯ ಕರ್ನಾಟಕ’ ಯೋಜನೆ ಜಾರಿಯಾಗಿ ಐದಾರು ತಿಂಗಳು ಕಳೆದಿ ದ್ದರೂ, ಈ ಯೋಜನೆಯ ಕಾರ್ಡ್ ಎಲ್ಲಿ?, ಹೇಗೆ?, ಯಾವ ಸಮಯದಲ್ಲಿ? ಮಾಡಿಸ ಬೇಕು. ಯಾವ ದಾಖಲೆಗಳನ್ನು ಒದಗಿಸ ಬೇಕು? ಹೀಗೆ ಹಲವು ಗೊಂದಲಗಳು ಸಾರ್ವ ಜನಿಕರಲ್ಲಿವೆ. ಆದರೆ ಈ ಯೋಜನೆಯ ಸೌಲಭ್ಯ ಪಡೆಯಲು ಸದ್ಯಕ್ಕೆ ಯಾವುದೇ ಕಾರ್ಡ್ ಅಗತ್ಯವಿಲ್ಲ. ಆಸ್ಪತ್ರೆಗೆ ಹೋಗು ವಾಗ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ಕೊಂಡೊಯ್ದರೆ ಸಾಕು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜು ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ಪ್ರಾದೇ ಶಿಕ ಸಲಹೆಗಾರ ಡಾ.ಪ್ರಸಾದ್, ಜಂಟಿ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿ, ಸಾರ್ವಜನಿಕರು ತಮ್ಮ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ಕೊಂಡೊಯ್ದು, `ಆರೋಗ್ಯ ಕರ್ನಾ ಟಕ’ ಯೋಜನೆಯ ಸಂಪೂರ್ಣ ಚಿಕಿತ್ಸಾ ಸೌಲಭ್ಯ ಪಡೆಯಬಹುದು. ಸದ್ಯಕ್ಕೆ ಯೋಜನೆಯ ಕಾರ್ಡ್ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಸಾರ್ವತ್ರಿಕ ಯೋಜನೆ: ವಾಜಪೇಯಿ ಆರೋಗ್ಯಶ್ರೀ, ರಾಜೀವ್ ಆರೋಗ್ಯ ಭಾಗ್ಯ, ಯಶಸ್ವಿನಿ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ, ಹಿರಿಯ ನಾಗರಿಕರ ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಯೋಜನೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ, ಕಾಕ್ಲಿಯರ್ ಇಂಪ್ಲಾಂಟ್ ಯೋಜನೆ, ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ, ಇಂದಿರಾ ಸುರಕ್ಷಾ ಯೋಜನೆ ಇನ್ನಿತರ ಆರೋಗ್ಯ ಯೋಜನೆ ಗಳನ್ನು ಒಟ್ಟುಗೂಡಿಸಿ, ಒಂದೇ ಯೋಜನೆ ಯಡಿ ಸಮಗ್ರ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಸಕ್ತ ವರ್ಷದ ಮಾರ್ಚ್ ತಿಂಗಳಲ್ಲಿ ಮಹತ್ವದ `ಆರೋಗ್ಯ ಕರ್ನಾಟಕ’ ಯೋಜನೆ ಯನ್ನು ಜಾರಿಗೊಳಿಸಲಾಗಿದೆ. ಮೈಸೂರು ಜಿಲ್ಲೆಯ ತಿ.ನರಸೀಪುರ ಸೇರಿದಂತೆ ಪ್ರಥಮ ಹಂತದಲ್ಲಿ ರಾಜ್ಯದ 11 ಆಸ್ಪತ್ರೆಗಳಲ್ಲಿ ಮಾತ್ರ `ಆರೋಗ್ಯ ಕಾರ್ಡ್’ಗಳನ್ನು ವಿತರಿಸಲಾಗು ತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಆಸ್ಪತ್ರೆ ಗಳಲ್ಲೂ ವಿತರಣೆಯಾಗಲಿದೆ. ಕಾರ್ಡ್ ಇಲ್ಲ ವೆಂದು ಯಾರೂ ಗೊಂದಲಕ್ಕೆ ಒಳಗಾಗ ಬಾರದು. ಸದ್ಯ `ಆರೋಗ್ಯ ಕರ್ನಾಟಕ’ ಯೋಜನೆ ಯಡಿ ಚಿಕಿತ್ಸೆ ಪಡೆಯಲು ಯಾವುದೇ ಕಾರ್ಡ್ ಅಗತ್ಯವಿಲ್ಲ. ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ತೋರಿಸಿ, ನಿಗಧಿತ ನಮೂ ನೆಯ ಅರ್ಜಿಯನ್ನು ಭರ್ತಿ ಮಾಡಿ ನೀಡಿದರೆ ಸಾಕು ಸೌಲಭ್ಯ ಪಡೆಯಬಹುದು. ಆರೋಗ್ಯ ಕಾರ್ಡ್ ಮಾಡಿಸಲು ಯಾವುದೇ ಕಾಲಮಿತಿ ಯಿಲ್ಲ ಎಂದು ಅವರು ತಿಳಿಸಿದರು.

3 ಹಂತಗಳ ಚಿಕಿತ್ಸೆ: ಆರೋಗ್ಯ ಕರ್ನಾ ಟಕ ಯೋಜನೆಯಡಿ ಪ್ರಾಥಮಿಕ, ದ್ವಿತೀಯ ಹಾಗೂ ತೃತೀಯ ಹಂತಗಳ ಸುಮಾರು 1516 ಚಿಕಿತ್ಸೆಗಳ ಸೌಲಭ್ಯ ಪಡೆಯಬಹು ದಾಗಿದೆ. ಪ್ರಾಥಮಿಕ ಹಂತದ ಕಾಯಿಲೆಗಳು ಹಾಗೂ ದ್ವಿತೀಯ ಹಂತ(ಎ)ದ ಸಾಮಾನ್ಯ ಚಿಕಿತ್ಸೆಗಳನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆ ಗಳಲ್ಲಿ ಉಚಿತವಾಗಿ ದೊರಕಲಿದ್ದು, ದ್ವಿತೀಯ ಹಂತ(ಬಿ)ದ ಕ್ಲಿಷ್ಟಕರ ಹಾಗೂ ತೃತೀಯ ಹಂತದ ಗಂಭೀರ ಕಾಯಿಲೆಗಳಿಗೆ ಅಗತ್ಯ ವಾದರೆ ಜಿಲ್ಲಾ ಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಅಲ್ಲಿ ಅಗತ್ಯ ಸೌಲಭ್ಯ ವಿಲ್ಲದಿದ್ದರೆ, ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿ ಬಯಸಿದ ಆಸ್ಪತ್ರೆಗೆ ರೆಫರ್ ಮಾಡಲಾಗುತ್ತದೆ. ತುರ್ತು ಚಿಕಿತ್ಸೆಗಳಿಗೆ ರೆಫರ್ ಪಡೆಯುವ ಅಗತ್ಯವಿರುವುದಿಲ್ಲ.

ಫಲಾನುಭವಿಗಳಲ್ಲಿ 2 ವರ್ಗ: ಆರೋಗ್ಯ ಕರ್ನಾಟಕ ಯೋಜನೆಯಡಿ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿ ಹೊಂದಿ ರುವವರನ್ನು ವಿಂಗಡಿಸಲಾಗಿದೆ. ಬಿಪಿಎಲ್ ಹೊಂದಿರುವವರಿಗೆ ಸಂಪೂರ್ಣ ಉಚಿತ ಚಿಕಿತ್ಸೆಯಿದ್ದು, ಎಪಿಎಲ್ ಹೊಂದಿರುವವರಿಗೆ ಶೇ.30ರಷ್ಟನ್ನು ಮಾತ್ರ ಸರ್ಕಾರ ಭರಿಸಲಿದೆ. ಬಿಪಿಎಲ್ ಕಾರ್ಡ್ ಹೊಂದಿರುವ 5 ಸದಸ್ಯರ ಕುಟುಂಬಕ್ಕೆ ನಿರ್ಧಿಷ್ಟ ಕ್ಲಿಷ್ಟಕರ ದ್ವಿತೀಯ ಹಂತದ ಚಿಕಿತ್ಸೆಗಾಗಿ ವಾರ್ಷಿಕ 30 ಸಾವಿರ ರೂ., ತೃತೀಯ ಹಂತದ ಚಿಕಿತ್ಸೆಗೆ ವಾರ್ಷಿಕ 1.50 ಲಕ್ಷ ರೂ., ತುರ್ತು ಚಿಕಿತ್ಸಾ ಸಂದರ್ಭ ಎದುರಾದಲ್ಲಿ ಹೆಚ್ಚುವರಿ 50 ಸಾವಿರ ರೂ. ಆರ್ಥಿಕ ನೆರವು ನಿಗದಿ ಗೊಳಿಸಲಾಗಿದೆ. ಈ ಪ್ಯಾಕೇಜ್‍ನಲ್ಲಿ ಬಿಪಿಎಲ್ ಹೊಂದಿರುವ ರೋಗಿಗಳಿಗೆ ಶೇ.30ರಷ್ಟನ್ನು ಮಾತ್ರ ಸರ್ಕಾರ ಭರಿಸುತ್ತದೆ. ಇಎಸ್‍ಐ, ಆರೋಗ್ಯ ಭಾಗ್ಯ (ಪೊಲೀಸರಿಗೆ) ಇನ್ನಿತರ ಯಾವುದೇ ಖಾಸಗಿ ವಿಮಾ ಸೌಲಭ್ಯ ಪಡೆಯುತ್ತಿರು ವವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ಸದ್ಯಕ್ಕೆ ಆರೋಗ್ಯ ಕರ್ನಾಟಕ ಯೋಜನೆಯಿಂದ ಹೊರಗುಳಿಸಲಾಗಿದೆ. ಯಾವುದಾದರೂ ಯೋಜನೆಯ ಫಲಾನುಭವಿಯಾಗಿದ್ದರೆ, ಆಧಾರ್ ಕಾರ್ಡ್‍ನಿಂದ ತಿಳಿಯಲಿದ್ದು, ಸಾಮಾನ್ಯ ರೋಗಿಯಾಗಿ ಪರಿಗಣಿಸಿ, ಚಿಕಿತ್ಸೆ ನೀಡಲಾಗುತ್ತದೆ. ಕೇಂದ್ರ ಸರ್ಕಾರದ `ಆಯುಷ್ಮಾನ್ ಭಾರತ’ ಹಾಗೂ `ಆರೋಗ್ಯ ಕರ್ನಾಟಕ’ ಯೋಜನೆಗಳಲ್ಲಿ ಸಾಮ್ಯತೆಯಿದ್ದು, ಮುಂದಿನ ದಿನಗಳಲ್ಲಿ ಈ ಎರಡನ್ನೂ ಸಮೀಕರಿಸಿ, ಒಂದೇ ಯೋಜನೆ ಜಾರಿಗೆ ತರುವ ಉದ್ದೇಶವಿದೆ. ಹಾಗಾಗಿ ಹೆಲ್ತ್ ಕಾರ್ಡ್ ವಿತರಣೆಯಲ್ಲಿ ವಿಳಂಬವಾಗಬಹುದು. ಆದರೆ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬಹುದು. ಆರೋಗ್ಯ ಕರ್ನಾಟಕ ಯೋಜನೆ ಬಗ್ಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಮಾಹಿತಿ ಪ್ರದರ್ಶಿಸಲಾಗಿದ್ದು, ಸಹಾಯ ವಾಣಿ `104’ ಅಥವಾ ಟೋಲ್ ಫ್ರೀ `18004258330’ ಕರೆ ಮಾಡಿದರೆ ಸಂಪೂರ್ಣ ಮಾಹಿತಿ ತಿಳಿಯಬಹುದು.

Translate »