ಪಾಲಿಕೆ ಸದಸ್ಯರೊಂದಿಗೆ ಅನುಚಿತ ವರ್ತನೆ ಉಗ್ರಾಣ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಪಾಲಿಕೆ ಸದಸ್ಯರೊಂದಿಗೆ ಅನುಚಿತ ವರ್ತನೆ ಉಗ್ರಾಣ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

January 14, 2020

ಮೈಸೂರು,ಜ.13(ಎಂಟಿವೈ)- ಪರಿಶೀಲನೆಗೆ ಅವಕಾಶ ನೀಡದೆ ಇಬ್ಬರು ಪಾಲಿಕೆ ಸದಸ್ಯರೊಂದಿಗೆ ಅಸಭ್ಯವಾಗಿ ವರ್ತಿಸಿರುವ ಉಗ್ರಾಣ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಂಡು, ನಡೆದಿರುವ ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿ ಮೈಸೂರು ನಗರ ಪಾಲಿಕೆ ಕಚೇರಿ ಮುಂದೆ ವಿನಾಯಕ ಕ್ರೀಡಾ ಹಾಗೂ ಸಮಾಜ ಸೇವಾ ಸಂಸ್ಥೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪರಿಶಿಷ್ಟ ಜಾತಿ ಹಾಗೂ ಹಿಂದುಳಿತ ವರ್ಗಕ್ಕೆ ಸೇರಿದ ಪಾಲಿಕೆ ಸದಸ್ಯರಾದ ಡಾ.ಅಶ್ವಿನಿ ಹಾಗೂ ಪಲ್ಲವಿ ಬೇಗಂ ಜ.4ರಂದು ಮೈಸೂರು ಪಾಲಿಕೆ ಉಗ್ರಾಣವನ್ನು ಪರಿಶೀಲಿಸಲು ತೆರಳಿದ್ದಾಗ ಉಗ್ರಾಣ ಸಿಬ್ಬಂದಿ ಗೇಟ್‍ಗೆ ಬೀಗ ಹಾಕಿ, ಒಳಗೆ ಹೋಗಲು ಅವಕಾಶ ನೀಡಿಲ್ಲ. ಅಲ್ಲದೆ ಜನಪ್ರತಿನಿಧಿಗಳೆಂದು ಲೆಕ್ಕಿಸದೇ ಏಕವಚನದಲ್ಲೇ ಮಾತನಾಡಿ, ಅನುಚಿತವಾಗಿ ವರ್ತಿಸಿದ್ದಾರೆ. ಪಾಲಿಕೆ ಸದಸ್ಯರೇ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಜ.6ರಂದು ಪ್ರತಿಭಟನೆ ನಡೆಸಿ, ತಪ್ಪು ಸಂದೇಶ ರವಾನಿಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಈ ಪ್ರಕರಣವನ್ನು ಪಾಲಿಕೆ ಆಯುಕ್ತರು ಗಂಭೀರವಾಗಿ ಪರಿಗಣಿಸಬೇಕು. ಪಾಲಿಕೆ ಸದಸ್ಯರೊಂದಿಗೆ ಅನುಚಿತವಾಗಿ ವರ್ತಿಸಿದ ಉಗ್ರಾಣ ಸಿಬ್ಬಂದಿ ದೊಡ್ಡಯ್ಯ, ಉಪ ಆಯುಕ್ತ ಶಿವಾನಂದಮೂರ್ತಿ, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ವೆಂಕಟರಾಮ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಅಲ್ಲದೆ ಪಾಲಿಕೆ ಉಗ್ರಾಣ ಚಟುವಟಿಕೆ ಬಗ್ಗೆ ತನಿಖೆ ನಡೆಸಬೇಕು. ಪಾರದರ್ಶಕತೆ ಕಾಪಾಡಲು ಸಿಸಿ ಕ್ಯಾಮರಾ ಅಳವಡಿಸಬೇಕು. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ ವಿವಿಧ ಸೌಲಭ್ಯ ಕ್ಕಾಗಿ ಮೀಸಲಿಟ್ಟಿರುವ ಶೇ.24.10 ಹಾಗೂ ಶೇ. 7.5 ಅನುದಾನ ಬಿಡುಗಡೆ ಮಾಡು ವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವವರ ವಿರುದ್ಧ ಕ್ರಮಕೈಗೊಂಡು, ತ್ವರಿತಗತಿ ಯಲ್ಲಿ ಬಿಡುಗಡೆ ಮಾಡುವಂತೆ ಸೂಚನೆ ನೀಡಬೇಕು. ಪರಿಶಿಷ್ಟ ಜಾತಿಗೆ ಸೇರಿದವರ ಶವಸಂಸ್ಕಾರಕ್ಕೆ ನೀಡುತ್ತಿದ್ದ ಆರ್ಥಿಕ ನೆರವನ್ನು ನಿಲ್ಲಿಸಲಾಗಿದ್ದು, ಮತ್ತೆ ಮಂಜೂರು ಮಾಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ವಿನಾಯಕ ಕ್ರೀಡಾ ಹಾಗೂ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಎಸ್.ಆನಂದಮೂರ್ತಿ, ಉಪಾಧ್ಯಕ್ಷ ಮಹಾ ಲಿಂಗು, ಶಂಭುಲಿಂಗಂ ರೇವಣ್ಣ, ರಾಜು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »