ದೂರುದಾರನ ವಿರುದ್ಧವೇ ತಿರುಗಿಬಿದ್ದ ಪಡಿತರದಾರರು: ನ್ಯಾಯಬೆಲೆ ಅಂಗಡಿಯಲ್ಲಿ ಅಕ್ರಮ ಆರೋಪ, ಅಧಿಕಾರಿಗಳಿಂದ ದಿಢೀರ್ ಭೇಟಿ, ಪರಿಶೀಲನೆ
ಮಂಡ್ಯ

ದೂರುದಾರನ ವಿರುದ್ಧವೇ ತಿರುಗಿಬಿದ್ದ ಪಡಿತರದಾರರು: ನ್ಯಾಯಬೆಲೆ ಅಂಗಡಿಯಲ್ಲಿ ಅಕ್ರಮ ಆರೋಪ, ಅಧಿಕಾರಿಗಳಿಂದ ದಿಢೀರ್ ಭೇಟಿ, ಪರಿಶೀಲನೆ

July 13, 2018

ನಾಗಮಂಗಲ: ತಾಲೂಕಿನ ಬಳಪದ ಮಂಟಿಕೊಪ್ಪಲು ಸರ್ಕಾರಿ ನ್ಯಾಯ ಬೆಲೆ ಅಂಗಡಿಯಲ್ಲಿ ಹಲವು ಅಕ್ರಮಗಳು ನಡೆದಿವೆ ಎಂಬ ದೂರಿನ ಮೇರೆಗೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಸುಜಾತ ಹುಲ್ಮನಿ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಬಳಪದಮಂಟಿಕೊಪ್ಪಲು ನ್ಯಾಯಬೆಲೆ ಅಂಗಡಿ ವ್ಯಾಪ್ತಿಯ ಗದ್ದೇಬೂವನಹಳ್ಳಿ ಗ್ರಾಪಂ ಸದಸ್ಯ ಅಮ್ಮನಕಟ್ಟೆ ಬಸವರಾಜು ಎಂಬುವರು ಪಡಿತರ ಅಂಗಡಿಯಲ್ಲಿ ಹಲವು ಡಬಲ್ ಕಾರ್ಡ್‍ಗಳಿವೆ. ನಿಗದಿತ ಬೆಲೆಗಿಂತ ಹೆಚ್ಚು ದರ ಪಡೆಯುತ್ತಿದ್ದಾರೆ. ಮರಣ ಹೊಂದಿರುವವರ ಹೆಸರಿನಲ್ಲೂ ಪಡಿತರ ಲಪಟಾಯಿಸಿದ್ದಾರೆ. ತಿಂಗಳಿಗೆ 4 ದಿನ ಮಾತ್ರವೇ ಅಂಗಡಿ ಯಲ್ಲಿ ಪಡಿತರ ವಿತರಣೆ ಮಾಡುತ್ತಿದ್ದಾರೆ ಎಂಬ ಹಲವು ವಿಚಾರಗಳ ಬಗ್ಗೆ ರಾಜ್ಯ ಆಹಾರ ಇಲಾಖೆ ಆಯುಕ್ತರಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಬೆಂಗಳೂರಿನಿಂದ ಆಗಮಿಸಿದ್ದ ಅಧಿಕಾರಿಗಳ ತಂಡ ನ್ಯಾಯಬೆಲೆ ಅಂಗಡಿಗೆ ದಿಢೀರ್ ಭೇಟಿ ನೀಡಿ ದಾಸ್ತಾನು ಮತ್ತು ಹಲವು ದಾಖಲೆಗಳನ್ನು ಪರಿಶೀಲಿಸಿ, ಖುದ್ದು ಪಡಿತರದಾರರಿಂದ ಮಾಹಿತಿ ಪಡೆಯಲು ಪ್ರತಿ ಹಳ್ಳಿಗೆ ಇಬ್ಬರು ಅಧಿಕಾರಿ ಗಳು ತೆರಳಿದರು.

ದೂರುದಾರನ ವಿರುದ್ಧವೇ ತಿರುಗಿಬಿದ್ದ ಜನ: ಬಳಪದ ಮಂಟಿಕೊಪ್ಪಲು ನ್ಯಾಯ ಬೆಲೆ ಅಂಗಡಿ ವ್ಯಾಪ್ತಿಗೆ ಗದ್ದೆಭುವನಹಳ್ಳಿ, ಮಾಯಣ್ಣಗೌಡನ ಕೊಪ್ಪಲು, ಹುಲ್ಲೇಕೆರೆ ಬೀರೆಶ್ವರಪುರ ಸೇರಿದಂತೆ 8 ಗ್ರಾಮಗಳು ಒಳಪಟ್ಟಿದ್ದು, ದೂರು ಪರಿಶೀಲನೆಗೆ ಹಳ್ಳಿ ಗಳಿಗೆ ಭೇಟಿ ಕೊಟ್ಟ ಆಹಾರ ಮತ್ತು ನಾಗರಿಕ ಇಲಾಖೆ ಉಪನಿರ್ದೇಶಕಿ ಸುಜಾತ ಹುಲ್ಮನಿ ಮತ್ತು ಅಧಿಕಾರಿಗಳ ತಂಡದ ಎದುರೇ ದೂರುದಾರ ಅಮ್ಮನಕಟ್ಟೆ ಬಸವರಾಜು ವಿರುದ್ಧ ಪಡಿತರ ಚೀಟಿದಾರರು ತಿರುಗಿಬಿದ್ದು, ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ಈ ನ್ಯಾಯಬೆಲೆ ಅಂಗಡಿ ಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಗ್ರಾಪಂ ಸದಸ್ಯ ಬಸವರಾಜು ಮತ್ತು ಅಂಗಡಿ ಮಾಲೀಕ ತಿಮ್ಮೇಗೌಡರ ನಡುವಿನ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ರೀತಿ ದೂರು ನೀಡಿ ಇತರರಿಗೂ ತೊಂದರೆ ನೀಡುತ್ತಿದ್ದಾರೆ ಎಂದು ಪಡಿತರದಾರ ಉಮಾಶಂಕರ್ ಸೇರಿ ದಂತೆ ಹಲವು ಜನರು ಅಂಗಡಿ ಮಾಲೀಕನ ಪರ ಬ್ಯಾಟಿಂಗ್ ಮಾಡಿದರು.

ತನಿಖೆಗೆ ಆಗಮಿದ್ದ ಅಧಿಕಾರಿಗಳು ಇಡೀದಿನ ಗ್ರಾಮಗಳಲ್ಲಿ ಡಬಲ್ ಕಾರ್ಡ್‍ಗಳ ಬಗ್ಗೆ ಪರಿಶೀಲನೆ ನಡೆಸಿದ್ದು, ಇಲ್ಲಿ ಸಿಕ್ಕಿರುವ ಕಾರ್ಡ್‍ಗಳು ಹೆಬ್ಬೆಟ್ಟು ದೃಢೀಕೃತ ಸಹಿ ಇಲ್ಲದ ಹಳೇ ಕಾರ್ಡ್‍ಗಳಿರಬಹುದು. ತನಿಖೆಯಲ್ಲಿ ಸಂಗ್ರಹಿಸಿರುವ ಮಾಹಿತಿ ಮತ್ತು ದಾಖಲೆಗಳನ್ನು ಪರಿಶೀಲಿಸಿದಾಗ ನಿಜಾಂಶ ತಿಳಿಯಲಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಕಂದಾಯ ಇಲಾಖೆ ಶಿರಸ್ತೆದಾರ್ ಪಿ.ಪ್ರಕಾಶ್, ಗ್ರಾಮ ಸಹಾಯಕ ಸಂತೋಷ್, ದೂರುದಾರ ಅಮ್ಮನಕಟ್ಟೆ ಬಸವರಾಜು, ನ್ಯಾಯಬೆಲೆ ಅಂಗಡಿ ಮಾಲೀಕ ತಿಮ್ಮೇಗೌಡ ಸೇರಿದಂತೆ ಹಲವು ಪಡಿತರದಾರರಿದ್ದರು.

Translate »