ಹಾಸ್ಯ ಚಟಾಕಿ ನಡುವೆಯೇ ಎಸ್.ಎಲ್.ಭೈರಪ್ಪ  ಗುಣಗಾನ ಮಾಡಿದ ಗಂಗಾವತಿ ಪ್ರಾಣೇಶ್
ಮೈಸೂರು

ಹಾಸ್ಯ ಚಟಾಕಿ ನಡುವೆಯೇ ಎಸ್.ಎಲ್.ಭೈರಪ್ಪ ಗುಣಗಾನ ಮಾಡಿದ ಗಂಗಾವತಿ ಪ್ರಾಣೇಶ್

January 21, 2019

ಮೈಸೂರು: ತಮ್ಮ ಹಾಸ್ಯದಾಟಿಯಲ್ಲಿ ಹಲವು ಪ್ರಸಂಗಗ ಳನ್ನು ಅನಾವರಣಗೊಳಿಸಿ ಕಚಗುಳಿ ಇಟ್ಟು ಸಭಿಕರ ಹೊಟ್ಟೆ ಹುಣ್ಣಾಗಿಸಿದ ನಗೆಗಾರ ಗಂಗಾವತಿ ಪ್ರಾಣೇಶ್, ಅಲ್ಲೆಲ್ಲಿ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರ ಮೇರು ವ್ಯಕ್ತಿತ್ವದ ಗುಣಗಾನ ಮಾಡಿದರಲ್ಲದೆ, ದಸರಾ ಮಹೋತ್ಸವ ಉದ್ಘಾಟನೆಗೆ ಅವರಿಗೆ ಅವಕಾಶ ನೀಡದ ಸರ್ಕಾರದ ವಿರುದ್ಧ ಜನಮಾನಸದಲ್ಲಿ ಇರುವ ಕಿಚ್ಚನ್ನೂ ಪ್ರಸ್ತಾಪಿಸಿದರು.

ಮೈಸೂರಿನ ಕಲಾಮಂದಿರಲ್ಲಿ ಹಮ್ಮಿ ಕೊಂಡಿದ್ದ ಡಾ.ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವದಲ್ಲಿ ಭಾನುವಾರ ಮಾತ ನಾಡಿದ ಅವರು, ಭೈರಪ್ಪರ ಕೃತಿಗಳ ಬಗ್ಗೆ ಮಾತನಾಡಲು ನಾನು ಶಕ್ತನಲ್ಲ ಎನ್ನುತ್ತಲೇ ಅವರ ಬೃಹತ್ ಸಾಹಿತ್ಯ ಲೋಕದ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು.

ನನ್ನ ಬಾಲ್ಯದಲ್ಲಿ ನಾನು ಬೀಚಿ ಅವರ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರೆ, ನನ್ನ ಸಹೋದರ ಡಾ.ಎಸ್.ಎಲ್. ಭೈರ ಪ್ಪರ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದ. ಇಬ್ಬರು ಪುಸ್ತಕಗಳನ್ನು ಬದಲಿಸಿಕೊಂಡು ಓದುತ್ತಿದ್ದೆವು. ಹೀಗಾಗಿ ನನಗೆ ಬೀಚಿ ಸಾಹಿತ್ಯದ ಜೊತೆಗೆ ಭೈರಪ್ಪರ ಸಾಹಿತ್ಯ ವನ್ನೂ ಓದಿಕೊಳ್ಳುವ ಅವಕಾಶ ಲಭಿಸಿತು. ಒಂದೇ ವಿಷಯವನ್ನು ಬೀಚಿ ಹಾಸ್ಯದಾಟಿ ಯಲ್ಲಿ ಪ್ರಸ್ತಾಪಿಸಿದರೆ, ಭೈರಪ್ಪ ಗಂಭೀರ ವಾಗಿ ಅದನ್ನು ಹೇಳುತ್ತಾರೆ ಎಂದರು.

ಇನ್ನು ಸ್ಥಾನಮಾನ ದೊರೆಯಬೇಕು: ಬೈರಪ್ಪರ ಅಗಾಧ ಸಾಹಿತ್ಯ ಕೃಷಿಗೆ ನಿಜಕ್ಕೂ ಸಲ್ಲಬೇಕಾದ ಹೆಚ್ಚಿನ ಗೌರವ ಇನ್ನು ಸಂದಿಲ್ಲ. ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸದೇ ಇರುವುದರ ಬಗ್ಗೆ ದೂರದ ಗಂಗಾವತಿಯಲ್ಲಿ ಜನತೆ ಆಕ್ರೋಶ ವ್ಯಕ್ತಪಡಿ ಸಿದ್ದನ್ನು ಕಂಡಿದ್ದೇನೆ. ಸರ್ಕಾರದ ಈ ನಡೆ ಬಗ್ಗೆ ಜನತೆ ಕಿಡಿಕಾರಿದ್ದಾರೆ. ಹೀಗಿದ್ದರೂ ಸರ್ಕಾರ ನೀಡಬೇಕಾದ ಮನ್ನಣೆ ನೀಡು ತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಒಳ್ಳೆಯ ಕೃತಿಗಳನ್ನು ಸಿನಿಮಾ ಮಾಡ ಬಾರದು. ರಾಷ್ಟ್ರೀಯ ಪ್ರಶಸ್ತಿಗಾಗಿ ಒಳ್ಳೆಯ ಕೃತಿಗಳನ್ನು ಸಿನಿಮಾ ಮಾಡುತ್ತಾರೆ. ಅಲ್ಲಿ ಏನೂ ಅರ್ಥವಾಗದಿದ್ದರೂ ಇದು ಕಲಾ ತ್ಮಕ ಸಿನಿಮಾ, ಪ್ರಶ್ನೆ ಮಾಡುವಂತಿಲ್ಲ’ ಎನ್ನು ತ್ತಾರೆ. ಬಿಡುಗಡೆ ಬಳಿಕ ಈ ಸಿನಿಮಾ ಬರುವುದೇನಿದ್ದರೂ ಭಾನುವಾರದಂದು ಡಿಡಿ1 ವಾಹಿನಿಯಲ್ಲಿ ಮಾತ್ರ. ಇವುಗಳಿಗೆ ಜಾಹೀರಾತು ನೀಡುವುದು ಯಾರು ಗೊತ್ತ? ಎಂದು ಹಾಸ್ಯದಾಟಿಯಲ್ಲಿ ಪ್ರಶ್ನಿಸಿದ ಅವರು,ಅಮೃತಾಂಜನ್ ಪೇನ್ ಬಾಂಬ್!’ ಎನ್ನು ತ್ತಿದ್ದಂತೆ ಸಭಾಂಗಣದಲ್ಲಿ ನಗುವಿನ ಅಲೆ ಎದ್ದಿತು.

ನೇರವಾಗಿ ಹಾಸ್ಯವನ್ನು ಕೇಳಿದರೆ ಹಾಗೂ ಸಾಹಿತ್ಯ ಓದಿದರೆ ಮನಸು ಉಲ್ಲಾ ಸವಾಗುತ್ತದೆ. ಆದರೆ ಈಗ ಧಾರಾವಾಹಿ ಗಳ ಮೊರೆ ಹೋಗುವುದೇ ಹೆಚ್ಚು. ಒಂದೇ ಘಟನೆಯನ್ನು 6 ತಿಂಗಳು ರುಬ್ಬುವುದೆಲ್ಲಿ? ಅಂದರೆ ಅದು ಧಾರಾವಾಹಿಗಳಲ್ಲಿ. ಒಂದು ಧಾರಾವಾಹಿಯಲ್ಲಿ ನಟಿಯೊಬ್ಬಳು ಸಂಬಾರಿಗೆ ಉಪ್ಪು ಹಾಕುವುದನ್ನೇ ಒಂದು ವಾರ ಕಾಲ ತೋರಿಸಿದರು. ಅವಳೇನು ಸಂಬಾರು ಮಾಡು ತ್ತಿದ್ದಾಳೋ ಇಲ್ಲ, ಸಮುದ್ರ ಮಾಡುತ್ತಿದ್ದಾಳೋ ಎಂದುಕೊಂಡೆ ಎಂದು ನಕ್ಕು ನಲಿಸಿದರು.

ಗಂಗಾವತಿ ಪ್ರಾಣೇಶ್ ಅವರ
ಜೋಕ್ಸ್ ಪಂಚ್‍ಗಳು…
ಖಾಸಗಿ ವಾಹನದ ಸಂದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ಒಂದು ಕವನ ವಾಚಿಸಿದ್ದೆ. ಅದೆಂದರೆ `ನಾನು ಎತ್ತರದಲ್ಲಿದ್ದೇನೆ ಎಂದು ಬೀಗ ಬೇಡ. ಆಕಾಶದಲ್ಲಿರುವ ನಕ್ಷತ್ರಗಳು ಬೀಳುತ್ತವೆ’ ಎಂದು ಕವನ ಹೇಳಿದ್ದೆ.

ಇದನ್ನೇ ಆಧಾರ ವಾಗಿಟ್ಟುಕೊಂಡು ಅನೇಕರು ಹಾಸ್ಯದ ಸಾಲುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿ ಮಾಡಿದ್ದರು. ಅವುಗಳೆಂದರೆ, 100 ಕಿ.ಮೀ.ನಲ್ಲಿ ಗಾಡಿ ಓಡಿಸುತ್ತೇನೆ ಎಂದು ಭೀಗ ಬೇಡ. ಹಾಗೆ ಹೋದವರು 108ರಲ್ಲಿ ಹಿಂತಿರುಗಿ ಬಂದಿದ್ದಾರೆ’,ನಾನು ಹತ್ತಾರು ಪದವಿ ಪಡೆದಿದ್ದೇನೆ ಎಂದು ಬೀಗ ಬೇಡ ಏನೂ ಓದದೇ ಇರುವವರ ಉನ್ನತ ಶಿಕ್ಷಣ ಮಂತ್ರಿಯಾಗಿದ್ದಾರೆ’, `ದೊಡ್ಡ ಶತೃವಿನಂತೆ ಯಾರ ಬಗ್ಗೆಯೂ ಮಾತನಾಡಬೇಡ, ಅವರಪ್ಪರಾಣೆ ಸಿಎಂ ಆಗುವುದಿಲ್ಲ ಎಂದಿದ್ದವರು ಕೊನೆಗೆ ಅವರೊಂದಿಗೆ ಮೈತ್ರಿ ಸರ್ಕಾರ ಮಾಡಿಕೊಂಡರು’ ಎಂಬ ಹಾಸ್ಯದ ತುಣುಕುಗಳನ್ನು ಹೇಳಿ ನಗುವಿನ ಅಲೆ ಎಳಿಸಿದರು.

Translate »