ಪಾಲಿಕೆ ಒಂದನೇ ವಾರ್ಡ್‍ನ ಸ್ವತಂತ್ರ ಅಭ್ಯರ್ಥಿ ತನುಜಾ, 42ನೇ ವಾರ್ಡ್‍ನ ಸ್ವರಾಜ್ ಇಂಡಿಯಾದ ಅಭಿರುಚಿ ಗಣೇಶ್‍ಗೆ ಮೈಗ್ರಾಪ ಬೆಂಬಲ
ಮೈಸೂರು

ಪಾಲಿಕೆ ಒಂದನೇ ವಾರ್ಡ್‍ನ ಸ್ವತಂತ್ರ ಅಭ್ಯರ್ಥಿ ತನುಜಾ, 42ನೇ ವಾರ್ಡ್‍ನ ಸ್ವರಾಜ್ ಇಂಡಿಯಾದ ಅಭಿರುಚಿ ಗಣೇಶ್‍ಗೆ ಮೈಗ್ರಾಪ ಬೆಂಬಲ

August 24, 2018

ಮೈಸೂರು:  ಮೈಸೂರು ನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ 1ನೇ ವಾರ್ಡ್‍ನ ಸ್ವತಂತ್ರ ಅಭ್ಯರ್ಥಿ ಟಿ.ಸಿ.ತನುಜಾ ಹಾಗೂ 42ನೇ ವಾರ್ಡ್‍ನ ಸ್ವರಾಜ್ ಇಂಡಿಯಾ ಅಭ್ಯರ್ಥಿ ಅಭಿರುಚಿ ಗಣೇಶ್ ಅವರಿಗೆ ಮೈಸೂರು ಗ್ರಾಹಕರ ಪರಿಷತ್ (ಮೈಗ್ರಾಪ) ಬೆಂಬಲ ಸೂಚಿಸಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮೈಗ್ರಾಪ ಅಧ್ಯಕ್ಷ ಎಸ್.ಡಿ.ಸಾಹುಕಾರ್, ಮೈಸೂರು ನಗರದ ಆಡಳಿತ ಯಂತ್ರವಾದ ಪಾಲಿಕೆಯಲ್ಲಿ ಒಳ್ಳೆಯ ಆಡಳಿತ ಕಾಣಬೇಕಾದರೆ ಪ್ರಾಮಾಣಿಕ ಅಭ್ಯರ್ಥಿಗಳು ಆಯ್ಕೆಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಮೈಗ್ರಾಪ ರೂಪಿಸಿದ್ದ ನಾಗರಿಕ ಪ್ರಣಾಳಿಕೆಗೆ ಸಹಿ ಹಾಕಿದ ಈ ಇಬ್ಬರು ಅಭ್ಯರ್ಥಿಗಳಿಗೆ ಮೈಗ್ರಾಪ ತನ್ನ ಬೆಂಬಲ ನೀಡಿದೆ ಎಂದು ತಿಳಿಸಿದರು.

ಆಯ್ಕೆಯಾಗುವ ಅಭ್ಯರ್ಥಿಗಳು ವಾರ್ಡಿನ ಜನತೆಯ ಆಶಯದಂತೆ ಕಾರ್ಯೋನ್ಮುಖವಾಗುವುದು, ಅಭಿವೃದ್ಧಿ ಯೋಜನೆಗಳನ್ನು ಮೈಸೂರಿನ ಮಹಾಯೋಜನೆಗೆ ಅನುಗುಣವಾಗಿರುವಂತೆ ನೋಡಿಕೊಳ್ಳುವುದು, ತೆರಿಗೆಗಳನ್ನು ತರ್ಕಬದ್ಧವಾಗಿ ಇರುವಂತೆ ಮಾಡುವುದು, ಮೈಸೂರಿನ ನೀರು ಸರಬರಾಜು ಮತ್ತು ವಿತರಣೆಗಾಗಿ ವಾರ್ಡ್‍ವಾರು ಸಮಗ್ರ ಯೋಜನೆ ತಯಾರಿಸುವುದು, ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಮುಂದಾಗುವುದು, ಅತ್ಯುತ್ತಮ ಆಡಳಿತ ವಿಧಾನಗಳನ್ನು ಅನುಸರಿಸಿ ಮೈಸೂರು ಪಾಲಿಕೆ ಆಡಳಿತದ ದಕ್ಷತೆ ಹೆಚ್ಚಿಸುವುದು ಸೇರಿದಂತೆ ಹಲವು ಅಂಶಗಳನ್ನು ಮೈಗ್ರಾಪ ನಾಗರಿಕ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದೆ. ಇದಕ್ಕೆ ಈ ಇಬ್ಬರು ಅಭ್ಯರ್ಥಿಗಳು ರುಜು ಹಾಕಿದ್ದಾರೆ ಎಂದು ವಿವರಿಸಿದರು.

ಅಭ್ಯರ್ಥಿ ಅಭಿರುಚಿ ಗಣೇಶ್ ಮಾತನಾಡಿ, ಕಳೆದ 25 ವರ್ಷಗಳಿಂದ ಪುಸ್ತಕ ಪ್ರಕಾಶನದಲ್ಲಿ ತೊಡಗಿಸಿಕೊಂಡಿದ್ದೇನೆ. ಸಾಮಾಜಿಕ ಸೇವಾ ಕಾರ್ಯಗಳಲ್ಲೂ ಪಾಲ್ಗೊಳ್ಳುತ್ತಿದ್ದೇನೆ. ರೈತ ಸಂಘ, ದಲಿತ ಸಂಘಟನೆಗಳ ಚಳವಳಿಯಲ್ಲಿ ಭಾಗವಹಿಸಿದ್ದೇನೆ. ಇದೀಗ ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿಯಾಗಿದ್ದೇನೆ. ಎರಡು ದಶಕಗಳಿಂದ ಮೈಗ್ರಾಪದ ಸಾಮಾಜಿಕ ಕಳಕಳಿ ಹಾಗೂ ಸಾರ್ವಜನಿಕ ಹಿತಾಸಕ್ತಿಯ ನಡೆಸುತ್ತಿರುವ ಕಾರ್ಯ ಚುಟುವಟಿಕೆಗಳನ್ನು ಹತ್ತಿರದಿಂದ ನೋಡಿದ್ದೇನೆ. ಪಾಲಿಕೆ ಸದಸ್ಯನಾಗಿ ಆಯ್ಕೆಯಾಗುವ ವಿಶ್ವಾಸ ಹೊಂದಿದ್ದು, ಮೈಗ್ರಾಪ ನಾಗರಿಕ ಪ್ರಣಾಳಿಕೆಗೆ ಬದ್ಧವಾಗಿ ಕೆಲಸ ಮಾಡಲಿದ್ದೇನೆ ಎಂದು ಹೇಳಿದರು.

ಮತ್ತೊಬ್ಬ ಅಭ್ಯರ್ಥಿ ಟಿ.ಸಿ.ತನುಜಾ ಮಾತನಾಡಿ, ವೃತ್ತಿಯಲ್ಲಿ ವಕೀಲರಾಗಿರುವ ನಾನು ರಾಜಕೀಯ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ತೊಡೆದು ಹಾಕಲು ಸ್ಪರ್ಧೆ ಮಾಡುತ್ತಿದ್ದು, ನನ್ನಂತಹ ಯುವ ಜನರು ಹೆಚ್ಚಿನ ಪ್ರಮಾಣದಲ್ಲಿ ರಾಜಕೀಯಕ್ಕೆ ಬಂದು ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕು. ವಾರ್ಡಿನ ನಿವಾಸಿಯೂ ಆದ ಹಿನ್ನೆಲೆಯಲ್ಲಿ ವಾರ್ಡಿನ ಅಭಿವೃದ್ಧಿಗೆ ಯಾವ ಅಂಶಗಳು ಮುಖ್ಯ ಎಂಬುದರ ಅರಿವಿದೆ. ಹೀಗಾಗಿ ಪ್ರಜ್ಞಾವಂತ ಮತದಾರರು ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ಮೈಗ್ರಾಪ ಕಾರ್ಯಕಾರಿ ಸಮಿತಿ ಸದಸ್ಯ ಅಶ್ವಿನಿ ರಂಜನ್ ಮಾತನಾಡಿ, ಪಾಲಿಕೆ ಚುನಾವಣೆ ಇನ್ನು ತಡವಾಗುವ ಸಾಧ್ಯತೆ ಇದೆ ಎಂದು ಮೈಗ್ರಾಪ ನಿರೀಕ್ಷಿಸಿತ್ತು. ಈ ಕಾರಣಕ್ಕೆ ಕಾಲಾವಕಾಶದ ಅಭಾವದಿಂದ ಕೇವಲ ಇಬ್ಬರು ಅಭ್ಯರ್ಥಿಗಳನ್ನು ಮಾತ್ರ ಸಂದರ್ಶಿಸಿ ನಮ್ಮ ಪ್ರಣಾಳಿಕೆ ಬಗ್ಗೆ ತಿಳಿಸಿಕೊಡಲಾಯಿತು. ಸಮಯವಿದ್ದರೆ, ಇನ್ನಷ್ಟು ಅಭ್ಯರ್ಥಿಗಳನ್ನು ಸಂದರ್ಶಿಸಲು ಅವಕಾಶ ಇರುತ್ತಿತ್ತು. ಮುಂದಿನ ದಿನಗಳಲ್ಲಿ ಮೈಗ್ರಾಪ ಇದನ್ನು ಮಾಡಲಿದೆ ಎಂದು ತಿಳಿಸಿದರು. ನಿವೃತ್ತ ಮೇಜರ್ ಜನರಲ್ ಒಂಬತ್ಕೆರೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »